Advertisement

ಜ್ಞಾನ, ಸತ್ಕರ್ಮ, ಪೀಳಿಗೆಗೆ ಆದ್ಯತೆ: ಪೇಜಾವರಶ್ರೀ ಕರೆ

11:33 AM Dec 15, 2019 | Team Udayavani |

ಉಡುಪಿ: ತುಳು ಶಿವಳ್ಳಿ ಬ್ರಾಹ್ಮಣರು ಜ್ಞಾನ, ಸತ್ಕರ್ಮ, ಮುಂದಿನ ಪೀಳಿಗೆಗೆ ಸಂಸ್ಕೃತಿಯ ಬಳುವಳಿ ಕೊಡುವ ಕರ್ತವ್ಯಕ್ಕೆ ಆದ್ಯತೆ ಕೊಡಬೇಕು ಎಂದು ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಕರೆ ನೀಡಿದರು.

Advertisement

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಆರಂಭಗೊಂಡ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.

ಶರೀರ ಶಾಶ್ವತವಲ್ಲ. ಜ್ಞಾನ ಮತ್ತು ಪೂಜೆ, ಜಪ, ದಾನಧರ್ಮ ಇತ್ಯಾದಿ ಸತ್ಕರ್ಮಗಳು ಮಾತ್ರ ಇನ್ನೊಂದು ಜನ್ಮಕ್ಕೂ ಪುಣ್ಯ ರೂಪದಲ್ಲಿ ಸಿಗುತ್ತದೆ.

ಒಂದು ದೇಶದ ಕರೆನ್ಸಿ ನೋಟು ಇನ್ನೊಂದು ದೇಶದಲ್ಲಿ ಚಲಾವಣೆಗೊಳ್ಳದಿದ್ದರೂ ಅದನ್ನು ಮಾರ್ಪಡಿಸಲು ಆಗುತ್ತದೆ. ಗಳಿಸಿದ ಹಣ ಸತ್ತ ಅನಂತರ ಬಿಟ್ಟು ಹೋಗಬೇಕು. ಪುಣ್ಯ ಮಾತ್ರ ಮಾರ್ಪಡಿಸಿದ ಕರೆನ್ಸಿ ರೀತಿಯಲ್ಲಿ ಸಾವಿನ ಬಳಿಕವೂ ನಮ್ಮ ಜತೆ ಬರುತ್ತದೆ ಎಂದು ಮಧ್ವಾಚಾರ್ಯರು ತಿಳಿಸಿದ್ದಾರೆಂದು ಸ್ವಾಮೀಜಿ ಉಲ್ಲೇಖೀಸಿದರು.

ಭರತ, ಪ್ರಹ್ಲಾದರಂತಹ ಮಕ್ಕಳು ಬೇಕು
ಭರತನನ್ನು ಕೊಟ್ಟ ಕೈಕೇಯಿಗೆ, ಪ್ರಹ್ಲಾದನ ತಂದೆ ಹಿರಣ್ಯಕಶಿಪುವಿಗೆ ಮಕ್ಕಳ ಕಾರಣದಿಂದ ನರಕ ಪ್ರಾಪ್ತಿಯಾಗಲಿಲ್ಲ. ಭರತ, ಪ್ರಹ್ಲಾದರಂತಹ ಮಕ್ಕಳ ಪೀಳಿಗೆಯನ್ನು ಸಮಾಜ ನೀಡಬೇಕಾಗಿದೆ ಎಂದು ಆಶಿಸಿದರು.

Advertisement

ವಿವಿಧ ಭಾಷೆಗಳನ್ನು ಪ್ರೀತಿಸಿದರೂ ಮಾತೃಭಾಷೆ ತುಳುವಿನ ಬಗೆಗೆ ವಿಶೇಷ ಅಭಿಮಾನ ಇರಬೇಕು. ಹಿಂದು ಸಮಾಜದೊಳಗೆ ಬ್ರಾಹ್ಮಣ ಸಮಾಜ, ಬ್ರಾಹ್ಮಣ ಸಮಾಜದೊಳಗೆ ತುಳು ಶಿವಳ್ಳಿ ಸಮಾಜ ಹೀಗೆ ಈ ಆವರಣಗಳು ಒಂದಕ್ಕೊಂದು ಪೂರಕವಾಗಿರಬೇಕು. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕವಾಗಿ ಸಮಾಜ ಗಟ್ಟಿಗೊಳ್ಳಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.

ಪಂಚಲಕ್ಷಣಗಳ ಸಮಾಜ
ತುಳು ಎಂದರೆ ತುಂಬಿ ತುಳುಕುವುದು ಎಂದರ್ಥ. ಭಾಷೆ, ಗುರು, ದೇವರು, ಭೂಮಿ, ಸಮಾಜ ಈ ಐದು ಲಕ್ಷಣಗಳನ್ನು ಸಮಾಜ ಹೊಂದಿರಬೇಕು. ತುಳು ಶಿವಳ್ಳಿ ಸಮುದಾಯಕ್ಕೆ ಲಿಪಿ ಸಹಿತ ತುಳು ಭಾಷೆ, ಗುರು ಮಧ್ವಾಚಾರ್ಯರು, ದ್ವಾರಕೆಯಿಂದ ಬಂದ ಶ್ರೀಕೃಷ್ಣ ದೇವರು, ಪರಶುರಾಮ ಸೃಷ್ಟಿಯ ಭೂಮಿ, ಸಮಾಜ ಇದೆ. ಮಧ್ವಾಚಾರ್ಯರು, ವಾದಿರಾಜರು ಬಂದ ನಮ್ಮ ಪರಂಪರೆಯ ಸಂಸ್ಕೃತಿ, ಅಂತಃಸತ್ವವನ್ನು ನಶಿಸಲು ಬಿಡಬಾರದು. ರಾಜಕಾರಣಿಗಳೂ ಸಮ್ಮೇಳನಕ್ಕೆ ಬರುವಂತಾಗಬೇಕು. ಮತ ಬ್ಯಾಂಕ್‌ ಶಕ್ತಿಯನ್ನೂ ಉಳಿಸಿಕೊಳ್ಳಬೇಕು ಎಂದು ಸಮ್ಮೇಳನವನ್ನು ಉದ್ಘಾಟಿಸಿದ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.

ನಮ್ಮ ವಿಶಿಷ್ಟ ಪರಂಪರೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರ ಜತೆಗೆ ಸಮಾಜದ ಸಮಸ್ಯೆಗಳ ಪರಿಹಾರಕ್ಕೂ ಚಿಂತನೆ ನಡೆಸಬೇಕು ಎಂದು ಶ್ರೀಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಶ್ರೀಪಲಿಮಾರು ಮಠದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಶಯ ವ್ಯಕ್ತಪಡಿಸಿದರು.

ಕೃತಿ ಬಿಡುಗಡೆ
ದಿ| ಅನಂತರಾಮ ರಾಯರು ಬರೆದ ಶ್ರೀಮದ್ಭಾಗವತ ಸಂಪುಟದ ಐದನೆಯ ಸಂಪುಟವನ್ನು ವಿನೋದಾ ಅನಂತರಾಮ ರಾವ್‌ ಪ್ರಕಟಿಸಿದ್ದು, ಇದನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಗೋವಾ ಎನ್‌ಐಟಿ ನಿರ್ದೇಶಕ ಡಾ|ಗೋಪಾಲ ಮೊಗೇರಾಯ, ಸಮ್ಮೇಳನ ಸಮಿತಿ ಅಧ್ಯಕ್ಷರಾದ ರಾಮದಾಸ ಮಡಮಣ್ಣಾಯ, ಕೇರಳ ಆಲಪುಜದ ಗಿರಿರಾಜನ್‌, ಪುತ್ತೂರಿನ ಡಾ|ಬಾಲಕೃಷ್ಣ ಮೂಡಂಬಡಿತ್ತಾಯ ಪಿ.ಕೆ., ಕಿದಿಯೂರು ರಾಮದಾಸ ಭಟ್‌, ಕಾರ್ಯಾಧ್ಯಕ್ಷ ಮಂಜುನಾಥ ಉಪಾಧ್ಯಾಯ, ಸ್ವಾಗತ ಸಮಿತಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕೇರಳದ ವೆಂಕಟರಮಣ ಪೋತಿ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಸಂಚಾಲಕ ಮಂಗಳೂರಿನ ಪ್ರೊ| ಎಂ.ಬಿ.ಪುರಾಣಿಕ್‌ ಸ್ವಾಗತಿಸಿ, ಮೈಸೂರಿನ ಯು.ಕೆ.ಪುರಾಣಿಕ್‌ ವಂದಿಸಿದರು. ಪ್ರೊ|ಎಂ.ಎಲ್‌.ಸಾಮಗ ಕಾರ್ಯಕ್ರಮ ನಿರ್ವಹಿಸಿದರು.

ಗಾಯತ್ರೀ ವಿಶ್ವಗೀತೆ
ವಂದೇ ಮಾತರಂ, ಜನಗಣಮನ ಇವುಗಳು ರಾಷ್ಟ್ರಗೀತೆಗಳಾದರೆ, “ನಮಗೆಲ್ಲರಿಗೂ ಒಳ್ಳೆಯ ಬುದ್ಧಿ ಬರಲಿ’ ಎಂದು ಪ್ರಾರ್ಥಿಸುವ ಗಾಯತ್ರೀ ಮಂತ್ರ ವಿಶ್ವ ಗೀತೆಯಾಗಿದೆ. ಇದನ್ನು ತಪ್ಪದೆ ಜಪಿಸಬೇಕು.
– ಪೇಜಾವರ ಶ್ರೀಗಳು

Advertisement

Udayavani is now on Telegram. Click here to join our channel and stay updated with the latest news.

Next