ಚನ್ನಪಟ್ಟಣ: ತಾಲೂಕಿನ ಇಗ್ಗಲೂರು ಸಿ ಬಿಂದು ಪುನಶ್ಚೇತನ ಕಾಮಗಾರಿ ಹಾಗೂ ಸಿ ಬಿಂದು ರಸ್ತೆಯಿಂದ ಸೋಮೇಶ್ವರ ಸ್ವಾಮಿ ದೇಗುಲದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಉದ್ಘಾಟನೆಯನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ಸೋಮವಾರ ನೆರವೇರಿಸಿದರು.
ಇಗ್ಗಲೂರು ವ್ಯಾಪ್ತಿಯ ಶಿಂಷಾ ನದಿಯ ಮೇಲ್ಬಾಗದಲ್ಲಿರುವ ರೈತರ ಜಮೀನುಗಳಿಗೆ ನೀರುಣಿಸುವ ಸಲುವಾಗಿ ಸ್ಥಾಪನೆಯಾಗಿರುವ ಸಿ ಬಿಂದು ಯೋಜನೆಯನ್ನು ವಿಸ್ತರಣೆ ಮಾಡಿ, ಇನ್ನಷ್ಟು ರೈತರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ 120 ಲಕ್ಷರೂ. ವೆಚ್ಚದಲ್ಲಿ ಪುನಶ್ಚೇತನ ಕಾಮಗಾರಿ ನಡೆಸಲಾಗಿದೆ. ಹಾಗೆಯೇ ಸಿ 2 ಬಿಂದುವಿನ ಪುನಶ್ಚೇತನ ಕಾಮಗಾರಿ, ಸೋಮೇಶ್ವರ ದೇವಾಲಯದ ಬಳಿ ಡೈನಿಂಗ್ ಹಾಲ್ ನಿರ್ಮಾಣ, ಸಿ ಮತ್ತು ಸಿ2 ಬಿಂದುವಿನ ಆವರಣ ಗೋಡೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಿಎಂ ಶಂಕುಸ್ಥಾಪನೆ ನೆರವೇರಿಸಿದರು. ಹಾಗೆಯೇ ಸೋಮೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಕಣ್ವ ನೀರಿನ ಯೋಜನೆಯ ಪಂಪ್‌ಹೌಸ್‌ಗೆ ಭೇಟಿ ನೀಡಿದ ಸಿಎಂ ವ್ಯವಸ್ಥೆಯ ಪರಿಶೀಲನೆ ನಡೆಸಿದರು.
ಸಾಮಂದಿಪುರಕ್ಕೆ ಭೇಟಿ: ಇಗ್ಗಲೂರು ಸಮೀಪದ ಸಾಮಂದಿಪುರ ಗ್ರಾಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪುತ್ಥಳಿ ನಿರ್ಮಾಣ ಮಾಡಲಾಗಿದ್ದು, ಉದ್ಘಾಟನೆ ವೇಳೆ ಸಿಎಂ ಗೈರಾಗಿದ್ದರು. ಮಂಡ್ಯದ ಕನಗನಮರಡಿ ದುರಂತ ಅಂದೇ ಸಂಭವಿಸಿದ್ದರಿಂದ ಕಾರ್ಯಕ್ರಮಕ್ಕೆ ಆಗಮಿಸದೆ ಸೀದಾ ಮಂಡ್ಯಕ್ಕೆ ತೆರಳಿದ್ದರು ಹಾಗಾಗಿ ಸೋಮವಾರ ಭೇಟಿ ನೀಡಿ ಪುತ್ಥಳಿ ವೀಕ್ಷಣೆ ಮಾಡಿದರು.
ಆಸ್ಪತ್ರೆ ಮೇಲ್ದರ್ಜೆ ಕಾಮಗಾರಿಗೆ ಶಂಕುಸ್ಥಾಪನೆ: ಅಕ್ಕೂರು ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಸಿಎಂ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಜನತಾ ದರ್ಶನ ಕಾರ್ಯಕ್ರಮದಲ್ಲಿ ತಾಲೂಕಿನ 7461 ರೈತರ 33.79.58.500ರೂ. ಸಹಕಾರ ಸಂಘಗಳ ಸಾಲಮನ್ನಾ ಋಣಮುಕ್ತ ಪತ್ರವನ್ನು ವಿತರಿಸಿದರು.
ಅಹವಾಲು ಸ್ವೀಕಾರ: ಇವುಗಳ ಜತೆಗೆ ಕೋಡಂಬಹಳ್ಳಿ ಹಾಗೂ ಹೊಂಗನೂರು ಗ್ರಾಮಗಳಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮಗಳಲ್ಲಿಯೂ ವಿವಿಧ ಇಲಾಖೆಗಳ ಮೂಲಕ ಸವಲತ್ತುಗಳನ್ನು ವೇದಿಕೆಯಲ್ಲಿ ವಿತರಣೆ ಮಾಡಿದ ಸಿಎಂ ಖುದ್ದು ಸಾರ್ವಜನಿಕರ ಬಳಿಗೆ ತೆರಳಿ ಅಹವಾಲುಗಳನ್ನು ಸ್ವೀಕಾರ ಮಾಡಿದರು.
ಈ ಸಂದರ್ಭದಲ್ಲಿ ಅಕ್ಕೂರು, ಕೋಡಂಬಹಳ್ಳಿ, ಹೊಂಗನೂರು ಜಿಪಂ ವ್ಯಾಪ್ತಿಯ ಮುಖಂಡರುಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.