Advertisement

ಸೆರಗು ಸೊಬಗು

09:49 AM Dec 05, 2019 | Lakshmi GovindaRaju |

ಅಮ್ಮನ ಸೆರಗಿನೊಳಗೆ ಮುಖ ಅಡಗಿಸುತ್ತಿದ್ದ ಹುಡುಗಿ, ಅಮ್ಮನಂತೆಯೇ ಸೀರೆ ಉಡುವ ಕನಸು ಕಾಣುತ್ತಾಳಲ್ಲ; ಆಗ ಉಟ್ಟ ಬಟ್ಟೆಯ ಮೇಲೆ ಟವಲ್ಲನ್ನೋ, ದುಪಟ್ಟಾವನ್ನೋ ಸಿಕ್ಕಿಸಿ, ಅದನ್ನೇ ಸೆರಗು ಎಂದು ಸಂಭ್ರಮಿಸುತ್ತಾಳೆ. ಇನ್ನು ಮೊದಲ ಬಾರಿಗೆ ಸೀರೆ ಉಟ್ಟಾಗ ಆದ ರಗಳೆಯನ್ನು ಮರೆಯುವುದುಂಟೇ?

Advertisement

“ಇಲ್ನೋಡಿ, ಈ ಸೀರೆ ಕಲರ್‌, ಬಾರ್ಡರ್‌ ಚಂದ ಐತಿ. ಆದ್ರ, ಅಲ್ಲಿದೆಯಲ್ಲ ಆ ಸೀರಿ ಸೆರಗು ಇದಕ್ಕೆ ಇರಬೇಕಿತ್ತು. ಸೆರಗಿನ್ಯಾಗ ಪಕ್ಷಿ ಬ್ಯಾಡ, ಹೂವು- ಬಳ್ಳಿ ಇರಬೇಕಿತ್ತು’… ಮುಂದೆ ಗುಡ್ಡೆ ಹಾಕಿದ ಸೀರೆಯನ್ನು ನೋಡದೆ, ತನ್ನದೇ ಕಲ್ಪನೆಯ ಸೀರೆ ಬಗ್ಗೆ ವರ್ಣಿಸುತ್ತಿದ್ದವಳನ್ನು ನೋಡಿ ಅಂಗಡಿಯಾತ ಕಂಗಾಲಾದ. ಸೀರೆ ಚೆನ್ನಾಗಿದ್ದರೆ ಸಾಕು; ಸೆರಗನ್ಯಾರು ನೋಡ್ತಾರೆ ಅಂತ ಅಂಗಡಿಯವ ಹೇಳಿದರೆ, ಸೀರೆಗೆ ಮೆರಗು ನೀಡುವುದೇ ಸೆರಗು ಅಂತ ಆಕೆ ವಾದಿಸಿದಳು.

ಸೀರೆಯ ಚಂದ ಇರುವುದೇ ಸೆರಗಿನಲ್ಲಿ ತಾನೇ? “ಹಸರ ಕಡ್ಡಿ ಸೀರಿ ಉಟ್ಟು, ತೋಪ ಸೆರಗು ಮ್ಯಾಲೆ ಮಾಡಿ……’ ಹೀಗೆ, ಜನಪದ ಗೀತೆಗಳಲ್ಲಿ ಬಸುರಿ ಹೆಣ್ಣು ಸಹ ಇಂಥ ಸೀರಿ, ಇಂಥ ಸೆರಗೇ ಬೇಕೆಂದು ಬಯಸುತ್ತಾಳೆ. ಸೆರಗಿಗೆ ಎಷ್ಟೊಂದು ಬಣ್ಣ, ಡಿಸೈನ್‌, ವೆರೈಟಿ, ಕುಚ್ಚು, ಲೇಸು, ಚಮಕಿ, ಝರಿ…..ಅಷ್ಟುದ್ದ ಸೀರೆ ಸುತ್ತಿ, ನೆರಿಗೆ ಮಾಡಿ ಸಿಕ್ಕಿಸಿದರೂ, ಎದ್ದು ಕಾಣುವುದು ಸೆರಗೇ! ನೀಟಾಗಿ ನೆರಿಗೆ ಮಾಡಿ, ಒಂಟಿ ಪದರ ಇಳಿ ಬಿಟ್ಟು, ತಲೆಯ ಮೇಲೆ ಹೊದ್ದು, ಹೆಗಲ ಮೇಲೆ ಅಡ್ಡ ಹಾಕಿ, ಬಲ ಭುಜದ ಮೇಲಿಂದ ಇಳಿ ಬಿಟ್ಟು ಹಿಂದೆ ಸಿಕ್ಕಿಸಿ, ಹಿಂದಿನಿಂದ ಸುತ್ತಿ, ಮುಂದೆ ಪಿನ್‌ ಹಾಕಿ… ಹೀಗೆ, ನಾನಾ ಬಗೆಯಲ್ಲಿ ಸೀರೆಯ ಸೊಬಗನ್ನು ಸೆರಗು ಹೆಚ್ಚಿಸುತ್ತದೆ.

ಅಮ್ಮನ ಸೆರಗಿನೊಳಗೆ ಮುಖ ಅಡಗಿಸುತ್ತಿದ್ದ ಹುಡುಗಿ, ಅಮ್ಮನಂತೆಯೇ ಸೀರೆ ಉಡುವ ಕನಸು ಕಾಣುತ್ತಾಳಲ್ಲ; ಆಗ ಉಟ್ಟ ಬಟ್ಟೆಯ ಮೇಲೆ ಟವಲ್ಲನ್ನೋ, ದುಪಟ್ಟಾವನ್ನೋ ಸಿಕ್ಕಿಸಿ, ಅದನ್ನೇ ಸೆರಗು ಎಂದು ಸಂಭ್ರಮಿಸುತ್ತಾಳೆ. ಇನ್ನು ಮೊದಲ ಬಾರಿಗೆ ಸೀರೆ ಉಟ್ಟಾಗ ಆದ ರಗಳೆಯನ್ನು ಮರೆಯುವುದುಂಟೇ? ಗಾಳಿಗೆ ಅಂಕೆ ಇಲ್ಲದೆ ಹಾರಿದ ಸೆರಗು, ಎಲ್ಲೆಲ್ಲೋ ಸಿಕ್ಕು ಗೊಂದಲ ಸೃಷ್ಟಿಸಿ, ಅದನ್ನು ಸಂಭಾಳಿಸುವುದರಲ್ಲಿ ಪಟ್ಟ ಕಷ್ಟ ಪ್ರತಿ ಹೆಣ್ಣಿಗೂ ನೆನಪಿರುತ್ತದೆ.

ಇಂತಿಪ್ಪ ಸೆರಗು, ಹೆಣ್ಣಿಗೆ ಬಹು ವಿಧಗಳಲ್ಲಿ ಉಪಯೋಗಕ್ಕೆ ಬರುತ್ತದೆ. ನವ ವಧುವಿನ ಮುಖ ಮುಚ್ಚುವ ಮುಸುಕಾಗಿ, ಕಾಲಕ್ಕೆ ತಕ್ಕಂತೆ- ಮಳೆಗಾಲದಲ್ಲಿ ಛತ್ರಿಯಾಗಿ, ಚಳಿಗಾಲದಲ್ಲಿ ಮೈತುಂಬ ಹೊದ್ದು ಬೆಚ್ಚಗಾಗಲು ಹೊದಿಕೆಯಾಗಿ, ಬೇಸಿಗೆಯಲ್ಲಿ ಬಿಸಿಲಿನಿಂದ ಕಾಪಾಡಲು, ಸೆಖೆಗೆ ಗಾಳಿ ಹಾಕಿಕೊಳ್ಳಲು ಬೀಸಣಿಕೆಯಾಗಿ, ಮುತ್ತೈದೆಯ ಉಡಿ ತುಂಬಿಸಿಕೊಳ್ಳುವ ಚೀಲವಾಗಿ, ಅಡುಗೆ ಮನೆಯಲ್ಲಿ ಗಡಿಬಿಡಿಯಲ್ಲಿ ತಟ್ಟೆ ಒರೆಸಲು, ಬಿಸಿ ಪಾತ್ರೆ ಹಿಡಿಯಲು, ಹಸಿ ಕೈ ಒರೆಸಿಕೊಳ್ಳಲು ಕರವಸ್ತ್ರವಾಗಿ ನೆರವಾಗುವುದು ಇದೇ ಸೆರಗು. ಕೆಲವೊಮ್ಮೆ ದುಡ್ಡು, ಕೀಲಿಕೈ, ಬಂಗಾರದ ಸಣ್ಣ ವಸ್ತುಗಳು ಸೆರಗಿನ ತುದಿಯ ಗಂಟೆಂಬ ತಿಜೋರಿಯಲ್ಲಿ ಭದ್ರ. ತೊಳೆದ ಮುಖ, ಬೆವರು, ಒರೆಸಿಕೊಳ್ಳುವ ಟವಲ್ಲಾಗಿ, ಕೆಟ್ಟವಾಸನೆ, ಧೂಳಿನಿಂದ ಮೂಗು ಕಾಪಾಡಿಕೊಳ್ಳುವ ವಸ್ತ್ರವಾಗಿ, ಅಳು, ನಗು ಮರೆಮಾಚಲು, ಕಣ್ಣೀರೊರೆಸಿಕೊಳ್ಳಲು, ಕೂಡುವ ಜಾಗದ ಧೂಳು ಒರೆಸುವ ಬಟ್ಟೆಯಾಗಿ ಇದೇ ಸೆರಗು ರೂಪಾಂತರಗೊಳ್ಳುತ್ತದೆ.

Advertisement

ಇನ್ನು ಇತರರಿಗೆ?
ಮಕ್ಕಳ ಕೈ,ಬಾಯಿ ಒರೆಸಲು, ತೊಟ್ಟಿಕ್ಕುವ ಕಂದಮ್ಮನ ಜೊಲ್ಲು, ಸಿಂಬಳ ಒರೆಸಲು ಸಿಗುವ ಸುಲಭದ ವಸ್ತ್ರ! ಬಗಲಲ್ಲಿರುವ ಕಂದನಿಗೂ ಇದು ರಕ್ಷಣಾ ಕವಚ. ಯಾರಿಗೂ ಕಾಣದಂತೆ ಬಾಣಂತಿಗೆ ಊಟ ಮುಚ್ಚಿ ಒಯ್ಯಲು, ಹಳ್ಳಿಗಳಲ್ಲಿ ದೇವರ ಗುಡಿಗೆ ನೈವೇದ್ಯ ಮುಚ್ಚಿ ಒಯ್ಯುಲು ಸೆರಗು ಉಪಯೋಗಿ. ಗಂಡ, ಮಕ್ಕಳು ಮಳೆಯಲ್ಲಿ ನೆನೆದು ಬಂದಾಗ ಬಯ್ಯುತ್ತಲೇ ತಲೆ ಒರೆಸುವ, ಅವರೂ ಒಮ್ಮೊಮ್ಮೆ ಕೈ ಬಾಯಿ ಒರೆಸಿಕೊಳ್ಳುವ ಟವೆಲ್‌ ಕೂಡ ಹೌದು. ಸಿನಿಮಾಗಳಲ್ಲಿ ತೋರಿಸುವಂತೆ ಗಾಯವಾದಾಗ ಹರಿದು ಕಟ್ಟಲು ಸುಲಭವಾಗಿ ಸಿಗುವ ಬ್ಯಾಂಡೇಜ್‌, ಅಣ್ಣನ ಸ್ಥಾನ ಕೊಟ್ಟವರಿಗೆ ಹರಿದು ಕಟ್ಟಲು ರಕ್ಷಾ ಬಂಧನ!.

ಇನ್ನು ಅಳುತ್ತಾ, ಹಠ ಮಾಡುತ್ತ ಅವ್ವನ ಸೆರಗು ಹಿಡಿದು ಹಿಂದೆ ಮುಂದೆ ಅಡ್ಡಾಡುವ ಕಂದ ಚಂದ. ತನಗೆ ಮೊಬೈಲೋ, ಬೈಕೋ ಕೊಡಿಸಲು ಪುಸಲಾಯಿಸುತ್ತ ತಾಯಿಯ ಸೆರಗು ಹಿಡಿದು ಹಲುಬುವ ಹದಿಹರೆಯದ ಮಕ್ಕಳೂ ಚಂದ. ಹೆಂಡತಿ ಮಾತು ಕೇಳ್ಳೋ ಗಂಡನಿಗೆ, ಹೆಂಡತಿ ಸೆರಗು ಹಿಡಿದು ಅಡ್ಡಾಡುತ್ತಾನೆ ಎಂದು ದೂರುವುದೂ ಒಂಥರಾ ಚಂದವೇ!

ಇಷ್ಟೇ ಅಲ್ಲ ಕಥೆ , ಕವನಗಳಲ್ಲಿ ಬರುವಂತೆ, ಹೆಣ್ಣು ಸೆರಗೊಡ್ಡಿ ಬೇಡುತ್ತಾಳೆ, ಸೆರಗು ಸೊಂಟಕ್ಕೆ ಸಿಕ್ಕಿಸಿ ಕೆಲಸ ಮಾಡುತ್ತಾಳೆ, ಕಷ್ಟ ಎದುರಿಸುತ್ತಾಳೆ. ದುಃಖದಲ್ಲಿ ಸೆರಗು ಕಣ್ಣಿಗೊತ್ತಿಕೊಳ್ಳುತ್ತಾಳೆ, ಖುಷಿಯಲ್ಲಿ ಸೆರಗನ್ನು ಗಾಳಿಪಟದಂತೆ ಹಾರಿಸುತ್ತಾಳೆ, ಸೆರಗು ಕಟ್ಟಿ ಹೋರಾಡುತ್ತಾಳೆ! ಇನ್ನು ರೋಷ ಬಂದಾಗ ಸೆರಗು ಝಾಡಿಸಿ ದುರ್ಗಿಯಾಗುತ್ತಾಳೆ!

ಇಷ್ಟಿರುವ ಸೆರಗು, ಈಗಿನ ಮಿನಿ, ಮಿಡಿ, ಪ್ಯಾಂಟು, ಉಗ್ರಗಾಮಿಗಳಂತೆ ಕಣ್ಣಷ್ಟೇ ಬಿಟ್ಟು ಪೂರ್ತಿ ಮುಖ ಮುಚ್ಚಲು ಬಳಸುವ ಸ್ಕಾಫ್ìಗಳ ಹಾವಳಿಗೆ ಸಿಕ್ಕಿ ಕೊಂಚ ಮಂಕಾಗಿರಬಹುದು. ಆದರೆ, ಎಲ್ಲ ಕಾಲಕ್ಕೂ, ಎಲ್ಲ ಸ್ತ್ರೀಯರಿಗೂ ಒಪ್ಪುವಂಥದ್ದು ಸೀರೆಯೇ. ಸೀರೆಯುಟ್ಟ ನೀರೆ ಹಾಗೂ ಸೆರಗಿನ ಮೆರಗಿಗೆ ಮನಸೋತು, ತಮಗಿಲ್ಲದ ಈ ಭಾಗ್ಯಕ್ಕೆ ಪುರುಷರು ಕರುಬುತ್ತಾ ಹಾಡುತ್ತಾರೆ-“ಸೀರೆಲಿ ಹುಡುಗೀರ ನೋಡಲೇಬಾರದು…’

-ಜಯಶ್ರೀ ಕಜ್ಜರಿ

Advertisement

Udayavani is now on Telegram. Click here to join our channel and stay updated with the latest news.

Next