Advertisement

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

10:35 AM Apr 19, 2024 | Team Udayavani |

ಕೋಟ: ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಮತದಾರರು, ಕಾರ್ಯಕರ್ತರು ಸಹಿತ ಎಲ್ಲರೂ ಪಕ್ಷಭೇದ ಮರೆತು ಜಯಪ್ರಕಾಶ್‌ ಹೆಗ್ಡೆ ಅವರನ್ನು ಇಷ್ಟಪಡುತ್ತಿದ್ದಾರೆ. ನೇರವಾಗಿ ಈ ಕ್ಷೇತ್ರದಲ್ಲಿ ನಮ್ಮ ಬೆಂಬಲ ಜೆಪಿಯವರಿಗೆ ಎನ್ನುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್‌ ಮುಖಂಡ ನಿಕೇತ್‌ ರಾಜ್‌ ಮೌರ್ಯ ತಿಳಿಸಿದರು.

Advertisement

ಅವರು ಬುಧವಾರ ಶಿರೂರು ಮೂರ್ಕೈ ಸಮೀಪ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ಪ್ರತೀ ಚುನಾವಣೆ ಯಲ್ಲಿ ತಾನು ಕೊಟ್ಟ ಆಶ್ವಾಸನೆಗಳನ್ನು ಉಳಿಸಿಕೊಂಡಿದೆ. ಅದರಲ್ಲೂ ಕಳೆದ ಬಾರಿ ಚುನಾವಣೆಯಲ್ಲಿ ಘೋಷಿಸಿದ ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುವ ಮೂಲಕ ಮತದಾರರ ಪಾಲಿನ ಗ್ಯಾರಂಟಿ ಪಕ್ಷ ಎನಿಸಿಕೊಂಡಿದೆ ಎಂದರು. ಕೃಷಿ ಇಲಾಖೆ ಸಹಾಯಕ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರ ಕ್ಷೇತ್ರಕ್ಕೆ ಇಲಾಖೆಯಡಿ ನೀಡಿದ ಒಂದೇ ಒಂದು ಕೊಡುಗೆಯನ್ನು ತೋರಿಸಿಕೊಡಿ ಎಂದರು.

ಅಡಿಕೆ ಬೆಳೆಗಾರ ಆಪತ್ತಿನಲ್ಲಿ

ಗುಜರಾತಿ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಸರಕಾರ ಆಡಿಕೆ ಆಮದು ನೀತಿಯನ್ನು ಸರಳಗೊಳಿಸಿದೆ. ಇದರಿಂದಾಗಿ ಅತ್ಯಂತ ಕಡಿಮೆ ಬೆಲೆಗೆ ಬರ್ಮಾದ ಅಡಿಕೆ ನಮ್ಮ ದೇಶಕ್ಕೆ ಲಗ್ಗೆ ಇಡುತ್ತಿದೆ. ಚುನಾವಣೆ ಕಾರಣಕ್ಕೆ ಇದನ್ನು ಸ್ವಲ್ಪಮಟ್ಟಿಗೆ ತಡೆ ಹಿಡಿದಿದ್ದು, ಮುಂದೆ ಪೂರ್ಣ ಪ್ರಮಾಣದಲ್ಲಿ ಆಮದು ಮಾಡಿಕೊಂಡರೆ ಅಡಿಕೆ ಬೆಳೆ ಗಾರರು ಕಂಗಾಲಾಗುವ ಸಂದರ್ಭ ಸೃಷ್ಟಿಯಾಗುತ್ತದೆ ಎಂದರು.

Advertisement

ದಾರಿ ತಪ್ಪಿದ ಕುಮಾರಣ್ಣ

ಕಾಂಗ್ರೆಸ್‌ನ ಗ್ಯಾರಂಟಿಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಇದು ಮಹಿಳೆಯರಿಗೆ ಮಾಡಿದ ಅವ ಮಾನವಾಗಿದೆ ಹಾಗೂ ಈ ರಾಜ್ಯದಲ್ಲಿ ದಾರಿ ತಪ್ಪಿದ ಮಗ ಕುಮಾರಸ್ವಾಮಿ ಎನ್ನುವುದು ಸಾಕ್ಷಿ ಸಮೇತ ಸಾಕಷ್ಟು ವರ್ಷಗಳ ಹಿಂದೆಯೇ ಸಾಬೀತಾಗಿದೆ ಎಂದು ಕಾಂಗ್ರೆಸ್‌ ವಕ್ತಾರ ಸುಧೀರ್‌ ಕಮಾರ್‌ ಮುರೊಳ್ಳಿ ತಿಳಿಸಿದರು.

ಗುರ್ಮೆ ಕೂಡ ಕಾಂಗ್ರೆಸ್‌ನಲ್ಲಿದ್ದರು

ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರು ನಾನು ಪಕ್ಷಾಂತರ ಮಾಡುತ್ತೇನೆ ಎಂದು ಆರೋಪಿಸಿದ್ದಾರಂತೆ. ಆದರೆ ಅವರು ಕೂಡ ಈ ಹಿಂದೆ ಕಾಂಗ್ರೆಸ್‌ನಲ್ಲೇ ಇದ್ದರು. ಕಾಪು ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಟಿಕೆಟ್‌ ಕೊಡಿಸುವಂತೆ ದಿಲ್ಲಿಯ ನನ್ನ ಕಚೇರಿಗೆ ಬರುತ್ತಿದ್ದರು. ಟಿಕೆಟ್‌ ಸಿಗದ ಕಾರಣಕ್ಕೆ ಪಕ್ಷ ತೊರೆದು ಬಿಜೆಪಿಗೆ ವಲಸೆ ಹೋದರು. ನನ್ನ ಬಗ್ಗೆ ಆರೋಪ ಮಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕ್ರಾಶ್‌ ಹೆಗ್ಡೆ ಪ್ರಶ್ನಿಸಿದರು.

ಕೋಟ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ್‌ ಕುಂದರ್‌ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಪ್ರಮುಖರಾದ ಗೋಪಾಲ ಪೂಜಾರಿ, ಕಿಶನ್‌ ಹೆಗ್ಡೆ ಕೊಳ್ಕೆಬೈಲು, ದಿನೇಶ್‌ ಹೆಗ್ಡೆ ಮೊಳ್ಳಹಳ್ಳಿ, ತಿಮ್ಮ ಪೂಜಾರಿ ಕೋಟ, ಡಾ| ಸುನೀತಾ ಶೆಟ್ಟಿ, ಮಮತಾ ಶೆಟ್ಟಿ, ಮೈರ್ಮಾಡಿ ಸುಧಾಕರ ಶೆಟ್ಟಿ, ಭುಜಂಗ ಶೆಟ್ಟಿ, ದಿನಕರ ಹೇರೂರು, ವಿನಯ ಕುಮಾರ್‌ ಕಬ್ಯಾಡಿ ಇದ್ದರು.

ಹೆಗ್ಡೆ ಉಡುಪಿ ಜಿಲ್ಲೆಯ ಬ್ರಿಜ್‌ಮ್ಯಾನ್‌

ಜಯಪ್ರಕಾಶ್‌ ಹೆಗ್ಡೆಯವರು ಉಡುಪಿ ಜಿಲ್ಲೆಯನ್ನು ಸ್ಥಾಪಿಸಿ ಜಿಲ್ಲೆಯ ಸಂಪರ್ಕ ಬೆಸೆದಿದ್ದಾರೆ ಮತ್ತು ಅವರ ಅಧಿಕಾರಾವಧಿಯಲ್ಲಿ ಹಳೆಯ ಬ್ರಹ್ಮಾವರ ಕ್ಷೇತ್ರ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ನಿರ್ಮಾಣಗೊಂಡಷ್ಟು ಸಂಪರ್ಕ ಸೇತುವೆಗಳು ಬೇರೆ ಯಾವ ಅವಧಿಯಲ್ಲೂ ನಿರ್ಮಾಣವಾಗಿಲ್ಲ. ಜತೆಗೆ ಜಾತಿ-ಜಾತಿಯ ನಡುವೆ, ಧರ್ಮ-ಧರ್ಮದ ನಡುವೆ ಸ್ನೇಹದ ಸೇತುವೆ ಕಟ್ಟಬೇಕಾದರು ಅದು ಹೆಗ್ಡೆ ಅವರಿಂದ ಮಾತ್ರ ಸಾಧ್ಯ ಎಂದು ನಿಕೇತ್‌ರಾಜ್‌ ಮೌರ್ಯ ತಿಳಿಸಿದರು.

ಇಂದು ಬೃಹತ್‌ ವಾಹನ ರ‍್ಯಾಲಿ, ಸಾರ್ವಜನಿಕ ಸಭೆ

ಹೆಬ್ರಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಪರವಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ನೇತೃತ್ವದಲ್ಲಿ ಕಾರ್ಕಳ ಬೈಪಾಸ್‌ನಿಂದ ಹೆಬ್ರಿ ತನಕ 500ಕ್ಕೂ ಮಿಕ್ಕಿ ವಾಹನ ಸಹಿತ ಬೃಹತ್‌ ಜಾಥಾ ಎ. 19ರಂದು ಅಪರಾಹ್ನ 3.30ರಿಂದ ನಡೆಯಲಿದೆ.

ಕೆ. ಜಯಪ್ರಕಾಶ್‌ ಹೆಗ್ಡೆ ಜಾಥಾಕ್ಕೆ ಚಾಲನೆ ನೀಡುವರು. ಸಚಿವ ಕೆ.ಜೆ. ಜಾರ್ಜ್‌ ಸಹಿತ ಕಾಂಗ್ರೆಸ್‌ ಮುಖಂಡರು ಭಾಗವಹಿಸಲಿದ್ದಾರೆ. ಹೆಬ್ರಿಯಲ್ಲಿ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್‌ ಮುಖಂಡ ಸುಧೀರ್‌ ಕುಮಾರ್‌ ಮುರೊಳ್ಳಿ ಪ್ರಧಾನ ಭಾಷಣಕಾರರಾಗಿ ಭಾಗ ವಹಿಸಲಿದ್ದಾರೆ ಎಂದು ಕಾರ್ಕಳ ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next