Advertisement

ಕೊರೊನಾ ಸಾವಿನ ವರದಿ ತಯಾರಿಗೆ ಅಸಮರ್ಪಕ ವಿಧಾನ : ಡಬ್ಲ್ಯು ಎಚ್‌ಒ ವಿರುದ್ಧ ಭಾರತ ಕೆಂಡ

03:09 PM Apr 18, 2022 | Team Udayavani |

ಹೊಸದಿಲ್ಲಿ: ಭಾರತ ಸಹಿತ ಜಗತ್ತಿ ನಾದ್ಯಂತದ ಕೊರೊನಾ ಸಾವಿನ ಸಂಖ್ಯೆಯನ್ನು ಅಂದಾಜಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‌ಒ) ಬಳಸಿರುವ ಕಾರ್ಯವಿಧಾನಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಡಿಮೆ ಜನ ಸಂಖ್ಯೆಯಿರುವ ಪುಟ್ಟ ದೇಶಕ್ಕೂ ಹೆಚ್ಚು ಜನಸಂಖ್ಯೆಯಿರುವ ದೊಡ್ಡ ದೇಶಕ್ಕೂ ಒಂದೇ ಬಗೆಯ ಕಾರ್ಯ ವಿಧಾನ ಬಳಕೆ ಎಷ್ಟು ಸಮರ್ಪಕ ಎಂದು ಭಾರತ ಪ್ರಶ್ನಿಸಿದೆ.

Advertisement

“ಜಗತ್ತಿನ ಕೊರೊನಾ ಸಾವಿನ ಸಂಖ್ಯೆಯನ್ನು ಬಹಿರಂಗ ಗೊಳಿಸುವ ಯತ್ನಕ್ಕೆ ಭಾರತ ಅಡ್ಡಿಪಡಿಸುತ್ತಿದೆ’ ಶೀರ್ಷಿಕೆಯಡಿ ನ್ಯೂಯಾರ್ಕ್‌ ಟೈಮ್ಸ್‌ ನಲ್ಲಿ ಪ್ರಕಟಗೊಂಡ ಲೇಖನಕ್ಕೆ ಆರೋಗ್ಯ ಸಚಿವಾಲಯ ರವಿವಾರ ಖಾರವಾದ ಪ್ರತಿಕ್ರಿಯೆ ನೀಡಿದೆ.

“ಭಾರತದಲ್ಲಿ ಕೊರೊನಾದಿಂದ 40 ಲಕ್ಷ ಮಂದಿ ಅಸುನೀಗಿದ್ದಾರೆ. ಕಳೆದ 2 ವರ್ಷಗಳಲ್ಲಿ ಭಾರತ ಸಾವಿನ ದತ್ತಾಂಶವನ್ನು ಡಬ್ಲ್ಯುಎಚ್‌ಒಗೆ ಕಳುಹಿಸಿಲ್ಲ. ಆದರೆ ಕರ್ನಾಟಕ ಸಹಿತ 12 ರಾಜ್ಯ ಗಳಲ್ಲಿ ಸಾವಿನ ಸಂಖ್ಯೆ ಹೇಳಿಕೊಂಡದ್ದಕ್ಕಿಂತ 5-6 ಪಟ್ಟು ಹೆಚ್ಚಿತ್ತು’ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಭಾರತದ ಜತೆಗೆ ಚೀನ, ಇರಾನ್‌, ಬಾಂಗ್ಲಾದೇಶ, ಸಿರಿಯಾ, ಇಥಿಯೋ ಪಿಯಾ ಮತ್ತು ಈಜಿಪ್ಟ್ ಕೂಡ ಆಕ್ಷೇಪಿಸಿವೆ.

ಭಾರತದ ವಾದವೇನು?
ವರದಿ ತಯಾರಿಸಲು ಬಳಸಿದ ವಿಧಾನವನ್ನು ನಾವು ವಿರೋಧಿಸುತ್ತೇವೆ. ಕಡಿಮೆ ಜನಸಂಖ್ಯೆ ಯ ದೇಶಗಳಿಗೆ ಬಳಸಲಾದ ಸಾಂಖ್ಯಿಕ ಮಾದರಿ ಭಾರತದಂತಹ ವಿಶಾಲ ಮತ್ತು ಹೆಚ್ಚು ಜನಸಂಖ್ಯೆಯಿರುವ ದೇಶಕ್ಕೆ ಹೇಗೆ ಹೊಂದಾಣಿಕೆಯಾಗುತ್ತದೆ? 1.18 ಕೋಟಿ ಜನಸಂಖ್ಯೆ ಯಿರುವ ಟ್ಯುನೀಷಿಯಾಕ್ಕೂ 130 ಕೋಟಿ ಜನಸಂಖ್ಯೆಯಿರುವ ಭಾರತಕ್ಕೂ ವ್ಯತ್ಯಾಸವಿಲ್ಲವೇ? ವರದಿಯ ಹಲವು ಅಂಶಗಳು ಡಬ್ಲ್ಯುಎಚ್‌ಒ ಬಳಸಿದ ಮಾದರಿ ನಿಖರ ಹಾಗೂ ವಿಶ್ವಾಸಾರ್ಹವಾಗಿಲ್ಲ ಎನ್ನುವುದನ್ನು ಸಾರುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಸರಕಾರದ ಪ್ರಕಾರ, ದೇಶದಲ್ಲಿ ಕೊರೊ ನಾದಿಂದ 5.21 ಲಕ್ಷ ಮಂದಿ ಮೃತಪಟ್ಟಿದ್ದಾರೆ.

ಕೇಂದ್ರದ ನಿರ್ಲಕ್ಷ್ಯದಿಂದಾಗಿ ಕೊರೊನಾಗೆ ಬಲಿಯಾದವರ ಸಂಖ್ಯೆ 40 ಲಕ್ಷ ಎಂಬುದು ಬಹಿರಂಗವಾಗಿದೆ. ಮೃತರ ಕುಟುಂಬಕ್ಕೆ ತಲಾ 4 ಲ.ರೂ. ಪರಿಹಾರ ನೀಡಬೇಕು.
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next