Advertisement

ಸಮೂಹ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

11:57 AM Nov 23, 2018 | |

ಮೈಸೂರು: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಸಮಯ ಮೊಬೈಲ್‌ನಲ್ಲಿ ತಲ್ಲೀನರಾಗುತ್ತಿದ್ದು, ಬಣ್ಣದ ಪ್ರಪಂಚವನ್ನು ಅರಿಯುವ ಆಸಕ್ತಿ ತೋರುತ್ತಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಆರ್‌.ಮೂಗೇಶಪ್ಪ ಬೇಸರ ವ್ಯಕ್ತಪಡಿಸಿದರು. 

Advertisement

ವಿಜಯನಗರದ 2ನೇ ಹಂತದ ಕಲಾನಿಕೇತನ ಆರ್ಟ್‌ ಗ್ಯಾಲರಿಯಲ್ಲಿ ಆಯೋಜಿಸಿರುವ ಏಳು ದಿನಗಳ ಸಮೂಹ ಚಿತ್ರಕಲಾ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಬಣ್ಣದ ಮೇಲೆ ಬದುಕು ನಿಂತಿದ್ದು, ಬಣ್ಣವಿಲ್ಲದಿದ್ದರೆ ಬದುಕು ನಶ್ವರ. ಚಿತ್ರಕಲೆ ಮನುಷ್ಯನ ಜೀವನದಲ್ಲಿ ಮುಖ್ಯ ಪಾತ್ರವಹಿಸುತ್ತದೆ.

ಕಲಾವಿದರು ತಮ್ಮಲ್ಲಿ ಸುಪ್ತವಾಗಿರುವ ಪ್ರತಿಬಿಂಬ ಹೊರಹಾಕಲು ಚಿತ್ರರಚಿಸಿ ಪ್ರದರ್ಶನ ಮಾಡುತ್ತಿದ್ದು, ಆರ್ಟ್‌ ಆಫ್ ಯೂನಿಟಿ ಸಂಘ ರಚಿಸಿ, ಚಿತ್ರಕಲೆ ಪ್ರದರ್ಶಿಸುವುದು ಸುಲಭದ ಕೆಲಸವಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ತಲ್ಲೀನರಾಗುತ್ತಿದ್ದು, ಬಣ್ಣದ ಪ್ರಪಂಚವನ್ನು ಅರಿಯುವುದಕ್ಕೆ ಹೋಗುತ್ತಿಲ್ಲ. ಇದರಿಂದಾಗಿ ಒಂದೊಮ್ಮೆ ಕಲೆ ತನ್ನತನವನ್ನು ಕಳೆದುಕೊಂಡರೆ ಕಲಾವಿದರಿಗೆ ನೋವಾಗಲಿದ್ದು, ಇದನ್ನು ಪುನರ್‌ ನಿರ್ಮಿಸುವುದು ಕಷ್ಟಕರ ಎಂದರು. 

ಪ್ರದರ್ಶನದಲ್ಲಿ ವಿವಿಧ ಕಲಾವಿದರು ರಚಿಸಿರುವ ವೈವಿಧ್ಯತೆ ಸಾರುವ ಚಿತ್ರಗಳು ನೋಡುಗರನ್ನು ಸೆಳೆಯುವಂತಿವೆ. ವಿಜಯಪುರದಿಂದ ಪಿ.ಎಸ್‌.ಕಡೆಮನಿ, ತುಮಕೂರಿನಿಂದ ಕಿಶೋರ್‌ ಕುಮಾರ್‌, ಹಾಸನದಿಂದ ಬಿ.ಎಸ್‌.ದೇಸಾಯಿ, ಧಾರವಾಡದಿಂದ ಗಾಯತ್ರಿ ದೇಸಾಯಿ, ಮಧು ದೇಸಾಯಿ, ಬೆಂಗಳೂರಿನಿಂದ ವೇಣುಗೋಪಾಲ್‌ ಮತ್ತು ಮೈಸೂರಿನಿಂದ ಡಾ.ವಿಠ್ಠ ಲರೆಡ್ಡಿ ಚುಳಕಿ ಅವರು ತಾವು ಬಿಡಿಸಿದ ಚಿತ್ರಗಳನ್ನು ಪ್ರದರ್ಶನಕ್ಕೆ ಇರಿಸಿದ್ದು, ಒಂದೊಂದು ರೀತಿಯ ವಿಶೇಷತೆಯಿಂದ ಕೂಡಿರುವ ಈ ಚಿತ್ರಗಳು ರಾಜ್ಯದ ವೈವಿಧ್ಯತೆಯನ್ನು ಸಾರುತ್ತಿವೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‌ ಬಾಬು, ಕಲಾನಿಕೇತನ ಸ್ಕೂಲ್‌ ಆಫ್ ಆರ್ಟ್‌ ಪ್ರಾಚಾರ್ಯ ಕೆ.ಸಿ.ಮಹದೇವಶೆಟ್ಟಿ ಇತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next