Advertisement

ಮಹರ್ಷಿ ವಾಲ್ಮೀಕಿ ಸಾಧನೆ ಸರ್ವರಿಗೂ ಪ್ರೇರಣೆ:ಡಿಸಿ

12:58 AM Oct 21, 2021 | Team Udayavani |

ಉಡುಪಿ: ಬೇಡನಾಗಿದ್ದ ವ್ಯಕ್ತಿ ಸತತ ಪರಿಶ್ರಮ, ಅಚಲ ಸಾಧನೆಯಿಂದ ಮಹರ್ಷಿ ವಾಲ್ಮೀಕಿಯಾಗಿ ರೂಪುಗೊಂಡಿದ್ದು, ವಾಲ್ಮೀಕಿ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಅವರು ಹೇಳಿದರು.

Advertisement

ಜಿ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಅವರು ಮಾತನಾಡಿ, ರಾಮಾಯಣದಲ್ಲಿರುವ ಮೌಲ್ಯ, ತತ್ವಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಸತತ ಪರಿಶ್ರಮದಿಂದ ಯಾವುದೇ ವ್ಯಕ್ತಿ ಮಹತ್ಸಾಧನೆ ಮಾಡಬಹುದು ಎನ್ನುವುದಕ್ಕೆ ವಾಲ್ಮೀಕಿ ಸಾಕ್ಷಿಯಾಗಿದ್ದಾರೆ ಎಂದರು.

ಜಿಲ್ಲಾಡಳಿತ ವತಿಯಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಐಎಎಸ್‌, ಕೆಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮ ಆರಂಭವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌ ಮಾತನಾಡಿ, ಅತ್ಯಂತ ಹಿಂದುಳಿದ ವರ್ಗದ ವ್ಯಕ್ತಿ ಜ್ಞಾನ ಪಡೆಯುವ ಮೂಲಕ ಮಹರ್ಷಿಯಾದರು. ಹಿಂದುಳಿದ ವರ್ಗದ ಜನತೆ ತಮ್ಮಲ್ಲಿನ ಕೀಳರಿಮೆ ತೊರೆದು, ವಿದ್ಯಾಭ್ಯಾಸ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ಸಂಘಟನೆಗಳ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು.

ಇದನ್ನೂ ಓದಿ:ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

Advertisement

ಮಂಗಳೂರು ವಿ.ವಿ. ಸಂಶೋಧನಾ ವಿದ್ಯಾರ್ಥಿ ದಿನಕರ ಕೆಂಜೂರು ಅವರು ವಾಲ್ಮೀಕಿ ವ್ಯಕ್ತಿತ್ವ, ಜೀವನದ ಬಗ್ಗೆ ಉಪನ್ಯಾಸ ನೀಡಿ, ಮಹರ್ಷಿ ವಾಲ್ಮೀಕಿ ಅವರು ಚಿಂತಕ, ತಣ್ತೀಜ್ಞಾನಿ, ಶಿಕ್ಷಣ ಪ್ರೇಮಿಯಾಗಿದ್ದರು. ರಾಮಾಯಣವನ್ನು ಜನ ಸಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ರಚಿಸಿದ್ದಾರೆ. ವ್ಯಕ್ತಿ ನಕಾರಾತ್ಮಕ ಭಾವನೆಗಳನ್ನು ತೊಡೆದು, ಆತ್ಮವಿಶ್ವಾಸದಿಂದ ಮುನ್ನಡೆದರೆ ಉನ್ನತ ಸಾಧನೆಗಳನ್ನು ಮಾಡಲು ಸಾಧ್ಯ ಎಂಬುದಕ್ಕೆ ವಾಲ್ಮೀಕಿ ಜೀವನ ಚರಿತ್ರೆ ಸಾಕ್ಷಿಯಾಗಿದೆ ಎಂದರು.

ಸಮ್ಮಾನ
ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಾದ ಪ್ರತಿಭಾ ನಾಯ್ಕ, ಕಾವ್ಯಶ್ರೀ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶೀನ ನಾಯ್ಕ, ದೋಗು ಕೊರಗ, ಗುಲಾಬಿ ಗೌಡ ಅವರನ್ನು ಸಮ್ಮಾನಿಸಲಾಯಿತು.ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಎಡಿಸಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ದೂದ್‌ಪೀರ್‌ ಅವರು ಸ್ವಾಗತಿಸಿದರು. ವಿಶ್ವನಾಥ್‌ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next