Advertisement

ನದಿ ತೀರದ ಜನತೆಯಲ್ಲಿ ನಿಲ್ಲದ ಆತಂಕ

06:15 PM Aug 03, 2021 | Nagendra Trasi |

ಮುದ್ದೇಬಿಹಾಳ: ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದಿಂದ ಕೃಷ್ಣಾ ನದಿಗೆ ಹರಿಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ಆಗಿದೆ. ಆದರೂ ನದಿ ತೀರದ ಜನತೆಯಲ್ಲಿ ಆತಂಕ ಮುಂದುವರಿದಿದೆ. ನದಿಯಲ್ಲಿ ಮತ್ತೆ ಯಾವಾಗ ನೀರು ಪ್ರವಾಹದ ರೂಪದಲ್ಲಿ ಬಂದು ಅಪ್ಪಳಿಸುತ್ತದೆ ಎಂದು ಚಿಂತಿಸುತ್ತಲೇ ಕಾಲ ಕಳೆಯುವಂಥ ಪರಿಸ್ಥಿತಿಗೆ ಜನ ಸಿಲುಕಿದ್ದಾರೆ.

Advertisement

2-3 ದಿನಗಳ ಹಿಂದೆ 4.20 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಹರಿಸಿದ ಪರಿಣಾಮ ನದಿ ತೀರದ ಗ್ರಾಮಗಳಾದ ನಾಗರಾಳ, ಯರಝರಿ, ಮುದೂರ, ದೇವೂರ, ಕುಂಚಗನೂರ, ಕಮಲದಿನ್ನಿ, ಗಂಗೂರ, ತಂಗಡಗಿ, ಬೈಲಕೂರ ಗ್ರಾಮಗಳ ವ್ಯಾಪ್ತಿಯ ನೂರಾರು ಎಕರೆ ಜಮೀನಿನಲ್ಲಿ ನೀರು ನಿಂತಿತ್ತು. ಕೆಲ ಗ್ರಾಮಗಳಲ್ಲಿ ಮನೆಗಳ ಅಂಚಿನವರೆಗೂ ನೀರು ಹರಿದು ಬರತೊಡಗಿತ್ತು. ಇಳಿಜಾರು ಇದ್ದೆಡೆ ಊರೊಳಕ್ಕೂ ನುಗ್ಗಿ ಆತಂಕ ಸೃಷ್ಟಿಸಿತ್ತು.

ತಂಗಡಗಿ ಭಾಗದ ಕುಂಚಗನೂರ, ಕಮಲದಿನ್ನಿ ಸಂಪರ್ಕಿಸುವ ರಸ್ತೆ ನೀರಲ್ಲಿ ಮುಳುಗಿ ಎರಡೂ ಗ್ರಾಮಗಳ ಮಧ್ಯೆ ಸಂಪರ್ಕ ಕಡಿತಗೊಂಡಿತ್ತು. ಗಂಗೂರ ಗ್ರಾಮದ ಹೊರ ವಲಯದಲ್ಲಿರುವ ಅಡವಿ ಸಿದ್ದೇಶ್ವರ ದೇವಸ್ಥಾನ ಜಲಾವೃತಗೊಂಡಿತ್ತು. ದೇವಸ್ಥಾನ ಪಕ್ಕದ ಸಂಪರ್ಕ ರಸ್ತೆಯಲ್ಲೂ ನೀರು ನುಗ್ಗಿತ್ತು. ಯರಝರಿ ಭಾಗದ ನಾಗರಾಳ, ಹಂಡರಗಲ್‌ ಸಂಪರ್ಕಿಸುವ ರಸ್ತೆಯಲ್ಲೂ ನೀರು ಬಂದು ಸಂಚಾರಕ್ಕೆ ಸಮಸ್ಯೆ ಆಗಿತ್ತು.

ಆದರೆ ರವಿವಾರ ಸಂಜೆಯಿಂದ ನದಿಗೆ ಹರಿಸುವ ನೀರಿನ ಪ್ರಮಾಣವನ್ನು ಅರ್ಧದಷ್ಟು ಕಡಿತಗೊಳಿಸಿದ್ದರಿಂದ ನದಿ ದಂಡೆಯಲ್ಲಿ ಪ್ರವಾಹದಂತೆ ನಿಂತಿದ್ದ, ಅಲ್ಲಲ್ಲಿ ಜಮೀನು, ಹಳ್ಳಿಗಳಿಗೆ ನುಗ್ಗಿದ್ದ ನೀರು ನಿಧಾನವಾಗಿ ಹಿಂದೆ ಸರಿದಿದೆ. ಆದರೂ ಮತ್ತೆ ಯಾವಾಗ ನೀರಿನ ಮಟ್ಟ ಏರುತ್ತದೆ ಅನ್ನೋದನ್ನು ಹೇಳಲು ಬರೊಲ್ಲ. ಪ್ರವಾಹದ ಆತಂಕ ದೂರವಾಗುವತನಕ ನದಿ ದಂಡೆ ಗ್ರಾಮಗಳ ಜನರು ಸದಾ ಜಾಗೃತಾವಸ್ಥೆಯಲ್ಲೇ ಇರಬೇಕು ಎಂದು ತಾಲೂಕಾಡಳಿತ ಎಲ್ಲರಿಗೂ ತಿಳಿಹೇಳಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

600 ಹೆಕ್ಟೇರ್‌ ಬೆಳೆ ಹಾನಿ: ಕೃಷ್ಣೆಗೆ ಪ್ರವಾಹ ಬಂದಿದ್ದರಿಂದ ನದಿ ತೀರ ವ್ಯಾಪ್ತಿಯ ಅಂದಾಜು 600 ಹೆಕ್ಟೇರ್‌ ಫಲವತ್ತಾದ ಜಮೀನುಗಳಲ್ಲಿ ನೀರು ನಿಂತು ಕಬ್ಬು, ಸಜ್ಜೆ, ಸೂರ್ಯಕಾಂತಿ, ಹೆಸರು ಸೇರಿ ಹಲವು ರೀತಿಯ ಬೆಳೆಗಳು ಹಾನಿಗೊಳಗಾಗಿವೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಪ್ರವಾಹದ ನೀರು ಇಳಿದ ಮೇಲೆ ನಿಜವಾದ ಹಾನಿಯ ನೈಜ ಚಿತ್ರಣ ಸಿಗಲಿದೆ ಎಂದು ಅವರು ತಿಳಿಸಿದ್ದರೂ ನೀರು ಇಳಿದ ನಂತರ ಅಲ್ಲಿನ ಪ್ರದೇಶವೆಲ್ಲ ಕೆಸರಿನಿಂದ ತುಂಬಿಕೊಂಡು ಸಮೀಕ್ಷೆಗೂ ಅಡ್ಡಿ ಉಂಟು ಮಾಡಿದೆ. ಹೀಗಾಗಿ ತಕ್ಷಣಕ್ಕೆ ಹಾನಿಯ ನಿಖರ ಮಾಹಿತಿ ಲಭ್ಯವಾಗದಿದ್ದರೂ ತಜ್ಞ ರೈತರ ಮುಖಾಂತರ ಹಾನಿಯ ಅಂದಾಜನ್ನು ಅಧಿಕಾರಿಗಳು ಸಂಗ್ರಹಿಸಿ ಮೇಲಧಿಕಾರಿಗಳಿಗೆ ಕಳಿಸಿಕೊಟ್ಟಿದ್ದಾರೆ.

Advertisement

ಹಿಂದೆ ಸರಿದ ನೀರು-ಸದ್ಯಕ್ಕಿಲ್ಲ ಆತಂಕ: ನದಿ ತೀರದ ಹಳ್ಳಿಗಳ ಪೈಕಿ ಮುದೂರ, ಗಂಗೂರ, ದೇವೂರ, ಬೈಲಕೂರ, ಹಡಗಲಿ, ನಾಗರಾಳ, ಹಂಡರಗಲ್ಲ, ಹುನಕುಂಟಿ ಗ್ರಾಮ ವ್ಯಾಪ್ತಿಯಲ್ಲಿ ಮನೆಗಳಿಗೆ ಧಕ್ಕೆ ಆಗುವ ಸಂಭವ ಹೆಚ್ಚಾಗಿತ್ತು. ಇದೀಗ ನೀರು ಹಿಂದೆ ಸರಿದಿದ್ದರಿಂದ ಆತಂಕ ಸದ್ಯಕ್ಕೆ ದೂರವಾಗಿದೆ. ಆದರೆ ನೀರು ನಿಂತ ಜಾಗದಲ್ಲಿ ಭಾರಿ ಪ್ರಮಾಣದ ಕೆಸರು, ಕೊಳಚೆ ತುಂಬಿಕೊಂಡಿರುವುದು ನಿತ್ಯದ ಚಟುವಟಿಕೆಗಳಿಗೆ ಅವಕಾಶ ಸಿಗದಂತಾಗಿದೆ. ಆಂತರಿಕ ರಸ್ತೆಗಳ ಮೂಲಕವೂ ಊರೊಳಕ್ಕೆ ನೀರು ನುಗ್ಗಿ ಆತಂಕ ಸೃಷ್ಟಿಸಿದ್ದ ದೇವೂರು, ಗಂಗೂರು ಗ್ರಾಮಗಳಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ರಸ್ತೆ ಮೇಲೆ ನಿಂತಿದ್ದ ನೀರೂ ಹಿಂದಕ್ಕೆ ಸರಿದು ಸಂಚಾರ ಸರಳಗೊಂಡಿದೆ.

ಸಾಂಕ್ರಾಮಿಕ ರೋಗಗಳ ಹಾವಳಿ: ಪ್ರವಾಹ ನಿಯಂತ್ರಣಕ್ಕೆ ಬಂದರೂ ಎಲ್ಲೆಲ್ಲಿ ನೀರು ನಿಂತಿತ್ತೋ ಅಲ್ಲೆಲ್ಲ ಕೊಳಚೆ ಸೃಷ್ಟಿಗೊಂಡು ಸೊಳ್ಳೆಗಳು, ವಿಷಕಾರಿ ಜಂತುಗಳ ಹಾಗೂ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗುವ ಸಂಭವ ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಅಂಥ ಪರಿಸ್ಥಿತಿ ತಲೆದೋರಿದಲ್ಲಿ ಬಾಧಿ ತ ಜನರಿಗೆ ತುರ್ತು ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರ ತಂಡ ಸನ್ನದ್ಧವಾಗಿದೆ. ತಾಲೂಕು ಆರೋಗ್ಯ ಇಲಾಖೆಯೂ ಇಂಥ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಿದೆ.

ನೋಡಲ್‌ ಅಧಿಕಾರಿಗಳಿಂದ ಪರಿಶೀಲನೆ: ಬಾಧಿತ ಗ್ರಾಮಗಳ ಗ್ರಾಪಂಗೆ ನೋಡಲ್‌ ಅ ಧಿಕಾರಿಗಳನ್ನು ನೇಮಿಸಲಾಗಿದೆ. ಇವರು ದಿನದ 24 ಗಂಟೆಯೂ ಪರಿಸ್ಥಿತಿಯ ಅವಲೋಕನದಲ್ಲಿದ್ದಾರೆ. ಆಯಾ ನೋಡಲ್‌ ಅಧಿಕಾರಿಗಳು ತಮಗೆ ನಿಗದಿಪಡಿಸಿದ ಗ್ರಾಮಗಳಿಗೆ ಮೇಲಿಂದ ಮೇಲೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿ ಆತಂಕ ದೂರ ಮಾಡತೊಡಗಿದ್ದಾರೆ. ಪರಿಸ್ಥಿತಿ ಕೈ ಮೀರಿದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆಯೂ ನಿಗಾ ವಹಿಸಲಾಗಿದೆ. ತಹಶೀಲ್ದಾರ್‌, ತಾಲೂಕು ಮಟ್ಟದ ಅಧಿಕಾರಿಗಳು ನದಿ ದಂಡೆಯ ಗ್ರಾಮಗಳಲ್ಲಿ ಸಂಚರಿಸುತ್ತ ಪ್ರವಾಹ ಮತ್ತು ಆನಂತರದ ಪರಿಣಾಮಗಳ ಕಡೆ ಹೆಚ್ಚು ಗಮನ ವಹಿಸಿದ್ದಾರೆ.

ಸದ್ಯ ನದಿಯಲ್ಲಿ ನೀರು ಕಡಿಮೆಯಾಗಿ ಪ್ರವಾಹದ ಆತಂಕ ದೂರವಾಗಿದೆ. ಆದರೂ ಸಂಭವನೀಯ ಪರಿಸ್ಥಿತಿ ಎದುರಿಸಲು ತಾಲೂಕಾಡಳಿತ ಜಾಗ್ರತೆಯಿಂದಿದೆ. ನೋಡಲ್‌ ಅಧಿಕಾರಿಗಳ ತಂಡ ಎಲ್ಲೆಡೆ ನಿಗಾ ವಹಿಸಿದೆ. ಏನಾದರೂ ತೊಂದರೆ ಕಂಡು ಬಂದಲ್ಲಿ ತಕ್ಷಣ ಸ್ಪಂದಿಸಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ.
ಬಿ.ಎಸ್‌.ಕಡಕಭಾವಿ,
ತಹಶೀಲ್ದಾರ್‌, ಮುದ್ದೇಬಿಹಾರ

ನದಿ ದಂಡೆ ಗ್ರಾಮಗಳ ಕುಡಿವ ನೀರಿನ ಮೂಲಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಂಭವನೀಯ ಸಾಂಕ್ರಾಮಿಕ ರೋಗ ತಡೆಗಟ್ಟಲು ಮಿಲಾಥಿನ್‌ ಪೌಡರ್‌, ಪಾಗಿಂಗ್‌ ಮುಂತಾದ ಕ್ರಮ ಕೈಗೊಳ್ಳಲು ಪಿಡಿಒಗಳಿಗೆ ಪತ್ರ ಬರೆಯಲಾಗಿದೆ. ಆದರೆ ಇದುವರೆಗೂ ಈ ಕೆಲಸ ಆರಂಭಗೊಂಡಿಲ್ಲ. ಪರಿಸ್ಥಿತಿ ನೋಡಿಕೊಂಡು ಮುಂದುವರಿಯಲಾಗುತ್ತದೆ.
ಡಾ| ಸತೀಶ ತಿವಾರಿ, ತಾಲೂಕು ಆರೋಗ್ಯಾಧಿಕಾರಿ

*ಡಿ.ಬಿ. ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next