Advertisement

11ಕ್ಕೆ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

06:22 PM Dec 08, 2022 | Team Udayavani |

ಶೃಂಗೇರಿ: ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಡಿ.11 ರಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶ್ರೀ ಮಠದ ಆಡಳಿತಾಧಿಕಾರಿ ಡಾ| ವಿ.ಆರ್‌. ಗೌರಿಶಂಕರ್‌ ಹೇಳಿದರು.

Advertisement

ಅಭಿನವ ವಿದ್ಯಾತೀರ್ಥ ಆಸ್ಪತ್ರೆಯಲ್ಲಿ ಬುಧವಾರ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಆಸ್ಪತ್ರೆ ವಿವಿಧ ಸೇವೆ ಲಭ್ಯವಾಗಲಿದೆ. ತಾಲೂಕಿನ ಜನರಿಗೆ ಆರೋಗ್ಯ ರಕ್ಷಣೆ ನೀಡುವ ನಿಟ್ಟಿನಲ್ಲಿ 1979 ರಲ್ಲಿ ಆರಂಭವಾದ ಧನ್ವಂತರಿ ಆಸ್ಪತ್ರೆ ನಾನಾ ಕಾರಣದಿಂದ ಉತ್ತಮ ಸೇವೆ ನೀಡಲು ಸಾಧ್ಯವಾಗಲಿಲ್ಲ.

ಆಸ್ಪತ್ರೆ ಅಭಿವೃದ್ಧಿಗೆ ಪ್ರಯತ್ನ ನಡೆಸಿದ್ದರೂ ಅದು ಫಲ ನೀಡಲಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸವಾಲು ಇದ್ದು, ಅದನ್ನು ನಿಭಾಯಿಸಿ ಆಸ್ಪತ್ರೆ ನಡೆಸಬೇಕಿದೆ. ಆಸ್ಪತ್ರೆಯಲ್ಲಿ ಗುಣ ಮಟ್ಟದ ಉಪಕರಣಗಳು, ತಜ್ಞ ವೈದ್ಯರು, ದಾದಿಯರು ಲಭ್ಯವಾಗಲಿದ್ದಾರೆ. ಕಡಿಮೆ ದರದಲ್ಲಿ ಗುಣ ಮಟ್ಟದ ಚಿಕಿತ್ಸೆ ಸಾಮಾನ್ಯ ಜನರಿಗೆ ದೊರಕಲಿದೆ. ಆಸ್ಪತ್ರೆಯಲ್ಲಿ ಪ್ರಯೋಗಾಲಯ, ಔಷಧ ಅಂಗಡಿ ಸೇವೆಗೆ ದೊರಕಲಿದೆ. ಬೆಂಗಳೂರಿನಲ್ಲಿರುವ ರಂಗದೊರೆ ಆಸ್ಪತ್ರೆ ಮಾರ್ಗದರ್ಶನದಲ್ಲಿ
ನಡೆಯಲಿದೆ ಎಂದರು.

ಆರಂಭದಲ್ಲಿ 50 ಬೆಡ್‌ ಆಸ್ಪತ್ರೆಯಾಗಿದ್ದು, ಸಾಮಾನ್ಯ ವಾರ್ಡ್‌ 14, ಸೆಮಿ ಪ್ರೈವೇಟ್‌ ವಾರ್ಡ್‌ 10, ತುರ್ತು ಚಿಕಿತ್ಸೆ 6, ಪ್ರೈವೆಟ್‌ ವಾರ್ಡ್‌ 10, ಐಸಿಯು 6, ಮೇಜರ್‌ ಒಟಿ 2, ಮೈನರ್‌ ಒಟಿ 1, ಲೇಬರ್‌ ವಾರ್ಡ್‌ 1 ಹೊಂದಿದೆ. ತಾಲೂಕಿನ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ.

ಕಣ್ಣಿನ ಪೊರೆ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ. ವೈದ್ಯರು ಸದಾ ಲಭ್ಯವಿದ್ದು, ತಜ್ಞ ವೈದ್ಯರು ಅಗತ್ಯ ಸಂದರ್ಭದಲ್ಲಿ ಭೇಟಿ ನೀಡಲಿದ್ದಾರೆ. ವೈದ್ಯರ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಆಸ್ಪತ್ರೆಯಲ್ಲಿ ಸರಕಾರ ಮತ್ತು ಖಾಸಗಿ ವಿಮಾ ಸೌಲಭ್ಯ ನೀಡಲಾಗುತ್ತದೆ ಎಂದರು. ನಾಗರಿಕ ಸಮಿತಿ ಅಧ್ಯಕ್ಷ ಮಿಗಿನಕಲ್ಲು ನರಸಿಂಹಮೂರ್ತಿ ಮಾತನಾಡಿ, ಆಹಾರ, ಆರೋಗ್ಯ ಎಲ್ಲಿರಿಗೂ ಅಗತ್ಯವಾಗಿದ್ದು, ತುರ್ತು ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ಇದ್ದು, ನೂತನ ಆಸ್ಪತ್ರೆ ಅನಾರೋಗ್ಯ ಪೀಡಿತರಿಗೆ ನೆರವಾಗಲಿ ಎಂದರು.

Advertisement

ಸಭೆಯಲ್ಲಿ ಟಿ.ಕೆ. ವಿಶ್ವಜಿತ್‌, ಡಿ.ಸಿ. ಶಂಕರಪ್ಪ, ಜಿ.ಎಂ. ಸತೀಶ್‌, ಸುನಿತಾ ವಾಸು, ಪ್ರಕಾಶ್‌, ನಟರಾಜ್‌, ಉಮೇಶ್‌ ಪುದುವಾಳ್‌, ಪುಷ್ಪಾ ಲಕ್ಷ್ಮೀನಾರಾಯಣ, ಕೆ.ಎಂ. ಗೋಪಾಲ್‌ ಮಾತನಾಡಿದರು. ರಂಗದೊರೆ ಆಸ್ಪತ್ರೆಯ ಡಾ| ಕಲ್ಪನಾ, ಧನ್ವಂತರಿ ಆಸ್ಪತ್ರೆಯ ಕಾರ್ಯದರ್ಶಿ ಶೈಲಜಾ ಹೆಗ್ಡೆ, ಡಾ| ಅನಂತನಾರಾಯಣ, ಚಂದ್ರಶೇಖರರಾವ್‌, ಎ.ಎಸ್‌. ನಯನ, ಪರಾಶರ, ಬಿ.ಎನ್‌. ಕೃಷ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next