ಹೊಸದಿಲ್ಲಿ : ‘ಇಂದಿನ ಭಾರತಕ್ಕೆ ಸ್ವಾಮಿ ವಿವೇಕಾನಂದರು ಬಂದರೆ ಅಸಹಿಷ್ಣುತೆಯ ಗೂಂಡಾಗಳು ಅವರ ಮೇಲೆ ಇಂಜಿನ್ ಆಯಿಲ್ ಎಸೆಯುತ್ತಿದ್ದರು’ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ವ್ಯಂಗ್ಯವಾಡಿದ್ದಾರೆ.
ಹೀಗೆ ಹೇಳುವ ಮೂಲಕ ತರೂರ್ ಅವರು ಅಸಹಿಷ್ಣುತೆ ಪ್ರಕರಣಗಳಿಗೆ ಸಂಬಂಧಿಸಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧದ ತಮ್ಮ ವಾಕ್ಸಮರವನ್ನು ಮುಂದುವರಿಸಿದ್ದಾರೆ.
ಸ್ವಾಮಿ ಅಗ್ನಿವೇಶ್ ಅವರ ಸಮ್ಮುಖದಲ್ಲಿ ತಿರುವನಂತಪುರದ ಕಾರ್ಯಕ್ರಮವೊಂದರಲ್ಲಿ ತರೂರ್ ಮಾತನಾಡುತ್ತಿದ್ದರು.
“ಸ್ವಾಮಿ ವಿವೇಕಾನಂದರು ಇಂದಿನ ಭಾರತಕ್ಕೆ ಬಂದಲ್ಲಿ ಅವರ ಮೇಲೆ, ಸ್ವಾಮಿ ಅಗ್ನಿವೇಶ್ ಮೇಲೆ ದಾಳಿ ನಡೆಸಿದಂತೆ, ಇಂಜಿನ್ ಆಯಿಲ್ ಎಸೆಯುತ್ತಿದ್ದರು ಎಂಬುದು ನನಗೀಗ ಖಾತರಿಯಾಗಿದೆ’ ಎಂದು ತರೂರ್ ಹೇಳಿದರು.
”ಸ್ವಾಮಿ ಅಗ್ನಿವೇಶ್ ಮೇಲೆ ದಾಳಿ ನಡೆಸಿ ಅವರನ್ನು ನೆಲಕ್ಕೆ ಬೀಳಿಸಿ ಹಲ್ಲೆ ಮಾಡಿದ ರೀತಿಯಲ್ಲೇ ಸ್ವಾಮಿ ವಿವೇಕಾನಂದರ ಮೇಲೂ ಈ ಅಸಹಿಷ್ಣು ಗೂಂಡಾಗಳು ದಾಳಿ ಮಾಡುತ್ತಿದ್ದರು ಎಂಬ ಬಗ್ಗೆ ನನಗೀಗ ಸಂದೇಹವೇ ಇಲ್ಲ” ಎಂದು ಹೇಳಿದ ತರೂರ್, “ಮಾನವೀಯತೆಯೇ ನಿಜವಾದ ಧರ್ಮ; ಹಾಗೆ ಪ್ರತಿಪಾದಿಸುವವರನ್ನು ನಾನು ಗೌರವದಿಂದ ಕಾಣುತ್ತೇನೆ’ ಎಂದು ನುಡಿದರು.
ಸ್ವಾಮಿ ಅಗ್ನಿವೇಶ್ ಅವರ ಮೇಲೆ ಜಾರ್ಖಂಡ್‌ನ ಪಾಕೂರ್ ನಲ್ಲಿ ಕಳೆದ ತಿಂಗಳಲ್ಲಿ ಎಬಿವಿಪಿ ಮತ್ತು ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರು ಹೊಡೆದು ಹಲ್ಲೆ ನಡೆಸಿದ್ದರು.