Advertisement

ಸಾಂಪ್ರದಾಯಿಕ ಕುಸ್ತಿ ಪಂದ್ಯಾವಳಿಗೆ ಬೇಕು ಉತ್ತೇಜನೆ

06:25 AM Jun 29, 2018 | |

ಮೈಸೂರು: ಆಧುನಿಕ ಜಿಮ್‌ಗಳ ಭರಾಟೆ ಒಂದೆಡೆಯಾದರೆ, ಸಾಂಪ್ರದಾಯಿಕ ಕುಸ್ತಿ ಪಂದ್ಯಾವಳಿಗಳಿಗೆ
ಸಾರ್ವಜನಿಕರಿಂದ ಉತ್ತೇಜನ ದೊರೆಯದಿರುವುದರಿಂದ ಗರಡಿ ಮನೆಗಳು ತನ್ನ ಅಸ್ತಿತ್ವ ಉಳಿಸಿಕೊಳ್ಳಲು
ಹೆಣಗಾಡುತ್ತಿವೆ.

Advertisement

ಮಹಾರಾಜರಿಂದ ಸಾಕಷ್ಟು ಉತ್ತೇಜನ ದೊರೆಯುತ್ತಿದ್ದರಿಂದ ಮೈಸೂರು ನಗರವನ್ನು ಗರಡಿ ಮನೆಗಳ ತವರು ಎಂದೇ ಕರೆಯಲಾಗುತ್ತಿತ್ತು.

ಮೈಸೂರು ನಗರದಲ್ಲಿ 70ಕ್ಕೂ ಹೆಚ್ಚು ಗರಡಿ ಮನೆಗಳಿದ್ದವು. ಪ್ರತಿ ವಾರ ನಡೆಯುತ್ತಿದ್ದ ಪಂದ್ಯಗಳಿಗೂ ಜನ ಕಿಕ್ಕಿರಿದು ಸೇರುತ್ತಿದ್ದರು. ಈಗ ಸರ್ಕಾರವೂ ದಸರಾ ವೇಳೆ ಕುಸ್ತಿ ಪಂದ್ಯಾವಳಿ ಆಯೋಜಿಸಿ ವಿಜೇತರಿಗೆ ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದೆ. ಆದರೆ, ಮೊದಲಿನಷ್ಟು ಜನರು ಆಸಕ್ತಿ ಹೊಂದಿಲ್ಲ ಎನ್ನುತ್ತಾರೆ ಜಯ ಚಾಮರಾಜ ಒಡೆಯರ್‌ ಗರಡಿ ಸಂಘದ ಸಾಹುಕಾರ್‌ ಶ್ರೀ ಎಸ್‌.ಚನ್ನಯ್ಯ.

ನಗರದ ಕೆ.ಆರ್‌.ಮೊಹಲ್ಲಾದಲ್ಲಿ ಭೂತಪ್ಪನ ಗರಡಿ, ಬಂಡಿಕೇರಿ ಗರಡಿ, ಹೊಸ ಬಂಡಿಕೇರಿ ಗರಡಿ, ಪೊಲೀಸ್‌
ಲಿಂಗಣ್ಣನವರ ಗರಡಿ, ಗೋಪಾಲ ಸ್ವಾಮಣ್ಣನವರ ಗರಡಿ ಸೇರಿ ಪ್ರತಿ ಮೊಹಲ್ಲಾದಲ್ಲಿ 4 ರಿಂದ 5 ಗರಡಿ ಮನೆಗಳು ಇದ್ದವು. ಸಾರ್ವಜನಿಕರ ನಿರಾಸಕ್ತಿಯಿಂದ 70 ಗರಡಿ ಮನೆಗಳು 40ಕ್ಕೆ ಇಳಿದಿವೆ. ಕೆಲವು ಜಿಮ್‌ ಆಗಿ ಮಾರ್ಪಟ್ಟಿವೆ. ಗರಡಿ ಮನೆಯ ಕರೋಲ ಗದೆ, ಸಾಂಬ್ರಾಣಿ ಕಲ್ಲು, ಗರನಗಕಲ್ಲು, ಕೈಪಿಡಿ, ಕಠಾರಿ ಇವೆಲ್ಲಾ ಎಲ್ಲಿ ಸಿಗುತ್ತವೆ? ಎನ್ನುತ್ತಾರೆ ಫೈ.ಮಹದೇವ.

ದಸರೆಯ ಅಂಬಾ ಪೂಜೆ ಬಳಿಕ ಮಟ್ಟಿಯಲ್ಲಿ ಫ‌ಲ(ತೆಂಗಿನಕಾಯಿ) ಹೂತು, ಅದನ್ನು ಮಟ್ಟಿಯಿಂದ ಬರಿಗೈಲಿ ಪತ್ತೆಮಾಡಿ ಹೊರ ತೆಗೆಯುವ ಸ್ಪರ್ಧೆ, ಸಹಪಾಠಿಗಳ ಮೇಲೆ ಕುಸ್ತಿ ಮಾಡಿ ಜಯಿಸುವ ಸ್ಪರ್ಧೆಗಳನ್ನು ಏರ್ಪಾಡು ಮಾಡಲಾಗುತ್ತದೆ. ಬಳಿಕ ಮುತ್ತೈದೆಯರ ಪೂಜೆ ಸಾಂಪ್ರದಾಯಿಕವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಪ್ರತಿ ಜಾತ್ರೆಗಳಲ್ಲೂ ಕುಸ್ತಿ ಪಂದ್ಯಾವಳಿ ಆಯೋಜಿಸಿ ಉತ್ತೇಜನ ನೀಡಲಾಗುತ್ತಿದೆ.

Advertisement

ಆದರೆ, ಮೈಸೂರು ಭಾಗದಲ್ಲಿ ಸುತ್ತೂರು ಜಾತ್ರೆ ಹಾಗೂ ಬೆಳಗೊಳ ಜಾತ್ರೆ ಹೊರತುಪಡಿಸಿದರೆ ಉಳಿದ ಜಾತ್ರೆ 
ಗಳಲ್ಲಿ ಕುಸ್ತಿ ಪಂದ್ಯಾವಳಿಗೆ ಜಾಗವೇ ಇಲ್ಲ.

ಡಿ.ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಫೈಲ್ವಾನರಿಗೆ 300 ರೂ. ಮಾಸಾಶನ ಮಂಜೂರು ಮಾಡಿದ್ದರು.ಸಾಂಪ್ರದಾಯಿಕ ಕುಸ್ತಿ ಉಳಿಯಬೇಕೆಂದರೆ ಸಾರ್ವಜನಿಕರ ಉತ್ತೇಜನ ದೊರಕಬೇಕು.
 ಯ.ಫೈಲ್ವಾನ್‌ ಎಸ್‌.ಮಹದೇವ,
ಪ್ರಧಾನ ಕಾರ್ಯದರ್ಶಿ, ಶ್ರೀಜಯ ಚಾಮರಾಜ ಒಡೆಯರ್‌ ಗರಡಿ ಸಂಘ ಮೈಸೂರು

ದ.ಕ. ಜಿಲ್ಲೆಯಲ್ಲಿ 150 ಸದಸ್ಯರಿದ್ದಾರೆ: ಕರ್ಕೇರ
ಮಂಗಳೂರು:
ಮಾಜಿ ಪೈಲ್ವಾನರಿಗೆ ಮೊದಲು 500ರೂ.ಗಳ ಮಾಸಾಶನವಿತ್ತು. ನಂತರ ಹೆಚ್ಚಳ ಮಾಡುವಂತೆ ಒತ್ತಾಯ ಕೇಳಿ ಬಂತು. ಮಂಗಳೂರಿ ನಿಂದಲೂ ಸುಮಾರು ಮೂರು ಹೆಸರುಗಳನ್ನು ಮಾಸಾಶನಕ್ಕಾಗಿ ಕಳುಹಿಸಲಾಗಿತ್ತು. ಆದರೆ, ಪ್ರಸ್ತುತ ಅದರ ಸ್ಥಿತಿಗತಿ ಹೇಗಿದೆ ಎಂಬುದು ತಿಳಿದಿಲ್ಲ. ದ.ಕ.ಜಿಲ್ಲಾ ಕುಸ್ತಿ ಸಂಘದ ಅಡಿಯಲ್ಲಿ ಸುಮಾರು 150 ಸದಸ್ಯರಿದ್ದಾರೆ.

ಸುಮಾರು 7 ಕುಸ್ತಿ ವ್ಯಾಯಾಮ ಶಾಲೆಗಳಿದ್ದು, ಸರಕಾರದ ಯಾವುದೇ ಅನುದಾನ ಇಲ್ಲದೆ ಶಾಲೆ ನಡೆಸುತ್ತಿದ್ದಾರೆ. ಮಂಗಳೂರಿನಲ್ಲಿ ಕುಸ್ತಿಪಟುಗಳು, ಕ್ರೀಡಾಸಕ್ತರಿದ್ದರೂ ಸರಕಾರದ ಮಟ್ಟದಿಂದ ಪ್ರೋತ್ಸಾಹ ಸಿಗುತ್ತಿಲ್ಲ. ನಿತ್ಯ ತರಬೇತಿಗೆ ಸರಿಯಾದ ಸ್ಥಳಾವಕಾಶ, ಅಂತಾರಾಷ್ಟ್ರೀಯ ತರಬೇತುದಾರರು ಸಿಕ್ಕಲ್ಲಿ ಮಂಗಳೂರಿನ ಕುಸ್ತಿ ಪಟುಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಚಿನ್ನ ಗಳಿಸಲು ಸಮರ್ಥರಿದ್ದಾರೆ.

ಯುವತಿಯರು ಕೂಡಾ ಕುಸ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುತ್ತಾರೆ ದ.ಕ.ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ, ಪ್ರಕಾಶ್‌ ವಿ.ಕರ್ಕೇರ.

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next