ಶಿರಸಿ: ಯಕ್ಷಗಾನ ಮೇಳ ನಂಬಿ ಬದುಕುವ ಕಲಾವಿದರಿಗೆ ಸಂಕಷ್ಟ ದೂರವಾಗಿಲ್ಲ ಎಂದು ಹಿರಿಯ ಯಕ್ಷಗಾನ ಕಲಾವಿದ ಬಳಕೂರು ಕೃಷ್ಣ ಯಾಜಿ ಆತಂಕಿಸಿದರು. ಅವರು ಭಾನುವಾರ ನಗರದ ಟಿಎಂಎಸ್ ಸಭಾಭವನದಲ್ಲಿ ಹಿಲ್ಲೂರು ಯಕ್ಷಮಿತ್ರ ಬಳಗ ಚಾಲನೆ ನೀಡಿ ಮಾತನಾಡಿದರು.
ಟಿವಿ ನೋಡಿದರೆ ಡಿಸೆಂಬರ್, ಜನೆವರಿ ಕಳೆಯುತ್ತದೋ ಗೊತ್ತಿಲ್ಲ. ಅಂಥ ಕಾಲದಲ್ಲಿ ಇದ್ದೇವೆ. ಕಾಲೋಚಿತವಾಗಿ ಸಂಸ್ಥೆಯ ಮೂಲಕ ಆಸಕ್ತ ಪ್ರೇಕ್ಷಕರನ್ನು ಆಧುನಿಕ ವಿಭಾಗದಲ್ಲಿ ತಲುಪಲು ಈ ಸಂಸ್ಥೆ ಕಾರ್ಯ ಮಾಡಿದೆ. ಸಂಸ್ಥೆ ಕಟ್ಟುವಾಗ ಸಿಹಿ ಕಹಿ ಅನುಭವ ಆಗುತ್ತದೆ. ಐದು ಸಾವಿರ ರೂ. ಹೆಚ್ಚು ಕೊಟ್ಟ ಕಲಾಭಿಮಾನಿಗಳೂ, ಬಣ್ಣ ಒರೆಸುವ ಮೊದಲೇ ನಾಪತ್ತೆ ಆಗುವವರೂ ಇದ್ದಾರೆ. ಎಲ್ಲವನ್ನೂ ಸಹಿಸಿಕೊಂಡು ಹೋಗಬೇಕು ಎಂದರು.
ಕಲಾವಿದರ ಸಂಘಟನೆಗೆ ಮುಂದಾಗಲು ಇದು ಸೂಕ್ತ ಕಾಲ. ಸ್ವತಃ ಮೇಳ ಕಟ್ಟಿದ ಅನುಭವ ಇರುವ ನನಗೆ ಇಲ್ಲಿನ ಸಿಹಿ ಕಹಿ ಅನುಭವಗಳ ಬಗ್ಗೆ ತಿಳಿದಿದೆ. ಇದನ್ನು ಸಂಘಟಕರು ಎದುರಿಸಲೇಬೇಕು ಎಂದೂ ಹೇಳಿದರು. ಯಕ್ಷಗಾನ ಕೇವಲ ಮನೋರಂಜನೆಯ ಕಲೆ ಅಲ್ಲ. ಹೊಸ ಶೈಲಿಯ ಪ್ರಯೋಗದ ಜತೆ ಜತೆಗೆ ಪ್ರಚಲಿತದಲ್ಲಿಲ್ಲದ ಪೌರಾಣಿಕ ಪ್ರಸಂಗಗಳನ್ನು ಆಡಿದಲ್ಲಿ ಹೆಚ್ಚು ಯಶಸ್ಸು ಸಿಗಲಿದೆ ಎಂದ ಯಾಜಿ, ಜಿಲ್ಲೆಯ ಯುವಕರಲ್ಲಿ ಯಕ್ಷಗಾನ ಕರಗತವಾಗಿದೆ. ಹೀಗಾಗಿ ಯಕ್ಷಗಾನ ಇಲ್ಲಿ ಎಂದೂ ಜೀವಂತವಾಗಿರುತ್ತದೆ ಎಂದೂ ಹೇಳಿದರು.
ಸಾಲಿಗ್ರಾಮ ಮೇಳದ ಪ್ರಧಾನ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆ ಬೆಳೆಸುತ್ತಲೇ ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯ ಮಾಡಬೇಕು ಎಂಬುದು ನಮ್ಮ ಆಶಯ ಎಂದರು. ಟಿಎಂಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ ಅಧ್ಯಕ್ಷತೆ ವಹಿಸಿದ್ದರು.
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ಯಲ್ಲಾಪುರ ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ಹಿರಿಯ ಭಾಗವತ ಸುರೇಶ ಶೆಟ್ಟಿ ಇತರರು ಇದ್ದರು. ರಮ್ಯಾ ರಾಮಕೃಷ್ಣ ಸ್ವಾಗತಿಸಿದರು. ನಾಗರಾಜ್ ಜೋಶಿ ನಿರ್ವಹಿಸಿದರು. ವಿವೇಕ ಹೆಗಡೆ ವಂದಿಸಿದರು.