Advertisement

ಈ ಸರಕಾರಿ ಪಿಯು ಕಾಲೇಜಿನಲ್ಲಿ ಫಲಿತಾಂಶ ಶೇ.90% ಬಂದರೂ ಸಮಸ್ಯೆಗಳು ಮಾತ್ರ ಶೇ.100 ರಷ್ಟಿದೆ

09:06 PM Jun 12, 2024 | Team Udayavani |

ಹೊಳಲ್ಕೆರೆ :ಜನಾಕರ್ಷಣೆಯ ಕಣ್ಮನಸೆಳೆಯುವ ನೋಟ, ಪ್ಯಾಶನ್ ಗ್ಲಾಸ್, ಹೊರಗೆ ಎಷ್ಟೊಂದು ಸುಂದರ ಎನ್ನುವಂತಿರುವ ಪಟ್ಟಣದ ಸರಕಾರಿ ಪಿಯು ಕಾಲೇಜು 2024ನೇ ಶೈಕ್ಷಣಿಕ ವರ್ಷದ ಆರಂಭಕ್ಕೆ ಬರಪೂರ ಸಿದ್ದತೆ ಕೈಗೊಂಡಿದ್ದರೂ, ಸಮಸ್ಯೆಗಳ ಸರಮಾಲೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕುತ್ತು ತಂದೊಡ್ಡಿದೆ.

Advertisement

ಕೊಠಡಿ ಕೊರತೆ, ದುರಸ್ತಿ ಕಾಣದ ಬೋಧನಾ ಕೊಠಡಿಗಳು, ಮುರಿದ ಪೀಠೋಪಕರಣ, ಗ್ರಂಥಾಲಯ, ಪ್ರಯೋಗಾಲಯ, ಶೌಚಾಲಯ ಗೃಹವಿಲ್ಲದೆ ಪರಿತಪ್ಪಿಸುವ ವಿದ್ಯಾರ್ಥಿಗಳು ಹೀಗೆ ಶೈಕ್ಷಣಿಕ ಸೌಲಭ್ಯಗಳ ಸಮಸ್ಯೆ ಹೊತ್ತು ಇದ್ದುದರಲ್ಲೇ ಗುರಿ ತಲುಪಿ ಕಲಾ ವಿಜ್ಞಾನ ವಾಣಿಜ್ಯ ವಿಭಾಗದ ಐದಾರು ನೂರು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಕಟ್ಟಲು ಹೆಣಗಾಡುವ ಸ್ಥಿತಿ.

1993ರಲ್ಲಿ ಆರಂಭಗೊಂಡ ಪಿಯು ಕಾಲೇಜಿಗೆ 2006 ರಲ್ಲಿ ಸ್ವಂತ ಕಟ್ಟಡ ನಿರ್ಮಿಸಿದ್ದರೂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಕಾಲೇಜಿನಲ್ಲಿ ಆರ್ಥಿಕ ದುರ್ಬಲ ಕುಟುಂಬದ ಹಿನ್ನಲೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶೈಕ್ಷಣಿಕ ಸೌಲಭ್ಯಗಳ ಕೊರತೆ ಜತೆ ವಿದ್ಯಾರ್ಥಿ, ಉಪನ್ಯಾಸಕರು ಇದ್ದುದರಲ್ಲೇ ಶೇ 90+ ಫಲಿತಾಂಶ ಕೊಟ್ಟ ಹೆಗ್ಗಳಿಕೆ ಇದೆ.

ಕಟ್ಟಡಕ್ಕೆ ಬೇಕಿದೆ ಕಾಯಕಲ್ಪ : ಸುಣ್ಣಬಣ್ಣವಿಲ್ಲದೆ ಅಲ್ಲಲ್ಲಿ ಬಿರುಕು ಬಿಟ್ಟ ಗೋಡೆ, ಮಳೆಗೆ ತೊಟ್ಟಿಕ್ಕುವ ಆರ್‌ಸಿಸಿ, ಮುರಿದ ಬಾಗಿಲು, ಕಿತ್ತು ಹೊದ ಕಿಟಕಿ, ಅಲ್ಲಲ್ಲಿ ಒಡೆದ ಗಾಜು, ಮುರಿದ ಕುರ್ಚಿ ಬೆಂಜ್, ವಾಚನಾಲಯವಿಲ್ಲದೆ ಧೂಳು ತಿನ್ನುವ ಪುಸ್ತಕ, ಪ್ರತ್ಯೇಕ ಕೊಠಡಿ ಇಲ್ಲದ ಪ್ರಯೋಗಾಲಯ, ಶೌಚಾಲಯ, ವಿದ್ಯುತ್, ನೀರು ಸೇರಿ ಮತ್ತೀತರ ಸೌಲಭ್ಯಗಳಿಗೆ ಕಾಯಕಲ್ಪ ನೀಡಬೇಕು.

ಶೌಚಾಲಯಕ್ಕೆ ಹೋರಾಟ: ಕಾಲೇಜು ಕಟ್ಟಡದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಮಲಮೂತ್ರ ವಿಸರ್ಜನೆ ವಿದ್ಯಾರ್ಥಿಗಳಿಗೆ ಸವಾಲಾಗಿದೆ. ಹಾಗಾಗಿ ಕದ್ದು ಮುಚ್ಚಿ ಕಾಲೇಜು ಗೋಡೆ ಸಂದಿಯಲ್ಲಿ ಜಲಬಾಧೆ ತೀರಿಸುಕೊಳ್ಳಬೇಕಿದೆ. ಶೌಚಾಲಯಕ್ಕಾಗಿ ಕಳೆದ ಹತ್ತು ವರ್ಷದಿಂದ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಬೆಳಿಗ್ಗೆ ಯಿಂದ ಸಂಜೆ 5 ರ ತನಕ ಕಾಲೇಜು ಇದ್ದರೂ ಶೌಚಾಲಯದ ಸಮಸ್ಯೆಗೆ ಎಷ್ಟೋ ವಿದ್ಯಾರ್ಥಿಗಳು ಮಧ್ಯಾಹ್ನದ ತರಗತಿಗೆ ಚಕ್ಕರ್ ಹಾಕಿ ಮನೆಗೆ ಹೋಗುತ್ತಿದ್ದಾರೆ.

Advertisement

ಕೊಠಡಿ ನಿರ್ಮಾಣಕ್ಕೆ ಬೇಡಿಕೆ : ಪ್ರವೇಶ ಪಡೆವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಈಗಿನ ಕೊಠಡಿ ಸಂಖ್ಯೆ ಸಾಲುತ್ತಿಲ್ಲ. ಉಪನ್ಯಾಸಕರು ಕಟ್ಟಡದ ಕಟ್ಟೆ, ಹಾಲ್, ಆವರಣದಲ್ಲಿ ಭೋದಿಸಬೇಕು. ಹತ್ತಾರು ಬೋಧನಾ ಕೊಠಡಿ, ಗ್ರಂಥಾಲಯ, ವಾಚನಾಲಯ, ಸಿಬ್ಬಂದಿ, ಮಹಿಳೆಯರ ಕೊಠಡಿ, ಪ್ರಯೋಗಾಲಯಕ್ಕೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಆಗಬೇಕು.

ಹೆಚ್ಚುತ್ತಿರುವ ಅನೈತಿಕ ಚುಟುವಟಿಕೆ : ಕಾಲೇಜು ಕಟ್ಟಡದ ಸುತ್ತಲು ಕಾಪೌಂಡ್ ಕಟ್ಟಿ ಗೇಟ್ ಸೌಲಭ್ಯ ಬೇಕು. ರಾತ್ರಿ ಕುಡುಗರ ಹಾವಳಿ ಹೆಚ್ಚಾಗಿ ಬಾಡಲಿ, ಕಪ್, ಪ್ಲಾಸ್ಟಿಕ್ ಕವರ್ ಬಿದ್ದಿರುತ್ತವೆ. ದಾರಿ ಹೊಕ ಭಿಕ್ಷುಕರು ತಂಗುತ್ತಿದ್ದಾರೆ. ಅನೈತಿಕ ಚಟುವಟಿ ಹೆಚ್ಚಾಗಿ, ಗೋಡೆ ಮೇಲೆ ಕಿಡಿಗೇಡಿಗಳ ಅಶ್ಲೀಲ ಬರವಣಿಗೆಯ ಕಿರಿಕಿರಿ ವಿದ್ಯಾರ್ಥಿಗಳು ಬೇಸತ್ತಿದ್ದಾರೆ.

ಒಟ್ಟಾರೆ ಹೇಳುವುದಾರೇ ಸಮಸ್ಯೆಗಳ ಸಂತೆ ಎನ್ನಲಾಗುವ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಸರಕಾರ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಕಾಲೇಜಿನಲ್ಲಿ ಸಮಸ್ಯೆಗಳು ಸಾಕಷ್ಟಿವೆ. ತುತ್ತಾಗಿ ಶೌಚಾಲಯ, ಕೊಠಡಿ, ಕಾಪೌಂಡು, ಪೀಠೋಪಕರಣ ಬೇಕು. ಇಲಾಖೆಗೆ ಸೌಕರ್ಯಕ್ಕಾಗಿ ಸಾಕಷ್ಟು ಭಾರಿ ಪತ್ರ ಬರೆದಿದೆ. ಇರುವ ಸೌಲಭ್ಯ ಜತೆ ಶಿಕ್ಷಣ ಕೊಡುವುದು ಕಠಿಣ ಮತ್ತು ಅನಿವಾರ್ಯ ಹೌದು.
-ಶಿವಪ್ಪ.ಡಿ ಪ್ರಾಚಾರ್ಯರು.

ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಒಳಗೆ ಕಿಟಕಿ, ಭಾಗಿಲು ಮುರಿದಿವೆ. ಸುಣ್ಣಬಣ್ಣವಿಲ್ಲದೆ ಪಾಳು ಬಿದ್ದಂತೆ ಕಾಣುವ ಗೋಡೆಗಳು. ಜನಪ್ರತಿನಿಧಿಗಳು, ಸರಕಾರದ ನಿರ್ಲಕ್ಷ್ಯ ವಿದ್ಯಾರ್ಥಿಗಳನ್ನು ಶೋಷಿಸುವುದು ಸರಿಯಲ್ಲ, ಅಗತ್ಯ ಸೌಲಭ್ಯ ಕಲ್ಪಿಸಬೇಕು.
-ಎಸ್.ಆರ್.ಮೋಹನ್ ನಾಗರಾಜ್, ಮಾಜಿ ಅಧ್ಯಕ್ಷ ತಾ.ಪಂ.

ಕಾಲೇಜಿನ ದುಸ್ಥಿತಿ ಕಂಡರೇ ಬೇಸರವಾಗುತ್ತದೆ. ವಿದ್ಯಾರ್ಥಿಗಳಿಗೆ ಒಂದು ಶೌಚಾಲಯ ಕಟ್ಟಿಲ್ಲದ ಕಟ್ಟಡದಲ್ಲಿ ಮಕ್ಕಳು ಹೇಗೆ ವಿದ್ಯಾಭ್ಯಾಸ ಮಾಡಬೇಕು. ಇಲ್ಲಿಗೆ ಬೇಕಾದ ಸೌಲಭ್ಯ ಕಲ್ಪಿಸಲು ತಾಲೂಕು ಆಡಳಿತ ಕ್ರಮ ವಹಿಸಬೇಕು.
– ಹೆಚ್.ಆರ್.ನಾಗರತ್ನವೇದಮೂರ್ತಿ ಪುರಸಭೆ ಸದಸ್ಯರು.

-ಎಸ್.ವೇದಮೂರ್ತಿ ಹೊಳಲ್ಕೆರೆ

 

Advertisement

Udayavani is now on Telegram. Click here to join our channel and stay updated with the latest news.

Next