Advertisement

ಇಂದು ಬಂಟ್ವಾಳ ಅರಣ್ಯಾಧಿಕಾರಿ ಕಚೇರಿ ಉದ್ಘಾಟನೆ

11:22 PM Sep 23, 2019 | sudhir |

ಬಂಟ್ವಾಳ: ಬಿ.ಸಿ.ರೋಡು ಸಮೀಪದ ಗಾಣದಪಡು³ನಲ್ಲಿರುವ ಅರಣ್ಯ ಇಲಾಖೆಯ ನಿವೇಶನದಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಂಟ್ವಾಳ ವಲಯ ಅರಣ್ಯಾಧಿಕಾರಿ ಕಚೇರಿ ಕಟ್ಟಡವು ಸೆ. 24ರಂದು ಉದ್ಘಾಟನೆಗೊಳ್ಳಲಿದ್ದು, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸರಳ ಸಮಾರಂಭದಲ್ಲಿ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

Advertisement

ವಲಯ ಅರಣ್ಯಾಧಿಕಾರಿ ಹಳೆ ಕಚೇರಿಯು ಗಾಣದಪಡು³ವಿನಲ್ಲಿ ಹಾಲಿ ನೂತನವಾಗಿ ನಿರ್ಮಾಣಗೊಂಡಿರುವ ಕಟ್ಟಡದ ಸ್ಥಳದಲ್ಲೇ ನಿರ್ಮಾಣಗೊಂಡಿದ್ದು, ಹಳೆ ಕಟ್ಟಡವನ್ನು ಕೆಡವಿ ಅರಣ್ಯ ಇಲಾಖೆ ಯಿಂದ ಮಂಜೂರಾದ 25 ಲಕ್ಷ ರೂ.ಗಳಲ್ಲಿ ನಿರ್ಮಾಣಗೊಂಡಿತ್ತು. ಹಳೆ ಕಟ್ಟಡವನ್ನು ಕೆಡವಿದ ಹಿನ್ನೆಲೆಯಲ್ಲಿ ಹಾಲಿ ವಲಯ ಅರಣ್ಯಾಧಿಕಾರಿ ಕಚೇರಿಯು ಹಾಲಿ ಬಿ.ಸಿ.ರೋಡು ಸಮೀಪದ ತಲಪಾಡಿ ಯಲ್ಲಿರುವ ಅರಣ್ಯ ಇಲಾಖಾ ಸಿಬಂದಿಯ ವಸತಿ ಗೃಹದಲ್ಲಿ ಕಾರ್ಯಾಚರಿಸುತ್ತಿತ್ತು.

ಹೆದ್ದಾರಿಗಾಗಿ ಕಟ್ಟಡ ಏರಿಕೆ
ಗಾಣದಪಡು³ನಲ್ಲಿ ಬಿ.ಸಿ.ರೋಡು- ಧರ್ಮಸ್ಥಳ ಹೆದ್ದಾರಿಯ ಅಂಚಿನಲ್ಲಿರುವ ಅರಣ್ಯ ಇಲಾಖೆಯ 12 ಸೆಂಟ್ಸ್‌ ನಿವೇಶನದಲ್ಲಿ ನೂತನ ಕಟ್ಟಡ ನಿರ್ಮಾಣ ವಾಗುತ್ತಿದ್ದು, ಈ ಭಾಗದಲ್ಲಿ ಹೆದ್ದಾರಿಯು ಚತುಷ್ಪಥಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನೂತನ ವಲಯ ಅರಣ್ಯಾಧಿಕಾರಿ ಕಚೇರಿ ಕಟ್ಟಡವನ್ನು ಹೆದ್ದಾರಿಯಿಂದ ಏರಿಕೆ ಮಾಡಿ ನಿರ್ಮಿಸಲಾಗಿದೆ. ಅಂದರೆ ಚತುಷ್ಪಥದ ಸಂದರ್ಭ ಹೆದ್ದಾರಿಯನ್ನು ಏರಿಸಿದರೂ ಕಟ್ಟಡಕ್ಕೆ ಯಾವುದೇ ತೊಂದರೆ ಯಾಗಬಾರದು ಎಂಬ ದೂರದೃಷ್ಟಿಯಿಂದ ಈ ರೀತಿ ನಿರ್ಮಿಸಲಾಗಿದೆ.

ನೂತನ ಕಟ್ಟಡವು ಮಹಡಿಯಿಲ್ಲದೆ ನೆಲ ಅಂತಸ್ತಿನಲ್ಲೇ ನಿರ್ಮಾಣವಾಗ ಬೇಕಿದ್ದರೂ, ಹೆದ್ದಾರಿಯ ಕಾರಣಕ್ಕೆ 30×40 ಅಂದರೆ 1,200 ಚದರ ಅಡಿ ವಿಸ್ತೀರ್ಣದ 2 ಫ್ಲೋರ್‌ಗಳು ನಿರ್ಮಾಣ ವಾಗಿವೆ. ಅಂದರೆ ತಳ ಭಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದ್ದು, ಮೇಲ್ಭಾಗದಲ್ಲಿ ಕಚೇರಿ ಇರುತ್ತದೆ.
ಈ ರೀತಿಯ ಬದಲಾವಣೆಯ ಹಾಗೂ ಆವರಣ ಗೋಡೆ, ಇಂಟರ್‌ಲಾಕ್‌ ವ್ಯವಸ್ಥೆ ಹೀಗೆ ಹೆಚ್ಚುವರಿ ಖರ್ಚಿನ ಹಿನ್ನೆಲೆಯಲ್ಲಿ ಪ್ರಾರಂಭದ 25 ಲಕ್ಷ ರೂ.ಗಳು ಕಡಿಮೆಯಾಗುತ್ತಿರುವ ಕಾರಣದಿಂದ 5 ಲಕ್ಷ ರೂ.ಗಳ ಹೆಚ್ಚುವರಿ ಅನುದಾನಕ್ಕಾಗಿ ವಲಯ ಕಚೇರಿಯು ಅರಣ್ಯ ಇಲಾಖೆಗೆ ಮನವಿ ಮಾಡಿದೆ. ಪ್ರಾರಂಭದ 25 ಲಕ್ಷ ರೂ.ಗಳಲ್ಲಿ 20 ಲಕ್ಷ ರೂ.ಗಳು ಗುತ್ತಿಗೆದಾರರ ಕೈ ಸೇರಿದೆ ಎಂದು ಮೂಲಗಳು ತಿಳಿಸಿವೆ.

ದಸರಾ ಬಳಿಕ ಶಿಫ್ಟ್‌
ಬಂಟ್ವಾಳ ವಲಯ ಅರಣ್ಯಾಧಿಕಾರಿ ಯವರ ನೂತನ ಕಚೇರಿ ಕಟ್ಟಡ ಪ್ರಸ್ತುತ ಉದ್ಘಾಟನೆಗೊಂಡರೂ, ಕಚೇರಿಯು ದಸರಾ ಹಬ್ಬ ಮುಗಿದ ಬಳಿಕವೇ ತಾತ್ಕಾಲಿಕ ವ್ಯವಸ್ಥೆಯಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಹೊಸ ಕಚೇರಿಯ ಸಣ್ಣಪುಟ್ಟ ಕೆಲಸ ಕಾರ್ಯಗಳು ಮುಗಿದ ಬಳಿಕ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಕಚೇರಿಯ ಅಧಿಕೃತ ಪ್ರವೇಶ ನಡೆಯಲಿದೆ ಎಂದು ಕಚೇರಿ ಮೂಲಗಳು ತಿಳಿಸಿವೆ.

Advertisement

 ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ
ಬಂಟ್ವಾಳ ವಲಯ ಅರಣ್ಯ ಕಚೇರಿಯ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಗೊಂಡು ಸರಳ ರೀತಿಯಲ್ಲಿ ಉದ್ಘಾಟನೆಗೊಳ್ಳುತ್ತದೆ. ಹೊಸ ಕಟ್ಟಡಕ್ಕೆ ಪ್ರಾರಂಭದಲ್ಲಿ 25 ಲಕ್ಷ ರೂ.ಗಳು ಮಂಜೂರಾಗಿದ್ದು, ಆದರೆ ಕೆಲವೊಂದು ಹೆಚ್ಚುವರಿ ನಿರ್ಮಾಣಗಳಿಂದ ಹಿಂದಿನ ಅನುದಾನ ಕೊರತೆಯಾಗಿದ್ದು, 5 ಲಕ್ಷ ರೂ. ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ವಲಯ ಕಚೇರಿಯು ದಸರಾ ಹಬ್ಬದ ಬಳಿಕ ತಾತ್ಕಾಲಿಕ ವ್ಯವಸ್ಥೆಯಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.
– ಬಿ. ಸುರೇಶ್‌, ವಲಯ ಅರಣ್ಯಾಧಿಕಾರಿ, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next