Advertisement

Incentive money: ಪ್ರತೀ ಲೀಟರ್‌ ಹಾಲಿಗೆ 10 ರೂ. ಪ್ರೋತ್ಸಾಹ ಧನ!

03:27 AM Sep 27, 2024 | Team Udayavani |

ಬೆಂಗಳೂರು: ಬೆಂಗಳೂರು ನಗರ ಜಿ.ಪಂ. ವ್ಯಾಪ್ತಿಯ ಮರಸೂರು ಗ್ರಾ.ಪಂ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಪ್ರತೀ ಲೀಟರ್‌ ಮೇಲೆ 10 ರೂ. ಪ್ರೋತ್ಸಾಹ ಧನ ನೀಡುತ್ತ ಅನ್ನದಾತರ ಬೆನ್ನೆಲುಬಾಗಿ ನಿಂತಿದೆ. ಈ ಉದ್ದೇಶಕ್ಕಾಗಿಯೇ ಪ್ರತೀ ತಿಂಗಳು ಸುಮಾರು 5 ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ರೈತರ ಖಾತೆಗೆ ಜಮಾ ಮಾಡುತ್ತ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.

Advertisement

ಹೈನುಗಾರರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಬೆನ್ನೆಲುಬಾಗಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾ.ಪಂ. ಈ ಕಾರ್ಯಕ್ಕೆ ಮುಂದಾಗಿದೆ. ಪಂಚಾಯತ್‌ ಸ್ವಂತ ಅನುದಾನದಲ್ಲಿ (ತೆರಿಗೆ) ಪ್ರೋತ್ಸಾಹ ಹಣವನ್ನು ರೈತರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡುತ್ತದೆ. ಹಲವು ರೈತರು 500ರಿಂದ 5 ಸಾವಿರ ರೂ. ವರೆಗೆ ಪ್ರೋತ್ಸಾಹ ಧನ ಪಡೆಯುತ್ತಿದ್ದಾರೆ ಎಂದು ಮರಸೂರು ಗ್ರಾ.ಪಂ.ನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

50 ಲಕ್ಷ ರೂ. ಮೀಸಲು
ಹಲವು ತಿಂಗಳುಗಳಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಕಳೆದ ಆಗಸ್ಟ್‌ನಲ್ಲಿ 167 ರೈತರು 50,067 ಲೀ. ಹಾಲನ್ನು ಬಮೂಲ್‌ಗೆ ಮಾರಾಟ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಕಳೆದ ತಿಂಗಳು 5 ಲಕ್ಷ ರೂ.ಗಳನ್ನು ಪ್ರೋತ್ಸಾಹ ಧನದ ರೂಪದಲ್ಲಿ ರೈತರ ಬ್ಯಾಂಕ್‌ ಖಾತೆಗೆ ಜಮಾವಣೆ ಮಾಡಲಾಗಿದೆ ಎಂದು ಮರಸೂರು ಗ್ರಾ.ಪಂ. ಪಿಡಿಒ ಡಿ. ಮುರಳಿ ಹೇಳಿದ್ದಾರೆ. ಕಷ್ಟದಲ್ಲಿರುವ ರೈತರು ನೆಮ್ಮದಿ ಜೀವನ ನಡೆಸಲಿ ಎಂಬ ಉದ್ದೇಶದಿಂದ ಪ್ರತೀ ಲೀಟರ್‌ ಮೇಲೆ 10 ರೂ. ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ಇದಕ್ಕಾಗಿಯೇ ವರ್ಗ-1ರ ಸ್ವನಿಧಿಯಲ್ಲಿ 50 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ ಎಂದಿದ್ದಾರೆ.

ಪಶುವೈದ್ಯರಿಂದ ಪರಿಶೀಲನೆ
ಗ್ರಾ.ಪಂ.ನ ಹಾಲಿನ ಕೇಂದ್ರಕ್ಕೆ ಯಾವ ರೈತ ಪ್ರತೀ ದಿನ ಎಷ್ಟು ಲೀಟರ್‌ ಹಾಲು ಹಾಕಿದ್ದಾರೆ ಎಂಬುದನ್ನು ಹಾಲಿನ ಕೇಂದ್ರದ ಅಧಿಕಾರಿಗಳು ಪಂಚಾಯತ್‌ನ ಹಿರಿಯ ಅಧಿಕಾರಿಗಳಿಗೆ ಅಂಕಿ-ಸಂಖ್ಯೆ ಸಮೇತ ಮಾಹಿತಿ ನೀಡುತ್ತಾರೆ. ಇದಾದ ಬಳಿಕ ಪಂಚಾಯತ್‌ ವ್ಯಾಪ್ತಿಯ ಪಶು ವೈದ್ಯಾಧಿಕಾರಿಗಳು ಮರು ಪರಿಶೀಲನೆ ನಡೆಸುತ್ತಾರೆ. ಒಬ್ಬ ರೈತ ಎಷ್ಟು ಲೀಟರ್‌ ಬೇಕಾದರೂ ಹಾಲು ಹಾಕಬಹುದು. ಮಾಸಾಂತ್ಯದ ಅನಂತರ ಪ್ರೋತ್ಸಾಹ ಧನ ರೈತರ ಕೈಸೇರುತ್ತದೆ ಎಂದು ಗ್ರಾ.ಪಂ. ಆಡಳಿತ ಮಂಡಳಿ ತಿಳಿಸಿದೆ.

‘ರೈತರು ಹೈನುಗಾರಿಕೆಯಿಂದ ಹಿಂದೆ ಸರಿಯದಿರಲಿ ಎಂಬ ಸದುದ್ದೇಶದಿಂದ ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುವ ಮರಸೂರು ಗ್ರಾ.ಪಂ. ಪ್ರತೀ ಲೀ.ಗೆ 10.ರೂ. ಪ್ರೋತ್ಸಾಹ ಧನ ನೀಡುತ್ತಿದೆ. ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮರಸೂರು ಗ್ರಾ.ಪಂ. ಕಾರ್ಯ ಹೆಮ್ಮೆಪಡುವಂಥದ್ದಾಗಿದೆ.’
– ಡಾ| ಸಿ.ಎನ್‌. ಮಂಜುನಾಥ್‌, ಬೆಂ. ಗ್ರಾಮಾಂತರ ಸಂಸದ

Advertisement

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next