ಪುತ್ತೂರು: ಭಾರತ ಮಾತೆಯ ಪ್ರಸಾದ ಎನ್ನುವ ರೀತಿಯಲ್ಲಿ ಅನ್ನದಾತನ ಖಾತೆಗೆ ನೇರವಾಗಿ ಹಣ ನೀಡುವ ಕೆಲಸವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡುತ್ತಿದೆ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವ ಪುರುಷೋತ್ತಮ ರೂಪಾಲ ಅವರು ಹೇಳಿದರು.
ಮೊಟ್ಟೆತ್ತಡ್ಕ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ರವಿವಾರ ಆಯೋಜಿಸಿದ್ದ ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಉದ್ಘಾಟನೆಯ ವೆಬ್‌ಕಾಸ್ಟಿಂಗ್‌ನಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಯೋಜನೆಯನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದ ಖಜಾನೆಯಿಂದ ಗ್ರಾಮ ಪಂಚಾಯತ್‌ನ ಖಜಾನೆಗೆ ನೇರವಾಗಿ ಹಣ ತುಂಬಿಸಿದರು. ಈ ಮೂಲಕ ವಿಕಾಸ ಎನ್ನುವ ಪರಿಕಲ್ಪನೆಯನ್ನು ಜಾರಿಗೆ ತಂದರು. ಇದೀಗ ಎರಡನೇ ಹಂತದಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೇರವಾಗಿ ರೈತರ ಖಾತೆಗೆ ಹಣ ನೀಡುವ ಕಾಯಕಕ್ಕೆ ಮುಂದಾಗಿದ್ದಾರೆ. 2 ಹೆಕ್ಟೇರ್ ಕೃಷಿ ಜಮೀನು ಹೊಂದಿರುವ ರೈತರು ಈ ಯೋಜನೆಯ ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ರೈತನ ಖಾತೆಗೆ ಕೇಂದ್ರ ಸರಕಾರ ನೇರವಾಗಿ ಹಣ ಹಾಕುವ ಯೋಜನೆ ಜಾರಿಗೆ ಬಂದಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ಕೃಷಿ ಕ್ಷೇತ್ರ ಪುನರುತ್ಥಾನಕ್ಕೆ ನಾಂದಿ ಹಾಡಿದ್ದಾರೆ. ದೇಶದಲ್ಲಿ ಕೈಗಾರಿಕಾ ಕ್ರಾಂತಿಯ ಜತೆಗೆ ಕೃಷಿ ಕ್ರಾಂತಿಯೂ ಅಗತ್ಯ ಎನ್ನುವ ಚಿಂತನೆಯಲ್ಲಿ ಇಂತಹ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಮಿತಾಬ್ ಗೌತಮ್ ಉಪಸ್ಥಿತರಿದ್ದರು. ಪುತ್ತೂರು ಮತ್ತು ಸುಳ್ಯ ತಾಲೂಕಿನ ಕೃಷಿಕರು, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮತ್ತಿತರರು ಉಪಸ್ಥಿತರಿದ್ದರು. ಪುತ್ತೂರು ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ಎಂ. ಗಂಗಾಧರ ನಾಯಕ್ ಸ್ವಾಗತಿಸಿ, ತಾಂತ್ರಿಕ ಅಧಿಕಾರಿ ಪ್ರಕಾಶ್ ಭಟ್ ನಿರೂಪಿಸಿದರು.
75 ಕೋ. ರೂ. ಮೀಸಲು
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ 75 ಕೋಟಿ ರೂ. ಅನ್ನು ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಮೀಸಲಿಡಲಾಗಿದೆ. ಇದರಿಂದ ರೈತ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
15 ಸಾವಿರ ನೋಂದಣಿ
ಶಾಸಕ ಸಂಜೀವ ಮಠಂದೂರು ಮಾತನಾಡಿ, ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ಬರುವ ದಿನ ರೈತರಿಗೆ ಐತಿಹಾಸಿಕ ದಿನ. ಈಗಾಗಲೇ ಈ ಯೋಜನೆಯ ಲಾಭ ಪಡೆಯಲು 15 ಸಾವಿರ ರೈತರು ನೋಂದಣಿ ಮಾಡಿಕೊಂಡಿದ್ದಾರೆ. 1,800 ರೈತರು ದಾಖಲೆ ಸಲ್ಲಿಸಿದ್ದಾರೆ ಎಂದರು.