Advertisement

49.75  ಕೋಟಿ ರೂ.,ಗಳ ಕಾಮಗಾರಿಗೆ ಚಾಲನೆ

01:12 PM Dec 11, 2017 | Team Udayavani |

ನಂಜನಗೂಡು: ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿ ಮಂಜುರಾಗಿದ್ದ 49.75 ಕೋಟಿ ಅನುದಾನಕ್ಕೆ ಶಾಸಕ ಕಳಲೆ ಕೇಶವ ಮೂರ್ತಿ ಚಾಲನೆ ನೀಡಿದರು. 2.3 ಕೋಟಿ ವೆಚ್ಚದಲ್ಲಿ ಹುರಾ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿನ ಶಿಕ್ಷಕರ ವಸತಿಗೃಹ,

Advertisement

ಕಾಂಪೌಂಡ್‌ ಹಾಗೂ ಅಡುಗೆಮನೆ,  95 ಲಕ್ಷ ವೆಚ್ಚದಲ್ಲಿ ಹುರಾ-ಯಡಹಳ್ಳಿಯ 2.6 ಕಿ.ಮೀ ಮುಖ್ಯರಸ್ತೆ ಡಾಂಬರೀಕರಣ, 84 ಲಕ್ಷದಲ್ಲಿ ಮಲ್ಕುಂಡಿ-ಕಗ್ಗಲಿಹುಂಡಿ 4.8 ಕಿ.ಮೀ ರಸ್ತೆ ಅಗಲೀಕರಣ, 60 ಲಕ್ಷದಲ್ಲಿ ಕಾರ್ಯ-ಉಸ್ಕೂರಿನ 3.35ಕಿ.ಮೀ ರಸ್ತೆ ಅಭಿವೃದ್ಧಿ, 36 ಲಕ್ಷದಲ್ಲಿ ಹೆಗ್ಗಡಹಳ್ಳಿ-ಕಬಿನಿ ಬಲದಂಡೆ ನಾಲೆ ರಸ್ತೆ ಅಭಿವೃದ್ಧಿ,

50 ಲಕ್ಷದಲ್ಲಿ ಹುಲ್ಲಹಳ್ಳಿ ಬಸ್‌ ನಿಲ್ದಾಣದ ಕಾಂಕ್ರಿಟ್‌ ನೆಲಹಾಸು ಹಾಗೂ ಮಹಿಳೆಯರು ನಿರೀಕ್ಷಣಾ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿದರು. ಬಳಿಕ, ಹುರಾ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿನ ಸಮಾರಂಭದಲ್ಲಿ ಮಾತನಾಡಿದರು.

ಮುಂದಿನ ಮಾರ್ಚ್‌ ವೇಳೆಗೆ ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯ ಹಂತ ತಲುಪಲಿದೆ. ನಂಜನಗೂಡು ವಿಧಾನಸಭಾ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ತೋರುತ್ತಿರುವ ಸಿಎಂ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದಲ್ಲಿ ವಿವಿಧ ಕಾಮಗಾರಿಗಳಿಗಾಗಿ 49.75 ಕೋಟಿ ರೂ. ಘೋಷಣೆ ಮಾಡಿದ್ದಾರೆ.

2 ಅಧಿವೇಶನದಲ್ಲಿ ಭಾಗವಹಿಸಿರುವ ತಾನು ಎಲ್ಲಾ ಸಚಿವರನ್ನು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುವಂತೆ ಕೋರಿಕೊಂಡಿದ್ದೆ. ಅಂತೆಯೇ ವಿವಿಧ ಇಲಾಖೆಗಳಿಂದ ಹೆಚ್ಚುವರಿ 20 ಕೋಟಿ ರೂ., ಅನುದಾನ ಮಂಜೂರಾಗಿದೆ ಎಂದು ಶಾಸಕರು ವಿವರಿಸಿದರು.

Advertisement

 ಡಿ.12ರಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ನಂಜನಗೂಡು ಕ್ಷೇತ್ರ ಅಭಿವೃದ್ಧಿ ಕುರಿತು  ಪ್ರತ್ಯೇಕ ಸಭೆ ಕರೆದಿದ್ದಾರೆ. ಸಭೆಯಲ್ಲಿ ವಿವಿಧ ನಿಗಮಗಳಿಂದ ಸಿಗುವ ಸವಲತ್ತುಗಳಿಗೆ ಕ್ಷೇತ್ರದ ಫ‌ಲಾನುಭವಿಗಳಿಗೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು. 

ಹುರಾ ಗ್ರಾಮಕ್ಕೆ ಸುಸಜ್ಜಿತ ಬಸ್‌ ನಿಲ್ದಾಣಕ್ಕೆ ಅನುದಾನ ಮಂಜೂರಾಗಿದೆ. ಡಿ.18ರಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಆಗಮಿಸಿ ಭೂಮಿಪೂಜೆ ನೆರವೇರಿಸಲಿದ್ದಾರೆ. ಹುರಾ ಹಾಗೂ ಯಡಹಳ್ಳಿ ಮುಖ್ಯರಸ್ತೆ ಅಗಲೀಕರಣ ಈ ಭಾಗದ ಜನರ ಬಹುದಿನ ಬೇಡಿಕೆಯಾಗಿತ್ತು. ಈಗ ಸಾಕಾರಗೊಳ್ಳುವ ಸಂದರ್ಭ ಒದಗಿ ಬಂದಿದೆ ಎಂದರು. 

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಮಂಗಳಾ, ತಾಪಂ ಸದಸ್ಯ ಶಿವಣ್ಣ, ತಹಶೀಲ್ದಾರ್‌ ಎಂ.ದಯಾನಂದ್‌, ತಾಪಂ ಇಒ ಬಿ.ರೇವಣ್ಣ, ತಾಪಂ ಮಾಜಿ ಅಧ್ಯಕ್ಷರಾದ ಬಿ.ಎಂ.ನಾಗೇಶ್‌ರಾಜ್‌, ಚಾಮರಾಜು, ಗ್ರಾಪಂ ಅಧ್ಯಕ್ಷೆ ಮಹದೇವಮ್ಮ ಬಸವರಾಜು, ಜಿಪಂ ಮಾಜಿ ಸದಸ್ಯ ಕೆ.ಮಾರುತಿ, ಗ್ರಾಪಂ ಸದಸ್ಯ ಟಿ.ಸುರೇಶ್‌ ಹಗಿನವಾಳು, ಬಸವಣ್ಣ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next