Advertisement

ಶೀಘ್ರ ಡಯಾಲಿಸಿಸ್‌ ಚಿಕಿತ್ಸೆಗೆ ಎರಡು ಶಿಫ್ಟ್: ಪೂಂಜ

03:18 PM Nov 08, 2018 | |

ಬೆಳ್ತಂಗಡಿ : ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದು, ಡಯಾಲಿಸಿಸ್‌ ಚಿಕಿತ್ಸೆ ಅಗತ್ಯವಿರುವ ಎಲ್ಲ ರೋಗಿಗಳಿಗೆ ಅದನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಹಾಲಿ ಲಭ್ಯವಿರುವ ಒಂದು ಶಿಫ್ಟ್‌ನ ಜತೆಗೆ ಹೆಚ್ಚುವರಿಯಾಗಿ ಎರಡು ಶಿಫ್ಟ್‌ ಆರಂಭಿಸುವ ಕುರಿತು ಮಾತುಕತೆ ನಡೆಯುತ್ತಿದ್ದು, ತಿಂಗಳೊಳಗೆ ಅದನ್ನು ಪ್ರಾರಂಭಿಸಲಾಗುವುದು ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಹೇಳಿದರು.

Advertisement

ಅವರು ಬುಧವಾರ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಸ್ಥಳಾಂತರಿತ ಡಯಾಲಿಸಿಸ್‌ ಘಟಕ, 4ನೇ ಡಯಾಲಿಸಿಸ್‌ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಹಗಲಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುತ್ತಿದ್ದು, ರಾತ್ರಿ ಶಿಫ್ಟ್‌ನ ಬೇಡಿಕೆ ಇದೆ. ಹೀಗಾಗಿ ರಾತ್ರಿ 7ರಿಂದ 12 ಹಾಗೂ ಮುಂಜಾನೆ 4ರಿಂದ 7ರ ವರೆಗೆ ಹೊಸದಾಗಿ ಶಿಫ್ಟ್‌ಗಳು ಆರಂಭಗೊಳ್ಳಲಿವೆ. ಈ ಕುರಿತು ಘಟಕವನ್ನು ನಿರ್ವಹಣೆ ಮಾಡುತ್ತಿರುವ ಕಂಪೆನಿಯೂ ಒಪ್ಪಿಗೆ ನೀಡಿದೆ. ಜತೆಗೆ ಘಟಕಕ್ಕೆ ಮೂತ್ರಾಂಗ ರೋಗ ಶಾಸ್ತ್ರಜ್ಞ ವೈದ್ಯರ ಬೇಡಿಕೆಯೂ ಇದ್ದು, 15 ದಿನಕ್ಕೊಮ್ಮೆ ಆಸ್ಪತ್ರೆಗೆ ಬರುವ ಕುರಿತು ವ್ಯವಸ್ಥೆ ಮಾಡಲಾಗುವುದು. ವೈದ್ಯರು ಯಾವಾಗ ಲಭ್ಯ ಇರುತ್ತಾರೆ ಎಂಬುದನ್ನೂ ಆಸ್ಪತ್ರೆಯ ನೋಟಿಸ್‌ ಬೋರ್ಡ್‌ನಲ್ಲಿ ಹಾಕಲಾಗುತ್ತದೆ. ಮುಂದೆ ಆಸ್ಪತ್ರೆಯ ಸಿಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿಯೂ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಶರತ್‌ ಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ| ಶಶಿಕಾಂತ್‌ ಡೋಂಗ್ರೆ, ಎಸ್‌ಕೆಜಿ ಸಂಜೀವಿನಿಯ ಆಡಳಿತಾಧಿಕಾರಿ ಬಸುದೇವ್‌ ದಾಸ್‌, ಸಂಚಾಲಕ ಕೃಷ್ಣಾನು, ಅರಿವಳಿಕೆ ತಜ್ಞ ಡಾ| ಶಶಾಂಕ್‌ ಕಾಂಬ್ಳೆ, ದಂತ ವೈದ್ಯೆ ಡಾ| ಅಜ್ಮಿಯಾ, ಡಾ| ಯೋಗೀಶ್‌, ಸಹಾಯಕ ಆಡಳಿತಾಧಿಕಾರಿ ಶ್ರೀಕಾಂತ್‌ ಹೆಗ್ಡೆ, ಶುಶ್ರೂಶಕ ಅಧೀಕ್ಷಕಿ ಸುಭಾಶಿನಿ, ಚಂದ್ರಶೇಖರ್‌, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಜಯಶ್ರೀ ಪ್ರಕಾಶ್‌, ತುಕಾರಾಮ ಬೆಳ್ತಂಗಡಿ, ಸಂತೋಷ್‌ ಶೆಟ್ಟಿ ಲಾೖಲ, ಸದಾನಂದ ಪೂಜಾರಿ ಉಂಗಿಲಬೈಲು, ಬಾಲಕೃಷ್ಣ ಶೆಟ್ಟಿ ಸವಣಾಲು, ಮೊಹಮ್ಮದ್‌ ಕುಂಞಿ ಮೊದಲಾದವರಿದ್ದರು.

ಆಟೋಮ್ಯಾಟಿಕ್‌ ಜನರೇಟರ್‌
ಆಸ್ಪತ್ರೆಯಲ್ಲಿ ಹಾಲಿ ಜನರೇಟರ್‌ ವ್ಯವಸ್ಥೆ ಇದ್ದರೂ ವಿದ್ಯುತ್‌ ಕಡಿತ ತತ್‌ಕ್ಷಣ ಜನರೇಟರ್‌ ಆಟೋಮ್ಯಾಟಿಕ್‌ ಆನ್‌ ಆಗುವ ವ್ಯವಸ್ಥೆ ಇಲ್ಲ. ಇದರಿಂದ ಡಯಾಲಿಸಿಸ್‌ ರೋಗಿಗಳಿಗೆ ತೊಂದರೆಯಾಗುತ್ತದೆ ಎಂದು ಶಾಸಕರ ಗಮನಕ್ಕೆ ತಂದಾಗ, ಎಂಜಿನಿಯರ್‌ ಅವರನ್ನು ಕರೆಸಿ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಶಾಸಕ ಹರೀಶ್‌ ಪೂಂಜ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next