ಬೆಂಗಳೂರು: ಇತಿಹಾಸ ಪ್ರಸಿದ್ಧ ಯಡಿಯೂರು ಕೆರೆಯಲ್ಲಿ ನೂತನವಾಗಿ ಆರಂಭಿಸಿರುವ ಶಾಂತಲಾ ದೋಣಿ ವಿಹಾರ ಕೇಂದ್ರಕ್ಕೆ ಚಾಲನೆ ನೀಡಿದ ಮೇಯರ್ ಗಂಗಾಂಬಿಕೆ ಹಾಗೂ ಉಪಮೇಯರ್ ಭದ್ರೇಗೌಡ ಅವರು, ಸ್ವತಃ ದೋಣಿ ವಿಹಾರ ನಡೆಸಿದರು.
ಯಡಿಯೂರು ಕೆರೆಗೆ ತ್ಯಾಜ್ಯನೀರು ಪ್ರವೇಶಿಸಿದಂತೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಗೆ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಪಕ್ಷಿಧಾಮವನ್ನಾಗಿ ಪರಿವರ್ತಿಸಲಾಗಿರುವುದರಿಂದ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ದೋಣಿ ವಿಹಾರ ಕೇಂದ್ರವನ್ನು ಆರಂಭಿಸಲಾಗಿದೆ.
ಕೆರೆಗೆ ನಿತ್ಯ ನೂರಾರು ಪಕ್ಷಿಗಳು ಬರುವುದರಿಂದ ಮೋಟಾರು ದೋಣಿಗಳನ್ನು ಬಳಿಸಿದರೆ ಪಕ್ಷಿಗಳಿಗೆ ಹಾನಿಯಾಗುತ್ತದೆ ಎಂಬ ಕಾರಣದಿಂದ ಪೆಡಲ್ ಬೋಟ್‌ಗಳನ್ನು ಮಾತ್ರ ಉಪಯೋಗಿಸಲಾಗುತ್ತಿದೆ. ವಾರ್ಡ್‌ನಲ್ಲಿ ಈಗಾಗಲೇ ಔಷಧ ಸಸಿಗಳನ್ನು ಒಳಗೊಂಡ ಉದ್ಯಾನಗಳು, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ, ಕಡಿಮೆ ವೆಚ್ಚದ ರಸ್ತೆಗಳು, ಸುಸಜ್ಜಿತ ಬ್ಯಾಡ್ಮಿಂಟನ್ ಕ್ರೀಡಾಂಗಣ ನಿರ್ಮಿಸಿದ್ದು, ಇದೀಗ ಅವುಗಳ ಸಾಲಿಗೆ ದೋಣಿ ವಿಹಾರ ಕೇಂದ್ರ ಸೇರಿಕೊಂಡಿದೆ ಎಂದು ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಹರ್ಷ ವ್ಯಕ್ತಪಡಿಸಿದರು.
ಕೆರೆಯ ಇತಿಹಾಸದ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಮಾಜಿ ಆಡಳಿತ ಪಕ್ಷ ಎನ್.ಆರ್.ರಮೇಶ್, ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದ್ದ ಯಡಿಯೂರು ಗ್ರಾಮದೇವತೆ ಗಾಂಧಾಳಮ್ಮ ಪಾದುಕೆಗಳಿಗೆ ಪೂಜೆ ಸಲ್ಲಿಸಲು ಕ್ರಿ.ಶ.1107ರಲ್ಲಿ ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಪಟ್ಟದ ರಾಣಿ ಶಾಂತಲಾ ಅವರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಮಾಡಿದ್ದರು.
ಹೀಗಾಗಿ ದೋಣಿ ವಿಹಾರ ಕೇಂದ್ರಕ್ಕೆ ಶಾಂತಲಾ ದೋಣಿ ವಿಹಾರ ಕೇಂದ್ರ ಎಂದು ಹೆಸರಿಡಲಾಗಿದೆ ಎಂದರು. ಕೆರೆಯಲ್ಲಿ ಬಳಕೆ ಮಾಡುತ್ತಿರುವ ದೋಣಿಗಳಿಗೆ ಹೊಯ್ಸಳ ರಾಜವಂಶದ ಪ್ರಮುಖರಾದ ಬಿಟ್ಟಿದೇವ, ಶಾಂತಲಾ, ಒಂದನೆ ಬಲ್ಲಾಳ, ಎರಡನೇ ನರಸಿಂಹ, ಸೋಮೇಶ್ವರ, ಎರಡನೇ ಬಲ್ಲಾಳ ಅವರ ಹೆಸರುಗಳನ್ನು ಇರಿಸಲಾಗಿದೆ.