Advertisement

ಅ. 1ರಂದು ಮುಖ್ಯಮಂತ್ರಿಯಿಂದ ಉದ್ಘಾಟನೆ

11:45 AM Sep 28, 2020 | Suhan S |

ಕಾಸರಗೋಡು, ಸೆ. 27: ಮಂಜೇಶ್ವರ ಬಂದರು ಅ. 1ರಂದು ಉದ್ಘಾಟನೆಗೊಳ್ಳಲಿದೆ. ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಬಂದರಿಗೆ ಚಾಲನೆ ನೀಡುವರು. ಇದರೊಂದಿಗೆ ಕೊಯಿಲಾಂಡಿಯ ಬಂದರನ್ನೂ ಅವರು ಉದ್ಘಾಟಿಸುವರು.

Advertisement

ಕೇಂದ್ರ ಮೀನುಗಾರಿಕೆ    ಸಚಿವ ಗಿರಿರಾಜ್‌ ಸಿಂಗ್‌ ಮುಖ್ಯ ಅತಿಥಿಯಾಗಿ ರುವರು. ರಾಜ್ಯ ಮೀನುಗಾರಿಕೆ ಸಚಿವೆ ಮೆರ್ಸಿ ಕುಟ್ಟಿಯಮ್ಮ ಅಧ್ಯಕ್ಷತೆ ವಹಿಸುವರು. ಕಂದಾಯ ಸಚಿವ ಇ. ಚಂದ್ರಶೇಖರನ್‌, ಸಂಸದ ರಾಜ್‌ ಮೋಹನ್‌ ಉಣ್ಣಿತ್ತಾನ್‌, ಶಾಸಕ ಎಂ.ಸಿ. ಖಮರುದ್ದೀನ್‌ ಉಪಸ್ಥಿತರಿರುವರು.

10 ಸಾವಿರ ಮಂದಿಗೆ ಪ್ರಯೋಜನ : ಮಂಜೇಶ್ವರದಲ್ಲಿ ಮೀನುಗಾರಿಕೆ ಬಂದರು ನಿರ್ಮಾಣಗೊಳ್ಳಬೇಕು ಎಂಬ ಬೇಡಿಕೆ ತುಂಬ ಹಳೆಯದು. ಜಿಲ್ಲೆಯ ಕೊಯಿಪ್ಪಾಡಿ, ಶಿರಿಯ, ಬಂಗ್ರ ಮಂಜೇಶ್ವರ ಮತ್ಸ್ಯ ಗ್ರಾಮಗಳ ಹತ್ತು ಸಾವಿರ ಮೀನುಗಾರರು ಈ ಬಂದರು ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಹಾರ್ಬರ್‌ ಕಾರ್ಯಕಾರಿ ಎಂಜಿನಿಯರ್‌ ಎ. ಮುಹಮ್ಮದ್‌ ಅಶ್ರಫ್‌ ತಿಳಿಸಿದ್ದಾರೆ. ಬಂದರು ಚಟುವಟಿಕೆ ಆರಂಭಿಸುವ ಮೂಲಕ ಸ್ಥಳೀಯ 1,200ಕ್ಕೂ ಅಧಿಕ ಮೀನುಗಾರ ಕಾರ್ಮಿಕರಿಗೆ ಪ್ರತ್ಯಕ್ಷವಾಗಿ, 4,800 ಮಂದಿಗೆ ಪರೋಕ್ಷವಾಗಿ ಪ್ರಯೋಜನ ಲಭಿಸಲಿದೆ. ಮೀನುಗಾರಿಕೆ ಸಂಬಂಧ ಮಾರಾಟ, ರಫ್ತು ಸಂಬಂಧ ವಲಯಗಳ ಮಂದಿಗೆ ಉದ್ಯೋಗಾವಕಾಶಗಳು ಅಧಿಕಗೊಳ್ಳಲಿವೆ.

48.80 ಕೋಟಿ ರೂ.ಯೋಜನೆ :  ಮಂಜೇಶ್ವರ ಬಂದರು ಒಟ್ಟು 48.80 ಕೋಟಿ ರೂ.ಗಳ ಯೋಜನೆಯಾಗಿದ್ದು, ಇದರಲ್ಲಿ ಶೇ.75 ಕೇಂದ್ರ ಸರಕಾರದ ಪಾಲು, ಶೇ.25 ರಾಜ್ಯ ಸರಕಾರದ ಪಾಲು ಇರುವುದು. ಯೋಜನೆಗಾಗಿ ಈಗಾಗಲೇ 45.71 ಕೋಟಿ ರೂ. ವೆಚ್ಚ  ಮಾಡಲಾಗಿದೆ.

ಪುಣೆಯ ಕೇಂದ್ರ ಸರಕಾರಿ ಸಂಸ್ಥೆ ಸೆಂಟ್ರಲ್‌ ವಾಟರ್‌ ಆ್ಯಂಡ್‌ ಪವರ್‌ ರಿಸರ್ಚ್‌ ಸ್ಟೇಷನ್‌ ನಡೆಸಿರುವ ಅಧ್ಯಯನ ತಳಹದಿಯಲ್ಲಿ ಈ ಹಾರ್ಬರ್‌ನ  ರೂಪರೇಖೆ ಸಿದ್ಧಗೊಂಡಿದೆ. ಹಾರ್ಬರ್‌ ಬೇಸಿನ್‌ನೊಂದಿಗೆ ಸೇರಿಕೊಂಡು ಮುಸೋಡಿ ಪ್ರದೇಶದಲ್ಲಿ 8.92 ಎಕ್ರೆ, ಹೊಸಬೆಟ್ಟು ಪ್ರದೇಶದಲ್ಲಿ 2.85 ಎಕ್ರೆ ಸಹಿತ 11.77 ಎಕ್ರೆ ಜಾಗದಲ್ಲಿ ನಿರ್ಮಾಣ ಚಟುವಟಿಕೆಗಳಿಗಾಗಿ ಡ್ರೆಜಿಂಗ್‌ ನಡೆಸಲಾಗಿದೆ.

Advertisement

ಏನೆಲ್ಲ ಸೌಲಭ್ಯಗಳು ಇರಲಿವೆ? :ಮೀನುಗಾರಿಕೆ ಬೋಟುಗಳು ದಡಸೇರುವ ನಿಟ್ಟಿನಲ್ಲಿ ಹಾರ್ಬರ್‌ ಬೇಸಿನ್‌ ಒದಗಿಸಲು 490 ಮೀಟರ್‌, 530 ಮೀಟರ್‌ ಉದ್ದನೆಯ ಉತ್ತರ ಮತ್ತು ದಕ್ಷಿಣದಲ್ಲಿ ಎರಡು ಬ್ರೇಕ್‌ ವಾಟರ್‌ಗಳನ್ನು ನಿರ್ಮಿಸಲಾಗಿದೆ. 275 ಬೋಟುಗಳಿಗೆ ನಿಲ್ಲಲು ಅವಕಾಶವಿದೆ. ಯೋಜನೆ ಸಂಬಂಧ ಚಟುವಟಿಕೆಗಳು ಮುಸೋಡಿ ಪ್ರದೇಶದ ಜಾಗದಲ್ಲಿ ನಡೆದಿವೆ. ಯಾಂತ್ರೀಕೃತ ಬೋಟುಗಳಿಗೆ 80 ಮೀಟರ್‌, ಕಿರು ದೋಣಿಗಳಿಗಾಗಿ 20 ಮೀಟರ್‌ ಸಹಿತ 100 ಮೀಟರ್‌ ವಾರ್ಫ್‌ ಮತ್ತು ಹರಾಜು ಕೇಂದ್ರವನ್ನೂ ನಿರ್ಮಿಸಲಾಗಿದೆ. ಅಪ್ರೋಚ್‌ ರಸ್ತೆ, ಪಾರ್ಕಿಂಗ್‌ ಏರಿಯಾ, ವರ್ಕ್‌ ಶಾಪ್‌, ಶಾಪ್‌ ಬಿಲ್ಡಿಂಗ್‌, ರೆಸ್ಟ್‌ ಶೆಡ್‌, ಶೌಚಾಲಯ, ನೀರು ಸಂಗ್ರಹಾಗಾರ, ಅತಿಥಿಗೃಹ, ವಿದ್ಯುದೀಕರಣ ಸಹಿತ ಎಲ್ಲ ಹಿನ್ನೆಲೆ ಸೌಲಭ್ಯ ಸಿದ್ಧಪಡಿಸಲಾಗಿದೆ. ಮಂಜೇಶ್ವರ ಬ್ರೇಕ್‌ ವಾಟರ್‌ನ ಉದ್ದ ಹೆಚ್ಚಿಸುವ ಚಟುವಟಿಕೆ ಮುಂದುವರಿಯುತ್ತಿದೆ ಎಂದು ಕಾರ್ಯಕಾರಿ ಎಂಜಿನಿಯರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next