Advertisement

ಅಗಸನಹಳ್ಳಿಯಲ್ಲಿ ಶುದ್ಧ ನೀರಿನ ಘಟಕ ಉದ್ಘಾಟನೆ

03:49 PM Dec 07, 2018 | |

ಬ್ಯಾಡಗಿ: ಪಟ್ಟಣಕ್ಕೆ ಒಟ್ಟು 29 ಕೋಟಿ ವೆಚ್ಚದ ನಿರಂತರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲಿಯೇ ಪಟ್ಟಣದ ಪ್ರತಿಯೊಬ್ಬ ಸಾರ್ವಜನಿಕರಿಗೂ ದಿನದ 24 ಗಂಟೆಯೂ ಶಾಶ್ವತ ಕುಡಿಯುವ ನೀರು ಒದಗಿಸಲಾಗುವುದು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು.

Advertisement

ಗುರುವಾರ ಪಟ್ಟಣದ ಅಗಸನಹಳ್ಳಿಯಲ್ಲಿ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಇಲಾಖೆ ಹಾಗೂ ಪುರಸಭೆ ಆಶ್ರಯದಲ್ಲಿ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಒಳಚರಂಡಿ ಕಾಮಗಾರಿ ಜೊತೆಯಲ್ಲಿಯೇ ನಿರಂತರ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸಲಾಗಿದೆ. ಕೇವಲ 30 ಸಾವಿರ ಜನಸಂಖ್ಯೆ ಹೊಂದಿರುವ ಬ್ಯಾಡಗಿ ಪಟ್ಟಣಕ್ಕೆ ಇಂತಹದ್ದೊಂದು ಯೋಜನೆ ಅನುಷ್ಠಾನಗೊಳ್ಳುತ್ತಿರುವುದು ನಮ್ಮೆಲ್ಲರ ಪುಣ್ಯವೆಂದರು.

ಕಲುಷಿತ ನೀರಿಗೆ ಜಲಜೀವಿಗಳೇ ನಲುಗಿ ಹೋಗಿದ್ದು, ನಮ್ಮಂತಹ ಸಾಮಾನ್ಯ ಮನುಷ್ಯರ ಗತಿಯೇನು ? ರೋಗಕ್ಕೆ ಅಂಜಿಕೊಂಡಿರುವ ಮನುಷ್ಯ ಅನಿವಾರ್ಯವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳ ಮೊರೆ ಹೋಗಬೇಕಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಸರ್ಕಾರದ ಮಟ್ಟಿಗೆ ಹೆಮ್ಮೆಯ ವಿಷಯ. ಆದರೆ, ಅವುಗಳ ನಿರ್ವಹಣೆಯಿಲ್ಲದೇ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದರು.

ಈ ಮೊದಲು ಎಲ್ಲ ಕಡೆಗಳಲ್ಲಿಯೂ ನೀರು ಸೇದುವ ಬಾವಿಗಳಲ್ಲಿ ನೀರು ಸಿಗುತ್ತಿತ್ತು. ಇಲ್ಲಿಯೂ ಸಹ ಸೋಸಿದ ನೀರು ಸಾರ್ವಜನಿಕರಿಗೆ ಸಿಗುತ್ತಿತ್ತು, ಬಳಿಕ ಪರಿಚಿತವಾದ ಕೊಳವೆಬಾವಿಗಳಲ್ಲಿಯೂ ಸುಮಾರು 150 ರಿಂದ 200 ಅಡಿ ಆಳದಲ್ಲಿ ನೀರು ಲಭ್ಯವಿತ್ತು. ಅಂತರ್ಜಲ ಕುಸಿತದ ಪರಿಣಾಮವಾಗಿ ಇಂದು 800 ಅಡಿ ಆಳಕ್ಕೆ ಕೊರೆದರೂ ನೀರು ಸಿಗುತ್ತಿಲ್ಲ. ಹೀಗಾಗಿ ನೀರಿನ ಸದ್ಭಳಕೆ ಬಗ್ಗೆ ಸಾಮೂಹಿಕ ಹೊಣೆಗಾರಿಕೆ ತೋರುವಂತೆ ಮನವಿ ಮಾಡಿದರು.

ಸಾಮಾನ್ಯವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಸಾರ್ವಜನಿಕರ ನಿರ್ಲಕ್ಷ್ಯಕ್ಕೆ ಒಳಗಾಗಿ ಸ್ಥಗಿತಗೊಂಡ ಉದಾಹರಣೆಗಳಿವೆ. ಅಲ್ಲದೇ ಕೆಲವರು ಅದರಲ್ಲಿ ಹಾಕಬೇಕಾದ 2 ರೂ. ಬದಲಾಗಿ ಅದೇ ಮಾದರಿಯ ರಟ್ಟಿನ ಕಾಯನ್‌ ಗಳನ್ನು ಹಾಕುತ್ತಿರುವುದು ಕಂಡು ಬಂದಿದ್ದು, ಇಂತಹ ಕೃತ್ಯವೆಸಗದೇ ಸಾರ್ವಜನಿಕರು ಇದು ನಿಮ್ಮ ಆಸ್ತಿ ಎಂದು ಭಾವಿಸಿ ಘಟಕದ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

Advertisement

ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷೆ ದಾಕ್ಷಾಯಣಮ್ಮ ಪಾಟೀಲ, ಸದಸ್ಯರಾದ ಮುರಿಗೆಪ್ಪ ಶೆಟ್ಟರ, ಯಲ್ಲಮ್ಮ ದಾವಣಗೇರಿ, ಮುಖ್ಯಾ ಧಿಕಾರಿ ವಿ.ಎಂ. ಪೂಜಾರ ಜಿಪಂ ಮಾಜಿ ಅಧ್ಯಕ್ಷ ಶಂಕ್ರಣ್ಣ ಮಾತನವರ, ಎಪಿಎಂಸಿ ಮಾಜಿ ಅಧ್ಯಕ್ಷ ರವೀಂದ್ರ ಪಟ್ಟಣಶೆಟ್ಟಿ, ಬಿಎಲ್‌ ಬಿಸಿ ಸದಸ್ಯ ಸುರೇಶ ಯತ್ನಳ್ಳಿ, ಸುರೇಶ ಅಸಾದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next