ರಬಕವಿ-ಬನಹಟ್ಟಿ: ತಾಲ್ಲೂಕಿನ ಜಗದಾಳ ಗ್ರಾಮ ಪಂಚಾಯ್ತಿ ಕಾರ್ಯಾಲಯದ ಉದ್ಘಾಟನೆಯ ಸಂದರ್ಭದಲ್ಲಿ ಗೊಂದಲ ನಿರ್ಮಾಣವಾಗಿ ಭಾನುವಾರ ರಾತ್ರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಫೆ. 4 ರಂದು ನೂತನ ಕಟ್ಟಡದ ಉದ್ಘಾಟನೆಯಾಗಬೇಕಾಗಿತ್ತು. ಆದರೆ ಸ್ಥಳೀಯ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು ಕೂಡಿಕೊಂಡು ಸೋಮವಾರದಂದು ಸಾಂಕೇತಿಕವಾಗಿ ಉದ್ಘಾಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಎರಡು ರಾಜಕೀಯ ಪಕ್ಷದ ಮಧ್ಯದಲ್ಲಿಯ ಭಿನ್ನಾಭಿಪ್ರಾಯಗಳಿಂದಾಗಿ ಭಾನುವಾರ ರಾತ್ರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತು.
ಭಾನುವಾರ ಜಗದಾಳ ಗ್ರಾಮದಲ್ಲಿ ಸಿಪಿಐ ಜೆ.ಕರುಣೇಶಗೌಡ, ಮೂವರು ಪಿಎಸ್‌ಐ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರು ಬೀಡು ಬಿಟ್ಟಿದ್ದರು.
ಈಗ ಉದ್ಘಾಟನೆ ಮಾಡಿದರೆ ಸರ್ಕಾರಿ ನಿಯಮಾಳಿಗಳನ್ನು ಮೀರಿದಂತಾಗುತ್ತದೆ. ಆದ್ದರಿಂದ ಫೆ. 4 ರಂದು ಉದ್ಘಾಟನೆ ಮಾಡುವುದಾಗಿ ಅಧಿಕಾರಿಗಳು ತಿಳಿ ಹೇಳಿದರು. ಅಧಿಕಾರಿಗಳು ವಿನಂತಿ ಮಾಡಿಕೊಂಡರೂ ಯಾವುದೆ ಪ್ರಯೋಜನವಾಗಲಿಲ್ಲ. ಆಗ ಕಾರ್ಯಕ್ರಮದಲ್ಲಿ ಸರ್ಕಾರಿ ನಿಯಮಗಳನ್ನು ಉಲ್ಲಂಘಣೆ ಮಾಡಿರುವುದರಿಂದ ಪಂಚಾಯ್ತಿ ಕಾರ್ಯಾಲಯಕ್ಕೆ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ ಕೀಲಿ ಹಾಕಿದರು.
ಸೋಮವಾರ ಬಳಗ್ಗೆ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು ಹಳೆಯ ಕಟ್ಟಡಕ್ಕೂ ಕೀಲಿಯನ್ನು ಹಾಕಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳಿಗೆ ಆಗ್ರಹಿಸಿದರು. ಕೆಲ ಹೊತ್ತು ಕಾರ್ಯಾಲಯಕ್ಕೆ ಸಿಬ್ಬಂದಿ ವರ್ಗದವರ ಕೀಲಿಯನ್ನು ಹಾಕಿದ ಘಟನೆ ನಡೆಯಿತು.