Advertisement

ಕಲಬುರಗಿ ವಲಯದ ‘ಜಲ ಭವನ’ ಉದ್ಘಾಟನೆ

01:31 PM Oct 30, 2022 | Team Udayavani |

ಕಲಬುರಗಿ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ 9,000 ಕೋಟಿ ರೂ. ವೆಚ್ಚದ ರಾಜ್ಯದಲ್ಲಿನ ಅಮೃತ-2 ಬೃಹತ್ ಕುಡಿಯುವ ನೀರು ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬರುವ ನವೆಂಬರ್ 2 ಕ್ಕೆ ಚಾಲನೆ ನೀಡಲಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ (ಬೈರತಿ) ಹೇಳಿದರು.

Advertisement

ರವಿವಾರ ಕಲಬುರಗಿ ನಗರದ ರಾಜಾಪುರ ರಸ್ತೆಯಲ್ಲಿರುವ (ಕೃಷ್ಣಾ ಗ್ರಾಮೀಣ ಬ್ಯಾಂಕ್ ಎದುರು) ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಿಂದ 13.86 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ “ಜಲ ಭವನ” ಕಟ್ಟಡ ಉದ್ಘಾಟಿಸಿ ಸಚಿವರು ಮಾತನಾಡಿದರು.

ನ.11ಕ್ಕೆ ರಾಜ್ಯಕ್ಕೆ ಪ್ರಧಾನಿಗಳು ಭೇಟಿ ನೀಡಲಿದ್ದು, ಅಂದು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದರಿಂದ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಒದಗಿಸುವ ರಾಜ್ಯ ಸಕಾರದ ಸಂಕಲ್ಪಕ್ಕೆ ಕೇಂದ್ರ ಸರ್ಕಾರವು ಬೆನ್ನೆಲುಬಾಗಿ ನಿಂತಿದೆ ಎಂದರು.

ಜಲ ಭವನ ಕಟ್ಟಡ ಸುಂದರವಾಗಿ ನಿರ್ಮಿಸಲಾಗಿದೆ. ಬದುಕಿಗೆ ನೀರು ಮತ್ತು ಗಾಳಿ ಅತ್ಯಮೂಲ್ಯ. ಪ್ರತಿಯೊಬ್ಬರಿಗೂ ನೀರು ಒದಗಿಸುವುದು ಸರ್ಕಾರದ ಕರ್ತವ್ಯ. ಹೀಗಾಗಿ ಅಧಿಕಾರಿ-ಸಿಬ್ಬಂದಿಗಳು ಇದನ್ನರಿತು ಎಲ್ಲಿಯೂ ಲೋಪವಾಗದಂತೆ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಉತ್ತಮವಾಗಿ ಕಾರ್ಯರ್ನಿಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಕಲಬುರಗಿ ಪಾಲಿಕೆಗೆ 200 ಕೋಟಿ ರೂ. ನೀಡಿದ್ದು, ಇದು ಖರ್ಚು ಮಾಡಿದ ಬಳಿಕ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.

Advertisement

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ, ಕೇಂದ್ರ ಸರ್ಕಾರವು ಅಮೃತ-2 ಯೋಜನೆಯಡಿ ರಾಜ್ಯಕ್ಕೆ 9,000 ಕೋಟಿ ರೂ. ಮಂಜೂರು ಮಾಡಿದೆ. ಇದರಿಂದ ರಾಜ್ಯದ 160 ಪೌರ ಸಂಸ್ಥೆಗಳಿಗೆ (ಶೇ.80ರಷ್ಟು ಪೌರ ಸಂಸ್ಥೆಗಳು) ದಿನದ 24 ಗಂಟೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗಲಿದೆ. ರಾಜ್ಯಕ್ಕೆ ಕೇಂದ್ರಕ್ಕೆ ಸರ್ಕಾರದ ಬಹುದೊಡ್ಡ ಕೊಡುಗೆ ಇದಾಗಿದೆ ಎಂದು ಬಣ್ಣಿಸಿದರು.

ಕಲಬುರಗಿಯನ್ನು ಸ್ಮಾರ್ಟ್ ಸಿಟಿಗೆ ಪರಿಗಣಿಸಿ:

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಕಲಬುರಗಿ ನಗರಕ್ಕೆ 24 ಗಂಟೆ ಕುಡಿಯುವ ನೀರು ಯೋಜನೆ ಈಗ ಪೂರ್ಣವಾಗುವ ಹಂತದಲ್ಲಿದೆ. ಮಹಾನಗರ ಪಾಲಿಕೆಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಮಂಜೂರು ಮಾಡಲಾದ 200 ಕೋಟಿ ರೂ. ವೆಚ್ಚದಲ್ಲಿನ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಹಿಂದುಳಿದ ಈ ಪ್ರದೇಶಕ್ಕೆ ಇನ್ನೂ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಮತ್ತು ಪ್ರದೇಶದ ಬಳ್ಳಾರಿ ಮತ್ತು ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಗೆ ಪರಿಗಣಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಜಲ ಮಂಡಳಿಯ ಕಲಬುರಗಿ ವಲಯದ ಮುಖ್ಯ ಅಭಿಯಂತ ಎಸ್.ರಮೇಶ ಮಾತನಾಡಿ, ಬೀದರ ಮೂಲದ ಮೆ.ಜೆ.ಎಂ.ಕನ್ಸ್ ಟ್ರಕ್ಷನ್ಸ್ ಸಂಸ್ಥೆ ನಿರ್ಮಿಸಿರುವ “ಜಲ ಭವನ”ಕಟ್ಟಡವು ಜಿ+2 ಮಾದರಿಯಾಗಿದ್ದು, ಒಟ್ಟು 5,061 ಚದುರ ಮೀಟರ್ ವಿಸ್ತೀರ್ಣ ಹೊಂದಿದೆ. ವಲಯದ 7 ಜಿಲ್ಲೆಗಳ 62 ಸ್ಥಳೀಯ ಸಂಸ್ಥೆಗಳ 65 ಲಕ್ಷ ಜನಸಂಖ್ಯೆಗೆ ನೀರು ಸರಬರಾಜು ಮಾಡುವ ಹೊಣೆ ಮಂಡಳಿ ಹೊತ್ತಿದೆ. 3 ವಿಭಾಗ ಸೇರಿದಂತೆ 13 ಉಪ ವಿಭಾಗಗಳು ಇದರಡಿ ಬರುತ್ತವೆ. ಮುಂದೆ ಮಂಡಳಿಯ ಮುಖ್ಯ ಅಭಿಯಂತರ ಕಚೇರಿ ಹಾಗೂ ಇತರೆ ಉಪ ವಿಭಾಗೀಯ ಕಚೇರಿಗಳು ನೂತನ ಕಟ್ಟಡಕ್ಕೆ ಸ್ಥಳಾಂತರವಾಗಲಿವೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಲಬುರಗಿ ದಕ್ಷಿಣ ಶಾಸಕಿ ಖನೀಜ್ ಫಾತಿಮಾ, ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ಪ್ರಭು ಹಾದಿಮನಿ, ಅಯುಕ್ತ ಭುವನೇಶ ಪಾಟೀಲ ದೇವಿದಾಸ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಯಾನಂದ ಪಾಟೀಲ, ಜಲ ಮಂಡಳಿಯ ಕಲಬುರಗಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಎನ್.ನರಸಿಂಹರೆಡ್ಡಿ, ಸಹಾಯಕ ಕಾರ್ಯಪಾಲಕ ಅಭಿಯಂತ ವಿಜಯಕುಮಾರ ಬಿಲಗುಂದಿ, ಎ.ಇ. ನೀಲೇಶ್ ಸೇರಿದಂತೆ ಮಂಡಳಿಯ ಇನ್ನಿತರ ಅಧಿಕಾರಿಗಳು, ಸಿಬ್ಬಂದಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next