ಬೆಂಗಳೂರು: ಅಪಘಾತವೆಸಗಿದ್ದನ್ನು ಪ್ರಶ್ನಿಸಿದ್ದಕ್ಕೆ ಕ್ಯಾಬ್ ಚಾಲಕನನ್ನು ಕಾರು ಚಾಲಕ ಬಾನೆಟ್ ಮೇಲೇರಿಸಿಕೊಂಡು 400 ಮೀಟರ್ ಎಳೆದೊಯ್ದಿರುವ ದಾರುಣ ಘಟನೆ ಮಲ್ಲೇಶ್ವರದಲ್ಲಿ ನಡೆದಿದೆ. ಕೃತ್ಯ ಎಸಗಿರುವ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.
ಚಾಲಕ ಮೊಹಮ್ಮದ್ ಮುನೀರ್ ವಿರುದ್ಧ ಎನ್‌ಸಿಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜ.15ರಂದು ಮಲ್ಲೇಶ್ವರ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಅಶ್ವತ್ಥ್ ಅವರ ಕ್ಯಾಬ್‌ಗ ಮೊಹಮ್ಮದ್ ಮುನೀರ್ ಕಾರು ಡಿಕ್ಕಿಯಾಗಿತ್ತು. ಆಗ ಕ್ಯಾಬ್ ನಿಲ್ಲಿಸುವಂತೆ ಅಶ್ವತ್ಥ್ ಅವರು ಹೇಳಿದ್ದರು. ಆದರೆ, ಮುನೀರ್ ಕಾರು ನಿಲ್ಲಿಸದೆ ಮುಂದಕ್ಕೆ ತೆರಳಲು ಪ್ರಯತ್ನಿಸಿದರು. ಆಗ, ಅಶ್ವತ್ಥ್ ಇವರ ಕಾರಿನ ಬಾನೆಟ್ ಮೇಲೆ ಹತ್ತಿ ಕಾರಿನಿಂದ ಕೆಳಕ್ಕೆ ಇಳಿಯುವಂತೆ ಕೈ ಸನ್ನೆ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಮುನೀರ್ ಕಾರು ಚಲಾಯಿಸಿಕೊಂಡು ಮುಂದೆ ಸಾಗಿದ್ದಾರೆ.
ಕಾರಿನ ಬಾನೆಟ್ ಹಿಡಿದುಕೊಂಡೇ ಅಶ್ವತ್ಥ್ ಅವರನ್ನು 400 ಮೀಟರ್ ದೂರಕ್ಕೆ ಎಳೆದೊಯ್ಯಲಾಗಿದೆ. ಸ್ಥಳೀಯರು ಹಿಂದೆ ಓಡಿಕೊಂಡು ಬಂದರೂ ಕಾರು ನಿಲ್ಲಿಸಿರಲಿಲ್ಲ. ಮಾರ್ಗಮಧ್ಯದಲ್ಲಿ ಬ್ರೇಕ್ ಹಾಕಿ ಅಶ್ವತ್ಥ್ ಅವರನ್ನು ಕೆಳಕ್ಕೆ ಬೀಳಿಸಲು ಪ್ರಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಮಲ್ಲೇಶ್ವರ ಪೊಲೀಸ್ ಠಾಣಾ ಹೊಯ್ಸಳ ಸಿಬ್ಬಂದಿ ಕಾರು ಚಾಲಕನನ್ನು ವಶಕ್ಕೆ ಪಡೆದು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಇದುವರೆಗೂ ಯಾರೂ ದೂರು ನೀಡಿಲ್ಲ. ಸದ್ಯ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ನಂತರ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.