ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಚಿಲ್ಲರೆಹೂಡಿಕೆದಾರರಿಗೆ ಕೇಂದ್ರ ಸರ್ಕಾರ ವಿಶಿಷ್ಟ ಅನುಕೂಲಗಳನ್ನು ಒದಗಿಸಿದೆ. ಈ ಹೂಡಿಕೆದಾರರು 80ಸಿ ಅಡಿಯಲ್ಲಿ ಆದಾಯ ತೆರಿಗೆ ರಿಯಾಯಿತಿಯನ್ನು ಪಡೆಯಲಿದ್ದಾರೆ. ಸದ್ಯ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳಿಗೆ ಈ ಸೌಲಭ್ಯವಿದೆ. ಭಾರತ್ 22 ಹಾಗೂ ಸಿಪಿಎಸ್‌ಇ ಇಟಿಎಫ್ಗೂ ಈ ಸೌಲಭ್ಯವನ್ನು ವಿಸ್ತರಿಸಿರುವುದು ಕೇಂದ್ರ ಸರ್ಕಾರದ ಬಂಡವಾಳ ಹಿಂಪಡೆತ ಯೋಜನೆಗೆ ಪೂರಕವಾಗಿದೆ. ಕೇಂದ್ರ ಸರ್ಕಾರವು 1.05 ಲಕ್ಷ ಕೋಟಿ ರೂ. ಹೂಡಿಕೆ ಹಿಂಪಡೆತ ಯೋಜನೆಯನ್ನು ಹೊಂದಿದೆ. ಸದ್ಯ ಇಎಲ್‌ಎಸ್‌ಎಸ್ ಅಡಿಯಲ್ಲಿ 1 ಲಕ್ಷ ರೂ.ಗಿಂತ ಹೆಚ್ಚು ಆದಾಯಕ್ಕೆ ಶೇ. 10ರ ತೆರಿಗೆ ವಿಧಿಸಲಾಗುತ್ತದೆ.
ಚಿನ್ನ, ಬೆಳ್ಳಿ ತುಟ್ಟಿ: ಚಿನ್ನ, ಬೆಳ್ಳಿ ಹಾಗೂ ಇತರ ಹಲವು ಅಮೂಲ್ಯ ಸಾಮಗ್ರಿಗಳ ಮೇಲೆ ಆಮದು ಸುಂಕ ಏರಿಕೆ ಮಾಡಲಾಗಿದೆ. ಸದ್ಯ ಚಿನ್ನದ ಮೇಲೆ ಶೇ. 10 ಸೀಮಾ ಸುಂಕವಿದೆ. ಇದನ್ನು ಶೇ. 12.5 ಕ್ಕೆ ಏರಿಕೆ ಮಾಡಲಾಗಿದೆ. ಬಜೆಟ್‌ಗೂ ಮುನ್ನ ಆಭರಣ ಉದ್ಯಮಿಗಳು ಸೀಮಾ ಸುಂಕ ಇಳಿಕೆ ಮಾಡುವಂತೆ ಆಗ್ರಹಿಸಿದ್ದರು. ಆದರೆ ಸರ್ಕಾರ ಇದಕ್ಕೆ ಸೊಪ್ಪು ಹಾಕಿದಂತಿಲ್ಲ. ವಿಶ್ವದಲ್ಲೇ ಭಾರತವು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಹಾಗೂ ಬೆಳ್ಳಿ ಆಮದು ಮಾಡಿಕೊಳ್ಳುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಆಮದು ಪ್ರಮಾಣ ಇಳಿಕೆ ಕಾಣುತ್ತಿದೆ. ಈ ಸುಂಕ ಏರಿಕೆಯಿಂದಾಗಿ ಇನ್ನಷ್ಟು ಆಮದು ಇಳಿಕೆಯಾಗುವ ಸಾಧ್ಯತೆಯಿದೆ.
ಕೊರತೆ ನೀಗಿಸಲು ವಿದೇಶದಿಂದ ಸಾಲ: ಕುಸಿಯುತ್ತಿರುವ ಆರ್ಥಿಕತೆಗೆ ಇನ್ನಷ್ಟು ಹೊರೆ ಹೇರದಿರಲು ನಿರ್ಧರಿಸಿರುವ ನರೇಂದ್ರ ಮೋದಿ ಸರ್ಕಾರ ವೆಚ್ಚ ಹಾಗೂ ಆದಾಯವನ್ನು ಸರಿದೂಗಿಸಲು ವಿದೇಶದ ಸಾಲವನ್ನು ಆಧರಿಸಲು ನಿರ್ಧರಿಸಿದೆ. ಜಿಡಿಪಿಗೆ ವಿತ್ತೀಯ ಕೊರತೆ ಶೇ. 3.3 ಕ್ಕೆ ಇಳಿಸಲು ನಿರ್ಧರಿಸಲಾಗಿದ್ದು , ಈ ಹಿಂದೆ ಶೇ. 3.4 ಗುರಿ ಹೊಂದಲಾಗಿತ್ತು. 7 ಲಕ್ಷ ಕೋಟಿ ರೂ. ಸಾಲವನ್ನು ಕೇಂದ್ರ ಸರ್ಕಾರ ತರುವ ಪ್ರಸ್ತಾವನೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದು ಹೂಡಿಕೆದಾರರಲ್ಲಿ ಆತಂಕ್ಕೆ ಕಾರಣವಾಗಿದೆ.
ಫೈಲಿಂಗ್ ಸರಳ: ಆದಾಯ ತೆರಿಗೆ ಪಾವತಿಯನ್ನು ಇನ್ನಷ್ಟು ಸುಲಭಗೊಳಿಸಲು ಮೊದಲೇ ಭರ್ತಿ ಮಾಡಿದ ನಮೂನೆಗಳನ್ನು ಒದಗಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಈ ಸಂಬಂಧ ಮ್ಯೂಚುವಲ್ ಫಂಡ್, ರಿಜಿಸ್ಟ್ರಾರ್, ಬ್ಯಾಂಕ್‌ಗಳಿಂದಲೂ ಮಾಹಿತಿಯನ್ನು ಪಡೆಯಲು ನಿರ್ಧರಿಸಲಾಗಿದೆ. ನಮೂನೆಗಳನ್ನು ಐಟಿ ವೆಬ್‌ಸೈಟ್‌ನಿಂದ ಜನರು ಡೌನ್‌ಲೋಡ್ ಮಾಡಬಹುದು.