ಮಂಗಳೂರು: ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ಮಂಗಳೂರು ಕಚೇರಿಯಲ್ಲಿ ಬಿಷಪ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಸಂಸ್ಥೆಯ ಆರು ಮಂದಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಿಎಸ್‌ಐಟಿಎ ಬೆನಿಫಿಶರೀಸ್ ಅಸೋಸಿಯೇಶನ್ ಆರೋಪಿಸಿದೆ.
ಅಸೋಸಿಯೇಶನ್ ಕಾರ್ಯದರ್ಶಿ ಪ್ರೇಮ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದು, ಸಂಸ್ಥೆಯ ಖಜಾಂಚಿ ಹಾಗೂ ಕಾನೂನು ಸಲಹೆಗಾರರು ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ. ಮೈಸೂರಿನ ಒಡನಾಡಿ ಸಂಸ್ಥೆಯ ಸಹಕಾರದಲ್ಲಿ ಮಹಿಳಾ ಪೊಲೀಸ್ ಠಾಣೆಗೆ ಮಾ. 7ರಂದು ದೂರು ನೀಡಲಾಗಿದೆ. ಆದರೆ ಇಲ್ಲಿವರೆಗೂ ದೂರಿನ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಈ ಬಗ್ಗೆ ವಿಚಾರಿಸುವುದಾಗಿ ತಿಳಿಸಿದರು.
ಅಸೋಸಿಯೇಶನ್ ಪದಾಧಿಕಾರಿಗಳಾದ ಸಾಮ್ಯುವೆಲ್ ಸದಾನಂದ, ಜತೆ ಕಾರ್ಯದರ್ಶಿ ಸುದರ್ಶನ್ ಕುಮಾರ್, ಸತ್ಯಕುಮಾರ್, ಡಾ| ಬ್ರೇನ್ ಸೋನ್ಸ್ ಉಪಸ್ಥಿತರಿದ್ದರು.