ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಮೇಲ್ಸೇತುವೆಯನ್ನು ತಾಂತ್ರಿಕ ಅಡಚಣೆ ಮತ್ತು ಹತ್ತಾರು ಟೀಕೆಗಳ ನಡುವೆಯೂ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತ ಗೊಳಿಸಲಾಗಿದೆ. ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಯನ್ನೂ ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಲು ಆದೇಶಿಸಿದ್ದು, ಮಳೆಯ ತೀವ್ರತೆ ಇಲ್ಲದಿದ್ದಲ್ಲಿ ಶೀಘ್ರವೇ ಸಂಚಾರ ಮುಕ್ತಗೊಳಿಸಲಾಗುವುದು ಎಂದು ಸಂಸದ ನಳಿನ್ ತಿಳಿಸಿದರು.
ತೊಕ್ಕೊಟ್ಟು ಮೇಲ್ಸೇತುವೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ಕಾನೂನು ಮತ್ತು ತಾಂತ್ರಿಕ ಕಾರಣಗಳಿಂದ ಮತ್ತು ನವಯುಗ್ ಸಂಸ್ಥೆಯ ಆರ್ಥಿಕ ಮುಗ್ಗಟ್ಟಿನಿಂದ ಕಾಮಗಾರಿ ವಿಳಂಬ ವಾಗಿತ್ತು. ಈ ವರ್ಷದ ಆರಂಭದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿ ಸಂಸ್ಥೆಗೆ 55 ಕೋಟಿ ರೂ. ಹಣ ಕಾಸು ಸೌಲಭ್ಯ ಒದಗಿಸಿದ ಬಳಿಕ ಕಾಮಗಾರಿ ಪುನರಾರಂಭಗೊಂಡು ನಿರಂತರ ನಡೆಯಿತು. ಪ್ರಧಾನಿ ಮೋದಿಯವರ ಕೇಂದ್ರ ಸರಕಾರದ ಎರಡನೇ ಅವಧಿಯಲ್ಲಿ ಎರಡು ಮೇಲ್ಸೇತುವೆಗಳು ಲೋಕಾರ್ಪಣೆಯಾಗಲಿವೆ. ಈಗ ಒಂದನ್ನು ಉದ್ಘಾಟಿ ಸಿದ್ದು, ಪಂಪ್‌ವೆಲ್ ಮೇಲ್ಸೇತುವೆ ಶೀಘ್ರದಲ್ಲೇ ಲೋಕಾರ್ಪಣೆಯಾಗುವುದು ಎಂದರು.
ಕ್ಷೇತ್ರದ ಬಿಜೆಪಿ ಅಧ್ಯಕ್ಷರು ಉಳ್ಳಾಲ ಬೈಪಾಸ್, ಕಲ್ಲಾಪು ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ಅಧಿಕಾರಿಗಳ ಜತೆಗೆ ಸಭೆಯನ್ನು ಕರೆದು ಶೀಘ್ರವೇ ಪರಿಹಾರ ಕಂಡುಕೊಳ್ಳಲು ಸೂಚಿಸುತ್ತೇನೆ. ಪಾರ್ಕಿಂಗ್, ರಿಕ್ಷಾ ಪಾರ್ಕಿಂಗ್, ಶೌಚಾಲಯ ನಿರ್ಮಿಸುವ ಚಿಂತನೆ ನಡೆಸಲಾಗುವುದು. ಸುರತ್ಕಲ್, ಕೂಳೂರು ಮಾದರಿಯಲ್ಲಿ ತೊಕ್ಕೊಟ್ಟು ಮೇಲ್ಸೇತುವೆಯೂ ಸುಂದರಗೊಳ್ಳ ಲಿದೆ ಎಂದರು.
ಈ ಸಂದರ್ಭದಲ್ಲಿ ಸಚೇತಕರಾಗಿ ಆಯ್ಕೆಯಾದ ನಳಿನ್ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಸಂತೋಷ್ ರೈ ಬೋಳಿಯಾರ್, ಸತೀಶ್ ಕುಂಪಲ, ಜಯರಾಮ ಶೆಟ್ಟಿ, ಚಂದ್ರಹಾಸ, ಚಂದ್ರಶೇಖರ್, ರವೀಂದ್ರ ಶೆಟ್ಟಿ, ಚಂದ್ರಹಾಸ ಅಡ್ಯಂತಾಯ, ಧನಲಕ್ಷ್ಮೀ ಗಟ್ಟಿ, ಅಶ್ರಫ್, ರಾಜೇಶ್ ಸುರೇಶ್ ಆಳ್ವ, ಮೋಹನ ರಾಜ್, ಮನೋಜ್ ಆಚಾರ್ಯ, ಸೀತಾರಾಮ ಬಂಗೇರ, ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ಸಂಜೀವ ಶೆಟ್ಟಿ ಅಂಬ್ಲಿಮೊಗರು, ಲಲಿತಾ ಸುಂದರ್, ಚಂದ್ರಹಾಸ ಪಂಡಿತ್ ಹೌಸ್, ಜಿತೇಂದ್ರ ಶೆಟ್ಟಿ, ಪ್ರಕಾಶ್ ಸಿಂಫೋನಿ, ಜೀವನ್ ಕುಮಾರ್, ನಮಿತಾ ಶ್ಯಾಂ, ರಾಜೀವಿ, ಆನಂದ ಶೆಟ್ಟಿ, ಹರಿಯಪ್ಪ ಸಾಲ್ಯಾನ್, ದೇವದಾಸ್, ಚರಣ್‌ರಾಜ್, ರವಿಶಂಕರ್, ಅನಿಲ್ ದಾಸ್, ಸುರೇಂದ್ರ ಶೆಟ್ಟಿ, ಹೇಮಂತ ಶೆಟ್ಟಿ ಉಪಸ್ಥಿತರಿದ್ದರು.
ಸಾಗರ್‌ಮಾಲಾದಡಿ ಪರಿಹಾರ
ಉಳ್ಳಾಲ ಕ್ರಾಸ್ ರಸ್ತೆ ಸಮಸ್ಯೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುವುದು. ಮುಂದಿನ ದಿನಗಳಲ್ಲಿ ಸಾಗರ್‌ಮಾಲಾ ಯೋಜನೆಯಡಿ ರಸ್ತೆ, ಮೇಲ್ಸೇತುವೆ ನಿರ್ಮಾಣ ಕಾರ್ಯ ಆಗಲಿದ್ದು, ಸರ್ವೀಸ್ ರಸ್ತೆಯಿಂದ ಉಳ್ಳಾಲಕ್ಕೆ ಪ್ರತ್ಯೇಕ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ತಜ್ಞರೊಡನೆ ಚರ್ಚಿಸಲಾಗುವುದು ಎಂದರು.