ಕಾಪು: ಸಹಕಾರ ಭಾರತಿ ಕಾಪು ತಾಲೂಕು ಘಟಕದ ವತಿಯಿಂದ ಮಂದಾರ ಹೊಟೇಲ್ ನಲ್ಲಿ ನ. 9ರಂದು ಆಯೋಜಿಸಲಾದ ತಾಲೂಕು ಅಭ್ಯಾಸ ವರ್ಗವನ್ನು ಸಿಎ ಜೀವನ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವಕ್ಕಿಂತಲೇ ಮೊದಲೇ ಬಂದಿರುವ ಸಹಕಾರ ತತ್ವಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಹಕಾರಿಗಳೆಲ್ಲರೂ ಜೊತೆಗೂಡಬೇಕಿದೆ. ಗಿರವಿ ಸಾಲಗಳ ಭಾದೆ, ಕೃಷಿ ಸಂಬಂಧಿಸಿದ ತೊಂದರೆಗಳಿಂದ ಜನರನ್ನು ರಕ್ಷಿಸಿ, ಸಹಕಾರಿಗಳ ಆರ್ಥಿಕ ಪುನಶ್ಚೇತನದೊಂದಿಗೆ ಸಮಗ್ರ ಅಭಿವೃದ್ಧಿಯ ಗುರಿಯೊಂದಿಗೆ ಸಹಕಾರ ಸಂಸ್ಥೆಯು ಕೆಲಸ ಮಾಡುತ್ತಿವೆ. ಜನರನ್ನು ಸಹಕಾರಿಯತ್ತ ಹೆಚ್ಚು ಹೆಚ್ಚಾಗಿ ಸೆಳೆಯುವ ಪ್ರಯತ್ನ ಸಹಕಾರ ಭಾರತಿಯ ಮೂಲಕ ನಡೆಯುವಂತಾಗಲಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಮಾತನಾಡಿ, ಸಹಕಾರ ಭಾರತಿಯು ದೇಶದಾದ್ಯಂತ ಬೆಳೆಯುತ್ತಿದ್ದು ದೇಶ, ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಸಂಘಟನೆಯ ಕೆಲಸಗಳು ನಡೆಯುತ್ತಿವೆ. ಸಹಕಾರಿ ಕ್ಷೇತ್ರದ ಶುದ್ದೀಕರಣ, ಅಧುನಿಕೀಕರಣ, ಅಭಿವೃದ್ಧೀಕರಣವೇ ಸಹಕಾರ ಭಾರತಿಯ ಮೂಲ ಉದ್ದೇಶವಾಗಿದೆ ಎಂದರು.
ಸಹಕಾರ ಭಾರತಿ ಕಾಪು ತಾಲೂಕು ಘಟಕದ ಅಧ್ಯಕ್ಷ ಗಂಗಾಧರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಭಾರತಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಮುರಳೀಧರ್ ಪೈ, ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಕೇಶವ ಮೊಯ್ಲಿ, ತಾಲೂಕು ಕೋಶಾಧಿಕಾರಿ ಸುಧಾಮ ಶೆಟ್ಟಿ, ಉಪಸ್ಥಿತರಿದ್ದರು.
ಕಾಪು ತಾಲೂಕು ಅಧ್ಯಕ್ಷ ಗಂಗಾಧರ ಸುವರ್ಣ ಸ್ವಾಗತಿಸಿದರು. ಉಪಾಧ್ಯಕ್ಷ ಚಂದ್ರಶೇಖರ ಕೋಟ್ಯಾನ್ ಉಚ್ಚಿಲ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೇಶವ ಮೊಯ್ಲಿ ಕಾರ್ಯಕ್ರಮ ನಿರೂಪಿಸಿದರು.