Advertisement

ಸಮರ್ಪಕವಾಗಿ ಪೂರೈಕೆಯಾಗದ ಶುದ್ಧ ನೀರು

03:01 PM Mar 07, 2020 | Suhan S |

ಮುಂಡರಗಿ: ತಾಲೂಕಿನಲ್ಲಿ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯು ಅನುಷ್ಠಾನಗೊಂಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸಾಕಾರಗೊಂಡಿಲ್ಲ. ಪ್ರತಿದಿನವು ಶುದ್ಧ ನೀರು ಕುಡಿಯಬೇಕಾಗಿದ್ದ ಜನರಿಗೆ ನೀರು ದೊರಕದೇ ಇರುವುದು ತುಂಬಾ ಸಂಕಷ್ಟಕರ ಸ್ಥಿತಿಯನ್ನು ತಂದೊಡ್ಡಿದೆ. ಜೊತೆಗೆ ಸ್ಥಳೀಯ ಜಲಾಗಾರದಲ್ಲಿ ಸಂಗ್ರಹವಾದ ನದಿ ನೀರಿನೊಂದಿಗೆ ಕೊಳವೆಬಾವಿಯ ನೀರನ್ನೂ ನಲ್ಲಿಗಳಿಗೆ ಬೀಡುವುದರಿಂದ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುತ್ತಿದೆ.

Advertisement

ತುಂಗಭದ್ರಾ ನದಿಯ ನೀರು ಪೈಪ್‌ಲೈನಿನ ಮೂಲಕ ತಾಲೂಕಿನ ಜಾಲವಾಡಗಿ ಗ್ರಾಮದಲ್ಲಿರುವ ಶುದ್ಧೀಕರಣ ಘಟಕಕ್ಕೆ ತಲುಪಿ ಶುದ್ಧೀಕರಿಸಿ, ನಂತರ ಪ್ರತಿ ಗ್ರಾಮಗಳಿಗೂ ಸರಬರಾಜು ಮಾಡಲಾಗುತ್ತದೆ. ಈ ಶುದ್ಧೀಕರಣ ಘಟಕವು ಖಾಸಗಿ ಕಂಪನಿಯ ಉಸ್ತುವಾರಿಯಲ್ಲಿ ಇದ್ದು ನದಿ ನೀರು ಶುದ್ಧೀಕರಿಸಿ, ಶುದ್ಧ ನೀರನ್ನು ಸರಬರಾಜು ಮಾಡುವುದು ಕೂಡಾ ಈ ಕಂಪನಿಯ ಕೆಲಸವಾಗಿದೆ. ಆದರೇ ಹಲವಾರು ತಾಂತ್ರಿಕ ತೊಂದರೆಗಳಿಂದ ಪ್ರತಿ ಗ್ರಾಮಕ್ಕೂ ಶುದ್ಧ ನೀರು ತಲುಪಲು ವಿಳಂಬವಾಗುತ್ತಿದೆ. ನೀರು ಸರಬರಾಜಿನ ಪೈಪ್‌ಲೈನ್‌ನ ಸೋರುವಿಕೆ, ಪೈಪ್‌ನಲ್ಲಿ ತಡೆಯುಂಟಾಗುವುದರಿಂದ ಶುದ್ಧ ನೀರು ಹಳ್ಳಿಗಳಿಗೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ.

ಜಾಲವಾಡಗಿಯಲ್ಲಿರುವ ನೀರು ಶುದ್ಧೀಕರಣದ ಘಟಕವು ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನ 212 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ. ಮುಂಡರಗಿ ಪಟ್ಟಣಕ್ಕೆ 6 ಎಂಎಲ್‌ಡಿ ಹಾಗೂ 56 ಹಳ್ಳಿಗಳಿಗೆ ಪ್ರತಿದಿನ 49 ಎಂಎಲ್‌ಡಿಯಷ್ಟು ತುಂಗಭದ್ರಾ ನದಿ ನೀರು ಸರಬರಾಜು ಮಾಡಲಾಗುತ್ತಿದೆ.

ನನಸಾಗುವುದೇ ಕನಸು?: ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸುವಾಗ ಪ್ರತಿ ಗ್ರಾಮದ ಪ್ರತಿಯೊಬ್ಬ ವ್ಯಕ್ತಿಗೂ ಶುದ್ದ ನೀರು ಸಿಗಬೇಕು ಎನ್ನುವ ಉದ್ದೇಶ ಹೊಂದಲಾಗಿತ್ತು. ಆದರೆ, ಶುದ್ಧೀಕರಿಸಿದ ನದಿ ನೀರು ಪ್ರತಿ ಗ್ರಾಮಕ್ಕೂ ಸರಬರಾಜು ಆಗುತ್ತಿದ್ದರೂ, ಸ್ಥಳೀಯ ಮಟ್ಟದ ಸಂಗ್ರಹಗಾರದಲ್ಲಿ ನದಿ ನೀರಿಗೆ ಕೊಳವೆಯ ಬಾವಿ ನೀರನ್ನೂ ಹರಿಸುತ್ತಿದ್ದಾರೆ.

ಹೀಗಾಗಿ ಹಲವು ಗ್ರಾಮಗಳಲ್ಲಿ ಅಶುದ್ಧವಾದ ಕುಡಿಯುವ ನೀರನ್ನು ಸೇವನೆ ಮಾಡುವಂತಾಗಿದೆ. ಈ ಬಗ್ಗೆ ಆಯಾ ಗ್ರಾ.ಪಂ. ಸಿಬ್ಬಂದಿಗಳನ್ನು ವಿಚಾರಿಸಿದರೆ, ಗ್ರಾಮಕ್ಕೆ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ನದಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಎಲ್ಲ ಜನರಿಗೆ ನೀರೊದಗಿಸಲು ಈ ಕ್ರಮ ಅನಿವಾರ್ಯ ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ. ಯೋಜನೆಯ ಆರಂಭಿಕ ವರ್ಷದಲ್ಲೇ ಈ ರೀತಿಯ ಸಮಸ್ಯೆ ಎದುರಾದರೆ, ಮುಂದೇನು ಎಂಬುದು ಸಾರ್ವಜನಿಕರ ಪ್ರಶ್ನೆ. ಇನ್ನು, ತಾಲೂಕಿನ ಬಹುತೇಕ ಗ್ರಾಮಗಳ ಕೊಳವೆ ಬಾವಿಗಳಲ್ಲಿ ಫ್ಲೋರೋಸೀಸ್‌ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ಅದೇ ನೀರನ್ನು ನದಿ ನೀರಿನೊಂದಿಗೆ ಬೆರೆಸಿ ಕೊಡುವುದರಲ್ಲಿ ಅರ್ಥವೇನಿದೆ. ಇದು ಯೋಜನೆಯ ಆಶಯಕ್ಕೆ ವಿರುದ್ಧ ವಾಗಿದೆ ಎಂಬುದು ಆಯಾ ಗ್ರಾಮಸ್ಥರಆಕ್ರೋಶದ ನುಡಿಗಳು. ಒಟ್ಟಾರೆ, ಬಹು ನಿರಿಕ್ಷೀತವಾದ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯನ್ನು 1045 ಕೋಟಿ ರೂಪಾಯಿಗಳ ವೆಚ್ಚದಲ್ಲಿ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಪ್ರತಿ ಗ್ರಾಮಕ್ಕೂ ಶುದ್ಧ ನೀರು ತಲುಪಿ, ಜನರು ಶುದ್ಧ ನೀರು ಕುಡಿಯುವದರಿಂದ ಆರೋಗ್ಯ ವಂತರಾಗಿ ಬಾಳಲು ಅನುಕೂಲವಾಗಲಿದೆ ಎನ್ನುವ ಸದುದ್ದೇಶದ ಕನಸು ಯೋಜನಾ ಕರ್ತರು ಇಟ್ಟುಕೊಂಡಿದ್ದರು.

Advertisement

ನೀರು ಸರಬರಾಜಿಗೆ ಪೈಪ್‌ಲೈನ್‌ ಕೊರತೆ : ಮುಂಡರಗಿ ಪಟ್ಟಣದಲ್ಲಿ ಶುದ್ಧ ನೀರನ್ನು ಪ್ರತ್ಯೇಕವಾಗಿ ಸರಬರಾಜು ಮಾಡುವ ಪೈಪ್‌ಲೈನ್‌ನ ಕೊರತೆಯಿದೆ. ಬಹುತೇಕ ಜನರಿಗೆ ಶುದ್ಧ ನೀರು ಬರುತ್ತಿರುವ ಬಗ್ಗೆ ಸಮಗ್ರವಾದ ಮಾಹಿತಿಯು ಇಲ್ಲದೇ ಇರುವುದರಿಂದ ಬಹಳಷ್ಟು ಜನರು ಪಟ್ಟಣದಲ್ಲಿರುವ ಶುದ್ಧ ನೀರಿನ ಘಟಕಗಳನ್ನು ಆಶ್ರಯಿಸಿ, ಶುದ್ಧ ನೀರು ಕುಡಿಯಲು ಬಳಕೆ ಮಾಡುತ್ತಿದ್ದಾರೆ.

ತಾಲೂಕಿನ ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರನ್ನು ಜಾಲವಾಡಗಿಯ ನೀರು ಶುದ್ಧೀಕರಣ ಘಟಕದಿಂದ ಪ್ರತಿದಿನವೂ ಸರಬರಾಜು ಮಾಡಲಾಗುತ್ತಿದೆ. ಸ್ಥಳೀಯವಾಗಿ ಗ್ರಾಮ ಪಂಚಾಯಿತಿಯವರು ಶುದ್ಧ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕಿದೆ. ಕೆಲವೆಡೆ ಶುದ್ಧ ನೀರಿನ ಜೊತೆಗೆ ಕೊಳವೆಬಾವಿಯ ನೀರನ್ನು ಸೇರಿಸಿ ಬೀಡುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಗ್ರಾಮ ಪಂಚಾಯಿತಿಗಳಿಗೆ ನೋಟಿಸ್‌ ಕೂಡಾ ನೀಡಲಾಗಿದೆ.  –ವೈ.ಬಿ. ಕುದರಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಅಭಿಯಂತರ

 

-ಹು.ಬಾ. ವಡ್ಡಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next