Advertisement

ತುಳು ಭಾಷೆಗೆ ಪ್ರೋತ್ಸಾಹ; ದೇವಸ್ಥಾನಗಳ ಮುಖ್ಯದ್ವಾರದಲ್ಲಿ ತುಳು ಲಿಪಿ ಬರೆಹ

03:20 PM Nov 15, 2020 | mahesh |

ಮಹಾನಗರ: ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಜನರು ಮಾತನಾಡುವ ತುಳು ಭಾಷೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರಾವಳಿಯ ಕೆಲವು ದೇವಸ್ಥಾನಗಳ ಮುಖ್ಯದ್ವಾರಗಳಲ್ಲಿ ತುಳು ಲಿಪಿ ಬರೆಹ ಅಳವಡಿಸಲಾಗುತ್ತಿದೆ.

Advertisement

ನಗರದ ಉರ್ವ ಮಾರಿಯಮ್ಮ ದೇವಸ್ಥಾನ, ಒಡಿಯೂರು, ಕುಂಜೂರು ಕ್ಷೇತ್ರಗಳಲ್ಲಿ ಈಗಾಗಲೇ ತುಳು ಲಿಪಿಯಲ್ಲಿ ದೇವಸ್ಥಾನದ ನಾಮಫಲಕವನ್ನು ಅಳವಡಿಸಲಾಗಿದೆ. ನಾಮಫಲಕದ ಕುರಿತು ಭಕ್ತರಿಂದಲೂ ಉತ್ತಮ ಪ್ರತಿಕ್ರಿಯೆಗಳು ಬರುತ್ತಿದ್ದು, ಜನರಿಗೆ ತುಳು ಲಿಪಿ ಕಲಿಕೆಯ ಬಗ್ಗೆ ಆಸಕ್ತಿ ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

ಮಂಗಳೂರು ಸಹಿತ ಕರಾವಳಿ ಭಾಗ ದಲ್ಲಿ ತುಳು ಲಿಪಿ ಬರೆಹ ಜನಪ್ರಿಯತೆ ಪಡೆಯುತ್ತಿದೆ. ಅದರಲ್ಲೂ ತುಳು ಚಲನಚಿತ್ರದ ಪೋಸ್ಟರ್‌ ಕೂಡ ತುಳು ಲಿಪಿಯಲ್ಲೇ ಬಿಡುಗಡೆಯಾಗುತ್ತಿದೆ. ನಗರದ ಕೆಲವೊಂದು ಅಂಗಡಿಗಳಲ್ಲಿ ತುಳು ಲಿಪಿಗಳಲ್ಲಿ ನಾಮಫಲಕ ಅಳವಡಿಸಲಾಗಿದೆ. ವಾಹನಗಳಲ್ಲಿ ಹೆಸರು, ವಿಸಿಟಿಂಗ್‌ ಕಾರ್ಡ್‌ ಗಳನ್ನು ತುಳು ಲಿಪಿಯಲ್ಲೇ ಬರೆಯುತ್ತಿದ್ದಾರೆ. ಇನ್ನು, ಹುಟ್ಟುಹಬ್ಬದ ಸಂಭ್ರಮದ ಕೇಕ್‌ನಲ್ಲಿ, ಮದುವೆ ಮಂಟಪದಲ್ಲಿಯೂ ತುಳು ಲಿಪಿ ಬರೆಹಗಳು ಕಾಣಸಿಗುತ್ತವೆ.

“ಜೈ ತುಳುನಾಡು’ ಸಂಘಟನೆಯು ತುಳು ಸಾಹಿತ್ಯ ಅಕಾಡೆಮಿಯ ಸಹಯೋಗ ದೊಂದಿಗೆ ದ.ಕ. ಮತ್ತು ಉಡುಪಿಯಲ್ಲಿ ತುಳು ಲಿಪಿ ಕಲಿಸುವ ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತಿದೆ. ಈಗಾಗಲೇ ಆನ್‌ಲೈನ್‌, ಆಫ್‌ಲೈನ್‌ ಮುಖೇನ ತುಳು ಲಿಪಿ ಕಲಿಸ ಲಾಗುತ್ತಿದೆ. ಉಭಯ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಈಗಾಗಲೇ ತರಗತಿಗಳನ್ನು ಆಯೋಜಿಸಲಾಗಿದ್ದು, ಸುಮಾರು 400 ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.

ವಾಟ್ಸ್‌ಆ್ಯಪ್‌ ಗ್ರೂಪ್‌
ವಾಟ್ಸ್‌ಆ್ಯಪ್‌ ಮೂಲಕವೂ ತುಳು ಕಲಿಸಲಾಗುತ್ತಿದೆ. ಇದಕ್ಕೆಂದು ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಗ್ರೂಪ್‌ ಮಾಡಲಾಗಿದೆ. ಪುರುಷರ, ಮಹಿಳೆಯರ ಪ್ರತ್ಯೇಕ 47 ಗ್ರೂಪ್‌ಮಾಡಲಾಗಿದೆ. ಒಂದು ಗ್ರೂಪ್‌ನಲ್ಲಿ ಸರಾಸರಿ 35 ಮಂದಿ ಇದ್ದಾರೆ. ತುಳು ಲಿಪಿಯಲ್ಲಿ 4 ಶಬ್ದಗಳನ್ನು ಕಲಿಸಲಾಗುತ್ತಿದೆ. ಅದಕ್ಕೆ ಸಂಬಂಧಪಟ್ಟ ವೀಡಿಯೋ, ಸಂದೇಶ ರವಾನಿಸಲಾಗುತ್ತಿದೆ.

Advertisement

ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಸಾರ್ವಜನಿಕರು ಕೂಡ ಈ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟು ಆರು ವಾರಗಳ ಬಳಿಕ 100 ಅಂಕಗಳಿಗೆ ತುಳು ಲಿಪಿ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಂದಿಗೆ ಬಹುಮಾನ ನೀಡಲಾಗುತ್ತಿದೆ. ಕಲಿಕೆ ಉಚಿತ ವಾಗಿದ್ದು, ಇದೇ ವೇಳೆ ತುಳು ಲಿಪಿಗೆ ಅಭ್ಯಾಸ ಪುಸ್ತಕಗಳನ್ನು ಸಂಘಟನೆ ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next