Advertisement

ಕೋಡಿಯಲ್ಲಿ ನಿಲ್ಲದ ಉಪ್ಪುನೀರಿನ ಹರಿವು! ಕೃಷಿ ಮಾಡುವುದನ್ನೇ ನಿಲ್ಲಿಸಿದ ಅತಂತ್ರ ಕೃಷಿಕರು

11:45 PM Mar 03, 2021 | Team Udayavani |

ಕುಂದಾಪುರ: ಕೋಡಿ ಪ್ರದೇಶದಲ್ಲಿ ಉಪ್ಪುನೀರಿನ ಹರಿವು ತಡೆಗೆ ಸ್ಥಳೀಯಾಡಳಿತ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Advertisement

ಕೃಷಿ ಇಲ್ಲ
ಸಮುದ್ರದ ಉಬ್ಬರ -ಇಳಿತ ಸಂದರ್ಭ ಇಲ್ಲಿ ಹಿನ್ನೀರಾಗಿ ಉಪ್ಪು ನೀರು ಹರಿದುಬರುತ್ತದೆ. ಗದ್ದೆ, ತೋಟ, ಮನೆ ಎಂದು ನೋಡದೇ ಏಕಾಏಕಿ ನೀರು ಬರುವ ಕಾರಣ ಒಂದು ರೀತಿಯ ಅತಂತ್ರ ವಾತಾವರಣ ನಿರ್ಮಾಣವಾಗಿದೆ. ಕೆಲವು ವರ್ಷಗಳಿಂದ ಈ ಸಮಸ್ಯೆ ಇರುವ ಕಾರಣ ಈ ಭಾಗದ ಜನ ಕೆಲವು ಪ್ರದೇಶದಲ್ಲಿ ಕೃಷಿ ಮಾಡುವುದನ್ನೇ ನಿಲ್ಲಿಸಿದ್ದಾರೆ. ಮಾಡಿದ ಕೃಷಿ ಉಪ್ಪು ನೀರಿನ ದಾಂಗುಡಿಯಿಂದಾಗಿ ಫ‌ಸಲು ಕೈಗೆ ದೊರೆಯುತ್ತಿಲ್ಲ. ತೆಂಗಿನ ಮರಗಳು ಬರಿದಾಗಿವೆ. ಭತ್ತದ ಗದ್ದೆ ಬಿಕೋ ಎನ್ನುತ್ತಿದೆ.

ಕುಡಿಯುವ ನೀರು
ಸಣ್ಣ ಮೊತ್ತದಲ್ಲಿ ತಡೆಗೋಡೆ ರಚಿಸಿದರೆ ಉಪ್ಪು ನೀರು ಮನೆಗೆ ನುಗ್ಗುವುದನ್ನು ತಡೆಗಟ್ಟಬಹುದು. ಕೋಡಿಯಲ್ಲಿ ನಿರ್ಮಾಣವಾಗುತ್ತಿರುವ ಟ್ಯಾಂಕ್‌ ಪೂರ್ಣವಾಗಿದ್ದು ಕುಡಿಯುವ ನೀರಿನ ಯೋಜನೆ ಬೇಗ ಮುಕ್ತಾಯವಾದರೆ ಇಲ್ಲಿನ ಜನತೆಗೆ ಕುಡಿಯಲು ಶುದ್ಧ ನೀರಾದರೂ ದೊರೆಯುತ್ತದೆ. ಅದಿಲ್ಲವಾದರೆ ಇಲ್ಲಿನವರು ಕುಡಿಯುವ ನೀರಿಗಾಗಿ ದೂರ ಪ್ರದೇಶಕ್ಕೆ ತೆರಳುತ್ತಿದ್ದಾರೆ. ನಿಂತ ನೀರಿನಲ್ಲಿ ಸಂಜೆಯ ವೇಳೆಯಂತು ದೊಡ್ಡ ದೊಡ್ಡ ಗಾತ್ರದ ಸೊಳ್ಳೆಗಳ ಕಾಟ. ಹಾಗಾಗಿ ಮಕ್ಕಳು, ಹಿರಿಯರ ಆರೋಗ್ಯದ ಕುರಿತೂ ಜನ ತಲ್ಲಣಗೊಂಡಿದ್ದಾರೆ.

ಭರವಸೆ
ಇಲ್ಲಿನ ಸಮಸ್ಯೆಗಳ ಕುರಿತು ಉದಯವಾಣಿ ಸುದಿನ ವರದಿ ಮಾಡಿತ್ತು. ಪುರಸಭೆ ಅಧ್ಯಕ್ಷರ ನೇತೃತ್ವದ ತಂಡ ವಿವಿಧೆಡೆ ಭೇಟಿ ಮಾಡಿತ್ತು. ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಅಧಿಕಾರಿಗಳ ತಂಡವೂ ಪ್ರತ್ಯೇಕ ಭೇಟಿ ಮಾಡಿತ್ತು. ಪರಿಹಾರ ಕಲ್ಪಿಸುವ ಭರವಸೆ ದೊರೆತಿದೆ. ಅನುಷ್ಠಾನವೇ ಆಗಿಲ್ಲ. ಪುರಸಭೆ ಅಧ್ಯಕ್ಷರು ಶಾಸಕರಿಗೆ ಮನವಿ ನೀಡಿದ್ದು ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರು ಮಾಡಿಸುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ಅದಕ್ಕೂ ಮುನ್ನ ಪುರಸಭೆ ತಾತ್ಕಾಲಿಕವಾಗಿಯಾದರೂ ಯಾವುದಾದರೂ ತುರ್ತು ಕ್ರಮ ಕೈಗೊಳ್ಳಲಿ ಎನ್ನುವುದು ಇಲ್ಲಿನವರ ಆಶಯ. ಪುರಸಭೆಗೆ ಹೊಸ ಆಡಳಿತ ಬಂದಿದ್ದು ಸ್ಥಳೀಯರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಿದೆ ಎಂಬ ನಂಬಿಕೆಯಲ್ಲಿ ಇಲ್ಲಿನ ಜನರಿದ್ದಾರೆ.

ಎಷ್ಟು ಹೇಳಿದರೂ ಅಷ್ಟೇ
ಅದೆಷ್ಟು ಬಾರಿ ಹೇಳಿದರೂ ಇಲ್ಲಿನ ಸಮಸ್ಯೆ ಇತ್ಯರ್ಥ ವಾಗುವಂತೆ ಕಾಣುತ್ತಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣಾರೆ ನೋಡಿಯೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಉಬ್ಬರ ಇಳಿತದ ಸಂದರ್ಭ ಸಮಸ್ಯೆ ವಿಪರೀತ ವಾಗುತ್ತದೆ. ಮನೆಯೊಳಗೆ ನೀರು ನುಗ್ಗುತ್ತದೆ. ಸಣ್ಣ ಮೊತ್ತದಲ್ಲಿ ಆಗುವ ತಾತ್ಕಾಲಿಕ ಕಾಮಗಾರಿ ಮಾಡಿ ಸಮಸ್ಯೆಗೆ ಪರಿಹಾರ ಕಂಡು ಹುಡುಕಲು ಕೂಡಾ ಪುರಸಭೆ ಮನ ಮಾಡುತ್ತಿಲ್ಲ ಎನ್ನುವುದು ವಿಷಾದನೀಯ.
– ಕೋಡಿ ಅಶೋಕ್‌ ಪೂಜಾರಿ ಕೋಡಿ ನಿವಾಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next