ಗುರುವಾರ ಬೆಳಗ್ಗೆ ಹಂಡೇಲು ಮುಂಡೇಲುನಲ್ಲಿ ಜೈನಾಬಿ ಅವರ ಮನೆಯ ಹಿಂಬದಿಯ ಗೋಡೆಯ ಸೂರು ಕುಸಿದು ಪೀಠೊಪಕರಣ,ಫ್ರಿಜ್ ಮತ್ತಿತರ ಸಾಮಗ್ರಿಗಳು ಜಖಂಗೊಂಡಿದ್ದು ಸುಮಾರು 2 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಹಂಡೇಲ್‌ನಲ್ಲಿ ಗುಡ್ಡ ಜರಿದು ಬಶೀರ್ ಅವರ ನಿರ್ಮಾಣ ಹಂತದಲ್ಲಿಯಲ್ಲಿದ್ದ ಮನೆಗೆ ಹಾನಿಯುಂಟಾಗಿದೆ.
Advertisement
ಶಾಸಕ ಉಮಾನಾಥ ಕೋಟ್ಯಾನ್ ಅವರು ಸ್ಥಳಕ್ಕೆ ಭೇಟಿ ನೀಡಿ ಗರಿಷ್ಟ ಪರಿಹಾರ ಧನ ಒದಗಿಸುವುದಾಗಿ ಭರವಸೆ ನೀಡಿದರು. ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಹಂಡೇಲ್ ಗ್ರಾಮ ಕರಣಿಕ ಗೋಪಾಲ್ ಜತೆಗಿದ್ದರು. ಹಂಡೇಲು ತಿರುವಿನ ಮೂಲ್ಕಿ ಮಾರ್ಗದ ಬದಿ ವಿದ್ಯಾಗಿರಿಯ ಹುಲ್ಲು ಹಾಸಿನ ಅಡಿಯ ಮಣ್ಣಿನ ಭಾಗ ಮಳೆಯಿಂದಾಗಿ ಜಾರಿ ಮಾರ್ಗಕ್ಕೆ ಬಿದ್ದಿದೆ. ರಸ್ತೆಗಿಂತ ಸಾಕಷ್ಟು ದೂರ ಇದ್ದ ಕಾರಣ ವಾಹನ ಸಂಚಾರಕ್ಕೆ ತೊಂದರೆ ಆಗಲಿಲ್ಲ. ಬಿದ್ದ ಮಣ್ಣನ್ನು ಕೂಡಲೇ ತೆರವುಗೊಳಿಸಲಾಯಿತು.
ಮೂಡಬಿದಿರೆ ಪೇಟೆಯ ಉತ್ತರ ಭಾಗದಲ್ಲಿರುವ, ಅರಮನೆ ಬಾಗಿಲು ಸಮೀಪದ ಬೈಲಾರೆ ಪ್ರದೇಶದ ಅನೇಕ ಮನೆಗಳಿಗೆ ನೀರು ನುಗ್ಗಿ ಆತಂಕಕಾರಿ ವಾತಾವರಣ ನಿರ್ಮಾಣಗೊಂಡಿತು. ತಗ್ಗು ಪ್ರದೇಶವಾದ ಬೈಲಾರೆ ಪ್ರದೇಶದಲ್ಲಿ ಹೊಲಗದ್ದೆಗಳ ಕನ್ವರ್ಷನ್‌ಗೊಳಪಡಿಸಿ, ಮಣ್ಣು ತುಂಬಿಸಿ ಸೈಟ್‌ಗಳನ್ನು ನಿರ್ಮಿಸುವ ಪ್ರಕ್ರಿಯೆ ದಶಕಗಳಿಂದ ಜೋರಾಗಿ ನಡೆದಿರುವುದರಿಂದ ಮಳೆ ನೀರಿನ ಸಹಜ ಹರಿವಿಗೆ ಅಡ್ಡಿಯುಂಟಾಗಿ ಕೃತಕ ನೆರೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಪೊನ್ನೆಚಾರಿಯಲ್ಲಿ ತೋಡು ತುಂಬಿ ನೀರು ಹತ್ತಿರದ ಫ್ಲ್ಯಾಟ್‌ಗಳ ತಳದಲ್ಲಿರುವ ಪಾರ್ಕಿಂಗ್ ಏರಿಯಾಕ್ಕೆ ನುಗ್ಗಿ ಆತಂಕಕಾರಿ ಸನ್ನಿವೇಶ ನಿರ್ಮಾಣವಾಯಿತು. ತೋಡಿನ ಅಗಲವನ್ನು ಕಿರಿದುಗೊಳಿಸುವಷ್ಟು ಅತಿಕ್ರಮಣ ನಡೆದಿರುವ ಕಾರಣ ಕೃತಕ ನೆರೆ ಉಂಟಾಗುವಂತಾಗಿದೆ.ಮುಂಜಾನೆ ವಿಜಯನಗರ ವಲಯದಲ್ಲಿ ನೀರು ತುಂಬಿ ಕೆಲವು ಅಂಗಡಿಗಳನ್ನು ತೆರೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವಲಯ ಒಂದು ಕಾಲದಲ್ಲಿ ಬ್ಯಾರಿಬೊಟ್ಟು ಎಂಬ ಹೊಲಗದ್ದೆಗಳಿದ್ದ ಪ್ರದೇಶವಾಗಿತ್ತು. ಎಷ್ಟೋ ಕಡೆ, ಪಟ್ಲ (ತಗ್ಗು ಪ್ರದೇಶ)ಗದ್ದೆಗಳ ಒಡಲಿಗೆ ಮಣ್ಣು ತುಂಬಿಸಿ ಭಾರೀ ಮಹಡಿಗಳ ಕಟ್ಟಡ ಕಟ್ಟಿರುವಲ್ಲೆಲ್ಲ ಪಾರ್ಕಿಂಗ್ ಏರಿಯಾದಲ್ಲಿ ನೀರ ಚಿಲುಮೆ ಅಲ್ಲಲ್ಲಿ ಚಿಮ್ಮುತ್ತಿರುವುದೂ ಕಂಡು ಬರುತ್ತಿದೆ.