Advertisement

ಅನರ್ಹ ಶಾಸಕ ಸುಧಾಕರ್‌ ಮೋಸ, ಸುಳ್ಳುಗಾರ

09:17 PM Nov 23, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಕೊನೆ ದಿನದವರೆಗೂ ನಾನು ಪಕ್ಷಾಂತರ ಮಾಡಲ್ಲ ಎನ್ನುತ್ತಿದ್ದ ಡಾ.ಕೆ.ಸುಧಾಕರ್‌, ಅಧಿಕಾರ, ಹಣದ ಆಸೆಗೆಗಾಗಿ ಪಕ್ಷ ದ್ರೋಹ ಮಾಡಿದ್ದಾರೆ. ಇಂತಹ ಮಹಾನ್‌ ಮೋಸ, ಸುಳ್ಳುಗಾರ ಮತ್ತೂಬ್ಬರು ಇರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಸುಧಾಕರ್‌ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾಂಗ್ರೆಸ್‌ ಅಭ್ಯರ್ಥಿ ನಂದಿ ಅಂಜನಪ್ಪ ಪರ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ಎರಡು ಬಾರಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು. ಆದರೆ ಪಕ್ಷಕ್ಕೆ ದ್ರೋಹ ಬಗೆದರು ಎಂದು ಟೀಕಾ ಪ್ರಹಾರ ನಡೆಸಿದರು.

ಟಿಕೆಟ್‌ ಕೊಡದಂತೆ ಹೇಳಿದ್ದೆ: 2013ರಲ್ಲಿ ಈತ ಒಳ್ಳೆಯವನಲ್ಲ, ಟಿಕೆಟ್‌ ಕೊಡಬೇಡಿ ಎಂದು ಹೇಳಿದ್ದೆ. ಆದರೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್‌ ಟಿಕೆಟ್‌ ಕೊಟ್ಟರು. ಆದರೆ ತನ್ನನ್ನು ಬೆಳೆಸಿದ ಪಕ್ಷಕ್ಕೆ ದ್ರೋಹ ಮಾಡಿ ನಿಜವಾದ ಬಣ್ಣ ಏನು ಎಂದು ತೋರಿಸಿದ್ದೇನೆ. ಇಂತಹ ವ್ಯಕ್ತಿಗೆ ಮತ್ತೆ ಕ್ಷೇತ್ರದ ಜನ ಮತ ಹಾಕಬಾರದು ಎಂದರು.

ಪಾಪದ ಹಣ ಖರ್ಚು: ಸಿದ್ದರಾಮಯ್ಯ ಅವರು ಒಕ್ಕಲಿಗ ಸಮಾಜದ ಹುಡುಗ ಬೆಳೆಯಲಿ ಎಂದು ಬೆಳೆಸಿದರು. ಆದರೆ ಕಡೆ ಕ್ಷಣದವರೆಗೂ ಪಕ್ಷದಲ್ಲಿ ಇರುತ್ತೇನೆ. ನಾನು ಪಕ್ಷಾಂತರ ಮಾಡಲ್ಲ ಎಂದ ವ್ಯಕ್ತಿ ಪಕ್ಷಕ್ಕೆ ದ್ರೋಹ ಬಗೆದರು. ಸುಧಾಕರ್‌ ಒಬ್ಬ ಭ್ರಷ್ಟ ಅಂತ ಎಲ್ಲರಿಗೂ ಗೊತ್ತಿದೆ. ಎಲ್ಲದರಲ್ಲೂ ದುಡ್ಡು ಹೊಡೆಯುತ್ತಾನೆ.

ಪ್ರಜಾಪ್ರಭುತ್ವಕ್ಕೆ ಚೂರಿ: ರಾಜ್ಯಸಭಾ ಸದಸ್ಯ ಡಾ.ಎಲ್‌.ಹನುಮಂತಯ್ಯ ಮಾತನಾಡಿ, ಉಪ ಚುನಾವಣೆಗೆ ಕಾಂಗ್ರೆಸ್‌ ಕಾರಣವಲ್ಲ. ಪ್ರಜಾಪ್ರಭುತ್ವಕ್ಕೆ ಚೂರಿ ಹಾಕಿ ಮಾರಾಟಗೊಂಡ ಅನರ್ಹ ಶಾಸಕರಿಂದ ಉಪ ಚುನಾವಣೆ ಬಂದಿದೆ. ಬಿಜೆಪಿ ಅನೈತಿಕ ರಾಜಕಾರಣಕ್ಕೆ ಕಾರಣವಾಗಿದೆ ಎಂದರು.

Advertisement

ಸತ್ಯ, ಧರ್ಮಕ್ಕೆ ನ್ಯಾಯ ಇದೆ ಎನ್ನುವುದಾದರೆ ಹಣಕ್ಕಾಗಿ ಮಾರಾಟ ಮಾಡಿಕೊಂಡ ಪಕ್ಷ ವಿರೋಧಿಗಳನ್ನು ಈ ಚುನಾವಣೆಯಲ್ಲಿ ಸೋಲಿಸಬೇಕೆಂದರು. ದೇಶದಲ್ಲಿ ಉದ್ಯೋಗ ನಷ್ಟ, ಕೈಗಾರಿಕೆಗಳ ಮುಚ್ಚುವಿಕೆ ಶುರುವಾಗಿದೆ. ಆರ್ಥಿಕ ಹಿಂಜರಿತದಿಂದ ದೇಶದ ಅಭಿವೃದ್ದಿ ಕುಂಠಿತವಾಗಿದೆ. ಇದಕ್ಕೆ ಬಿಜೆಪಿ ನೀತಿಗಳೇ ಕಾರಣ ಅನರ್ಹರು ಗೆದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲ ಇಲ್ಲ ಅರ್ಹರನ್ನು ಸೋಲಿಸುವ ಮೂಲಕ ಮತದಾರರು ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸ ಮಾಡಬೇಕೆಂದರು.

ಮತದಾರರು ಅನರ್ಹರಾಗುತ್ತಾರೆ: ಮಾಜಿ ಸಚಿವ ಪಾವಗಡ ವೆಂಕಟರವಣಪ್ಪ ಮಾತನಾಡಿ, ಬಿಜೆಪಿ ಜನಾದೇಶದಿಂದ ಅಧಿಕಾರಕ್ಕೆ ಬಂದಿಲ್ಲ. ಪ್ರತಿ ಬಾರಿ ಆಪರೇಷನ್‌ ಕಮಲದ ಮೂಲಕವೇ ಅಧಿಕಾರ ಹಿಡಿದಿದೆ. ಈಗಲೂ 17 ಮಂದಿ ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ಬಿಜೆಪಿಗೆ ಹಣಕ್ಕಾಗಿ ಮಾರಾಟಗೊಂಡಿದ್ದಾರೆ. ಈಗ ಮತ್ತೆ ಅನರ್ಹರನ್ನು ಗೆಲ್ಲಿಸಿದರೆ ಮತದಾರರು ಅನರ್ಹರಾಗುತ್ತಾರೆ. ಜನ ಕೊಟ್ಟ ಮತವನ್ನು ಹಣಕ್ಕಾಗಿ ಮಾರಾಟಗೊಂಡ ಅನರ್ಹರಿಗೆ ಪಾಠ ಆಗಬೇಕೆಂದರು.

ವೇದಿಕೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಂದಿ ಅಂಜನಪ್ಪ, ಮಾಜಿ ಕೇಂದ್ರ ಸಚಿವ ಪಲ್ಲಂರಾಜು, ಮಾಜಿ ಸಚಿವರಾದ ವಿ.ಮುನಿಯಪ್ಪ, ಎನ್‌.ಹೆಚ್‌.ಶಿವಶಂಕರರೆಡ್ಡಿ, ಮಾಜಿ ಶಾಸಕರಾದ ಎಸ್‌.ಎಂ.ಮುನಿಯಪ್ಪ, ಅನುಸೂಯಮ್ಮ, ಎನ್‌.ಸಂಪಂಗಿ, ವಿಧಾನ ಪರಿಷತ್‌ ಸದಸ್ಯ ಎಂ.ಸಿ.ವೇಣುಗೋಪಾಲ್‌, ಮುಖಂಡರಾದ ಕೆ.ವಿ.ನವೀನ್‌ ಕಿರಣ್‌, ಯಲುವಹಳ್ಳಿ ರಮೇಶ್‌, ಎಂ.ಪ್ರಕಾಶ್‌, ಸೈಯದ್‌ ಅಮಾನುಲ್ಲಾ, ಟಿಎಪಿಸಿಎಂಎಸ್‌ ಅಧ್ಯಕ್ಷ ಅವುಲುರೆಡ್ಡಿ, ಹಿರಿಯ ಮುಖಂಡ ಎಸ್‌.ವೈ.ಮರಿಯಪ್ಪ, ಹಿರಿಯ ವಕೀರಾದ ದಾವೂದ್‌, ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಸುಧಾಕರ್‌ ನಂಬಿ ಕೆಟ್ಟೆ – ಮೊಯ್ಲಿ ಆಕ್ರೋಶ:
ಹಲವು ದಿನಗಳಿಂದ ಉಪ ಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದ ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ ಶನಿವಾರ ಪಕ್ಷದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಸುಧಾಕರ್‌ ವಿರುದ್ಧ ಕಿಡಿಕಾರಿದರು. ಆತನನ್ನು ನಂಬಿ ನಾನು ಕೆಟ್ಟೆ. ಕಳೆದ ಬಾರಿ ಚುನಾವಣೆಯಲ್ಲಿ ಸೋತೆ. ಎತ್ತಿನಹೊಳೆ ಆರಂಭಿಸಿದಾಗ ಸುಧಾಕರ್‌ ಶಾಸಕರಾಗಿರಲಿಲ್ಲ. ಆಗ ಸುಧಾಕರ್‌ ಕೂಡ ಎತ್ತಿನಹೊಳೆ ವಿರೋಧಿಸಿದ್ದರು ಎಂದರು.

ಕೇಂದ್ರ ಮಂತ್ರಿಯಾಗಿದ್ದಾಗ ಕಾನೂನು ಬದ್ಧವಾಗಿ ಎತ್ತಿನಹೊಳೆ ಅನುಷ್ಠಾನಗೊಳಿಸಿದೆ. ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಕಾಮಗಾರಿ ಸ್ಥಗಿತಗೊಂಡಿದೆ. ಎತ್ತಿನಹೊಳೆಗಾಗಿ ದಕ್ಷಿಣ ಕನ್ನಡ, ಮಂಗಳೂರಿನಲ್ಲಿ ನನಗೆ ಕಪ್ಪುಬಾವುಟ ಪ್ರದರ್ಶಿಸಿದರು. ಆದರೂ ಈ ಭಾಗದ ಜನರ ನೀರಿನ ಭವಣೆ ನೋಡಿ ಎತ್ತಿನಹೊಳೆಗೆ ಚಾಲನೆ ಕೊಟ್ಟೆವು. ಸಿದ್ದರಾಮಯ್ಯ ಮತ್ತೆ ರಾಜ್ಯದ ಸಿಎಂ ಆಗಿದಿದ್ದರೆ ಕಾಮಗಾರಿ ಮುಗಿಯುತ್ತಿತ್ತು ಎಂದರು.

ಅನರ್ಹ ಶಾಸಕನಿಗೆ ಮತ್ತೆ ಬೆಂಬಲ ಕೊಡಬಾರದು. ಈ ಕ್ಷೇತ್ರ ಸರ್‌ಎಂವಿ ಹುಟ್ಟಿದ ಪವಿತ್ರ ಕ್ಷೇತ್ರ. ಪಕ್ಷಾಂತರಿಗಳಿಗೆ ಪಾಠ ಆಗಬೇಕು. ಆಸೆ, ದುರಾಸೆಗೆ ತಕ್ಕಪಾಠ ಕಲಿಸಬೇಕೆಂದರು. ಕಾಂಗ್ರೆಸ್‌ ಸರ್ಕಾರದಲ್ಲಿ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯೆ ಯಾವುದೇ ಲಾಭ ಆಗಿಲ್ಲ. ಸುಧಾಕರ್‌ ಹೇಳುವುದೆಲ್ಲಾ ಸುಳ್ಳು ಎಂದರು.

ಚುನಾವಣೆಯಲ್ಲಿ ಸುಧಾಕರ್‌ ಭ್ರಷ್ಟಾಚಾರದಿಂದ ಸಂಪಾದಿಸಿದ ಪಾಪದ ಹಣವನ್ನು ಸಾವಿರಾರು ಕೋಟಿ ಖುರ್ಚ ಮಾಡುತ್ತಿದ್ದಾರೆ. ಹಣ ಪಡೆಯುವವರು ಪಡೆಯಲಿ. ಆದರೆ ಸುಧಾಕರ್‌ ನೋಟು ಪಡೆದು ಕ್ಷೇತ್ರದ ಮತದಾರರು ಸ್ವಾಭಿಮಾನಕ್ಕಾಗಿ ಕಾಂಗ್ರೆಸ್‌ಗೆ ವೋಟ್‌ ಕೊಡುವ ವಿಶ್ವಾಸವಿದೆ. ಸುಧಾಕರ್‌ರನ್ನು ಮತ್ತೂಮ್ಮೆ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕಾಲಿಡದಂತೆ ಶಾಶ್ವತವಾಗಿ ಅನರ್ಹನನ್ನಾಗಿ ಮಾಡಬೇಕು.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next