ವಾಡಿ: ಅಪೂರ್ಣ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿ ಸಚಿವ ಪ್ರಿಯಾಂಕ್ ಖರ್ಗೆ, ಚುನಾವಣೆ ಪ್ರಚಾರ ನಡೆಸುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ವಾಲ್ಮೀಕಿ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಪಟ್ಟಣದ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟಿಸಿ ಹೋದ ಬಳಿಕ ಬಿಜೆಪಿ ನಾಯಕರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ವಾಲ್ಮೀಕಿ ನಾಯಕ, ಅಲ್ಲಿನ ದುಸ್ಥಿತಿ ಕಂಡು ಸಿಡಿಮಿಡಿಗೊಂಡರು. 2 ಕೋಟಿ ರೂ. ಅನುದಾನದಡಿ ನಿರ್ಮಿಸಲಾದ ಘನತ್ಯಾಜ್ಯ ಘಟಕ ವಾರಸುದಾರರಿಲ್ಲದೆ ಅನಾಥವಾಗಿ ಬಣಗುಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯುತ್ ಸಂಪರ್ಕವಿಲ್ಲದೇ ನಿಷ್ಕ್ರಿಯವಾಗಿರುವ ಅಪೂರ್ಣ ಘಟಕವನ್ನು ಸಚಿವ ಪ್ರಿಯಾಂಕ್ ಕಣ್ಣುಮುಚ್ಚಿ ಉದ್ಘಾಟಿಸಿದ್ದಾರೆ ಎಂದು ದೂರಿದರು.
ರೈಲ್ವೆ ಕಾಲೋನಿ ವಾರ್ಡ್‌ನಲ್ಲಿ ಪುರಸಭೆ ಅನುದಾನದಲ್ಲಿ ಯಾವುದೇ ಅಭಿವೃದ್ಧಿ ಮಾಡುವಂತಿಲ್ಲ. ಆದರೆ ರೈಲ್ವೆ ಕಾಲೋನಿಯ ಡೀಸೆಲ್ ಟ್ಯಾಂಕ್ ಮಾರ್ಗ ಸೇರಿದಂತೆ ವಿವಿಧ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಸುಮಾರು 50 ಲಕ್ಷ ರೂ. ದುರುಪಯೋಗ ಮಾಡುವ ಕಾಂಗ್ರೆಸ್ ಸದಸ್ಯನ ಹುನ್ನಾರಕ್ಕೆ ಸಚಿವ ಖರ್ಗೆ ಬೆಂಬಲ ಸೂಚಿಸಿದ್ದಾರೆ ಎಂದು ಆರೋಪಿಸಿದರು. ವಾರ್ಡ್ 4ರಲ್ಲಿನ ಸಾರ್ವಜನಿಕ ಉದ್ಯಾನಕ್ಕೆ ಕಾಂಪೌಂಡ್ ಗೋಡೆಯನ್ನೇ ನಿರ್ಮಿಸಿಲ್ಲ. ಆದರೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಉದ್ಘಾಟಿಸಿದ್ದಾರೆ.
ಇಂತಹ ಅನೇಕ ಅಪೂರ್ಣ ಕಾಮಗಾರಿಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿ ಚುನಾವಣೆ ಘೋಷಣೆಗೂ ಮುಂಚೆ ಮತಯಾಚನೆ ನಡೆಸಿದ್ದಾರೆ. ಅಲ್ಲದೆ ತಮ್ಮ ಅವಧಿಯಲ್ಲಿ ಅಡಿಗಲ್ಲು ಹಾಕಲಾಗಿದ್ದ ಪುರಸಭೆ ನೂತನ ಕಟ್ಟಡ ಕಾಮಗಾರಿಯನ್ನು ಉದ್ದೇಶಪೂರ್ವಕವಾಗಿ ನನೆಗುದಿಗೆ ತಳ್ಳಿದ್ದಾರೆ. ಚುನಾವಣೆಯಲ್ಲಿ ಜನರು ಇದಕ್ಕೆ ಉತ್ತರ ಕೊಡುತ್ತಾರೆ ಎಂದರು.
ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು
ಮುಕ್ಕಣ್ಣ, ಪುರಸಭೆ ಸದಸ್ಯ ಭೀಮಶಾ ಜಿರೊಳ್ಳಿ, ಎಸ್‌ಸಿ ಮೋರ್ಚಾ ಮಾಜಿ ಜಿಲ್ಲಾ ಉಪಾಧ್ಯಕ್ಷ ಆನಂದ ಇಂಗಳಗಿ ಇದ್ದರು.