Advertisement

ಬಿಐಇಸಿ ಕೋವಿಡ್ ಆರೈಕೆ ಕೇಂದ್ರ ಉದ್ಘಾಟನೆ

07:45 AM Jul 28, 2020 | Suhan S |

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿತರ (ಸೋಂಕಿನ ಲಕ್ಷಣ ಇಲ್ಲದವರ) ಆರೈಕೆ ಮಾಡುವ ಉದ್ದೇಶದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಿರ್ಮಿಸಲಾದ ಕೋವಿಡ್ ಆರೈಕೆ ಕೇಂದ್ರವನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹಾಗೂ ಕಂದಾಯ ಸಚಿವ ಆರ್‌. ಅಶೋಕ ಸೋಮವಾರ ಉದ್ಘಾಟಿಸಿದರು.

Advertisement

ಸೋಮವಾರ ಆರೈಕೆ ಕೇಂದ್ರದ ಸಭಾಂಗಣ 5ರಲ್ಲಿ ವ್ಯವಸ್ಥೆ ಮಾಡಲಾಗಿರುವ 24 ವಾರ್ಡ್‌ಗಳಲ್ಲಿ 1,536 ಹಾಸಿಗೆಗಳನ್ನು ಸೋಂಕಿತರ ಸೇವೆಗೆ ಮುಕ್ತಗೊಳಿಸಲಾಗಿದೆ. ಆರೈಕೆ ಕೇಂದ್ರದಲ್ಲಿ ಒಟ್ಟು 6,500 ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ ಐದು ಸಾವಿರ ಹಾಸಿಗೆಗಳನ್ನು ಸೋಂಕಿತರ ಆರೈಕೆಗೆ ಉಳಿದ 1,500 ಹಾಸಿಗೆಯನ್ನು ವೈದ್ಯಕೀಯ ಮತ್ತು ಸಹಾಯಕ ಸಿಬ್ಬಂದಿಗೆ ಮೀಸಲಿರಿಸಲಾಗಿದೆ. ಆರೈಕೆ ಕೇಂದ್ರದ ಊಟದ ಕೊಠಡಿಯಲ್ಲಿ ಒಂದು ಬಾರಿಗೆ 350 ಮಂದಿ ಆಹಾರ ಸೇವಿಸಬಹುದಾಗಿದೆ. ಕೊಠಡಿಯಲ್ಲಿ ಟಿವಿ, ಆಸನದ ವ್ಯವಸ್ಥೆ, ಸೋಫಾ, ಚೇರ್‌ ಹಾಗೂ ಫ್ಯಾನ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ, ಸ್ನಾನದ ಕೋಣೆ ಹಾಗೂ ರೋಗಿಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಿಯಂತ್ರಣ ಕೊಠಡಿ ನಿರ್ಮಾಣ ಮಾಡಲಾಗಿದೆ.

ಇನ್ನು ಸೋಂಕು ದೃಢಪಟ್ಟವರನ್ನು ದಾಖಲಿಸಿಕೊಳ್ಳಲು ಪ್ರತ್ಯೇಕ ಕೊಠಡಿ ನಿರ್ಮಾಣ ಮಾಡಲಾಗಿದ್ದು, ಕೋವಿಡ್‌ ಆರೈಕೆ ಕೇಂದ್ರವನ್ನು ನಿರ್ವಹಣೆ ಮಾಡಲು ಪ್ರತ್ಯೇಕ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. ಸುರಕ್ಷತಾ ಕ್ರಮವಾಗಿ ಮಾರ್ಷಲ್‌, ಕೆಎಸ್‌ಆರ್‌ಪಿ, ಅಗ್ನಿ ಶಾಮಕ ಸಿಬ್ಬಂದಿ ಇದ್ದಾರೆ. ಅಲ್ಲದೆ, ಸುರಕ್ಷತೆಯ ದೃಷ್ಟಿಯಿಂದ ಅಗ್ನಿಶಾಮಕ ವಾಹನಗಳನ್ನು ಇರಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌. ವಿಶ್ವನಾಥ್‌, ಮೇಯರ್‌ ಗೌತಮ್‌ ಕುಮಾರ್‌, ಉಪಮೇಯರ್‌ ರಾಮ್‌ ಮೋಹನ್‌ ರಾಜು, ಕೋವಿಡ್‌ ಆರೈಕೆ ಕೇಂದ್ರದ ಮುಖ್ಯಸ್ಥ ರಾಜೇಂದ್ರ ಕುಮಾರ್‌ ಕಟಾರಿಯಾ, ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಇದ್ದರು.

ಇಂದಿನಿಂದ ಕೇಂದ್ರ ಬಳಕೆಗೆ ಸಿದ್ಧ : ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ಅತಿದೊಡ್ಡ ಕೋವಿಡ್‌ ಕೇರ್‌ ಕೇಂದ್ರ ಮಂಗಳವಾರದಿಂದಲೇ ಬಳಕೆಗೆ ಲಭ್ಯವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದರು. ಈ ಆರೈಕೆ ಕೇಂದ್ರದಲ್ಲಿ ಸೋಂಕಿತರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 5,000 ಹಾಸಿಗೆಗಳು ಸಿದ್ಧವಾಗಿದ್ದು, 1,536 ಹಾಸಿಗೆಗಳು ಕೂಡಲೇ ಬಳಕೆಗೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು. ಮಂಚದ ಗುಣಮಟ್ಟ ಪರಿಶೀಲನೆ: ಕೋವಿಡ್‌ ಪರಿಕರಗಳ ಗುಣಮಟ್ಟದ ಬಗ್ಗೆ ಕೆಲವರು ತಕರಾರು ತೆಗೆದಿರುವ ಹಿನ್ನೆಲೆಯಲ್ಲಿ ಅವರು ಸೋಮವಾರ, 170 ಕೆಜಿ ತೂಕದ ವ್ಯಕ್ತಿಯೊಬ್ಬರನ್ನು ಹಾಸಿಗೆಯ ಮೇಲೆ ಮಲಗಿಸಿ ಮಂಚದ ಸಾಮರ್ಥ್ಯದ ಪರಿಶೀ ಲನೆ ನಡೆಸಿದರು. ಸೌಲಭ್ಯ ಹಾಗೂ ಗುಣಮಟ್ಟದ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಈ ಕೇಂದ್ರದಲ್ಲಿ ರೋಗಿಗಳು ದಾಖಲಾದಂತೆ ಹಾಸಿಗೆಗಳ ಪ್ರಮಾಣವನ್ನು ಹೆಚ್ಚಿಸಲಾಗುವುದು. ರೋಗ ಲಕ್ಷಣವಿಲ್ಲದವರು ಇಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಇನ್ನು ಕೋವಿಡ್ ಪರೀಕ್ಷಾ ವರದಿ ಇನ್ನು ತಡವಾಗುವುದಿಲ್ಲ. ಸ್ಯಾಂಪಲ್‌ ಕೊಟ್ಟ ಅರ್ಧ ಗಂಟೆಯಲ್ಲೇ ರಿಸಲ್ಡ್‌ ಸಿಗಲಿದೆ. ಎಂದರು.

Advertisement

Udayavani is now on Telegram. Click here to join our channel and stay updated with the latest news.

Next