Advertisement
ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಸಹಾಯಕ ಆಯುಕ್ತ ಕೃಷ್ಣಮೂರ್ತಿ ಎಚ್.ಕೆ. ಮಾತನಾಡಿ, ಕಂದಾಯ ಸಚಿವ ಆರ್ .ವಿ. ದೇಶಪಾಂಡೆ ಅವರು ನೂತನ ಕಡಬ ತಾಲೂಕನ್ನು ಮಾ. 8ಂದು ಸಂಜೆ 5.30ಕ್ಕೆ ಉದ್ಘಾಟಿಸಲಿದ್ದಾರೆ ಎನ್ನುವ ಮಾಹಿತಿ ಸರಕಾರದಿಂದ ಬಂದಿದೆ. ಉಸ್ತುವಾರಿ ಸಚಿವ ಯು.ಟಿ. ಖಾದರ್, ಶಾಸಕ ಎಸ್. ಅಂಗಾರ ಸಹಿತ ಜನಪ್ರತಿನಿಧಿಗಳು, ಉನ್ನತ ಮಟ್ಟದ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಿದ್ಧತೆಗೆ ಹೆಚ್ಚಿನ ಕಾಲಾವಕಾಶ ಇಲ್ಲದ ಕಾರಣ ಎಲ್ಲ ವ್ಯವಸ್ಥೆಗಳು ತುರ್ತಾಗಿ ಆಗಬೇಕಿವೆ. ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು, ಸಂಘಟನೆಗಳು ಸಹಿತ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಉದ್ಘಾಟನೆಯ ವೇಳೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಕಡಬದಲ್ಲಿ ತೆರೆಯ ಬೇಕಾಗಿದ್ದು, ಹೆಚ್ಚಿನ ಇಲಾಖೆಗಳಿಗೆ ಕಟ್ಟಡಗಳನ್ನು ಗುರುತಿಸಲಾಗಿದೆ. ಕಟ್ಟಡಗಳು ಲಭ್ಯವಿಲ್ಲದೇ ಇರುವ ಇಲಾಖೆಗಳು ತಾತ್ಕಾಲಿಕ ನೆಲೆಯಲ್ಲಿ ಲಭ್ಯವಿರುವ ಕಟ್ಟಡದಲ್ಲಿ ಕಚೇರಿ ಸ್ಥಾಪಿಸಿ ಮುಂದಿನ ದಿನಗಳಲ್ಲಿ ಕಚೇರಿ ಕಟ್ಟಡ ನಿರ್ಮಿಸಲು ಸೂಕ್ತ ಭೂಮಿ ಗುರುತಿಸಬೇಕು. ಆಯಾ ಕಚೇರಿಗೆ ಅಧಿಕಾರಿ ಮತ್ತು ಸಿಬಂದಿಯನ್ನು ನಿಯೋಜಿಸಬೇಕು. ಪೂರ್ಣಪ್ರಮಾಣದ ಅಧಿಕಾರಿ ಇಲ್ಲದಿದ್ದರೆ ಪ್ರಭಾರ ವ್ಯವಸ್ಥೆ ಮಾಡಬೇಕು ಎಂದು ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಒಂದೇ ಸೂರಿನಡಿಯಲ್ಲಿ ವಿವಿಧ ಇಲಾಖೆಗಳ ಕಚೇರಿಗಳನ್ನು ತೆರೆಯಬೇಕು ಎನ್ನುವ ಸರಕಾರದ ಆಶಯದಂತೆ ನೂತನ ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಂದಾಯ ಸಚಿವರು ತಾಲೂಕು ಉದ್ಘಾಟನೆಯೊಂದಿಗೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಿನಿ ವಿಧಾನಸೌಧ ನಿರ್ಮಾಣವಾದ ಬಳಿಕ ಹೆಚ್ಚಿನ ಸರಕಾರಿ ಕಚೇರಿಗಳಿಗೆ ಸ್ಥಳಾವಕಾಶ ಸಿಗಲಿದೆ ಎಂದು ಹೇಳಿದರು.
Related Articles
Advertisement
ಬೈಕ್ ಏರಿ ಬಂದ ಎಸಿ!ಪುತ್ತೂರಿನಲ್ಲಿ ತುರ್ತು ಕಾರ್ಯಕ್ರಮವಿದ್ದ ಕಾರಣ ಸಹಾಯಕ ಆಯುಕ್ತ ಕೃಷ್ಣಮೂರ್ತಿ ಎಚ್.ಕೆ. ಅವರು ಕಡಬ ತಲುಪುವುದು ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿತ್ತು. ಪಟ್ಟಣಕ್ಕೆ ಬರುವಷ್ಟರಲ್ಲಿ ಅವರ ವಾಹನವೂ ಕೈಕೊಟ್ಟಿತು. ಆ ವೇಳೆಗೆ ಅದೇ ದಾರಿಯಲ್ಲಿ ಸಭೆಗೆ ತೆರಳುತ್ತಿದ್ದ ಪತ್ರಕರ್ತರೊಬ್ಬರ ಸ್ಕೂಟರ್ ಏರಿ ಹಿಂಬದಿ ಸವಾರನಾಗಿ ಸಭೆ ನಡೆಯುವ ಸ್ಥಳಕ್ಕೆ ಆಗಮಿಸಿದ ಅವರು ಸರಳತೆ ಮೆರೆದು ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾದರು.