Advertisement
2008ರಲ್ಲಿ ಕಾಂಗ್ರೆಸ್‌ನ ಎಚ್. ಟಿ. ಸಾಂಗ್ಲಿಯಾನ ಅವರನ್ನು 35,218 ಮತಗಳ ಅಂತರದಿಂದ ಮಣಿಸಿ ಸಂಸತ್ ಪ್ರವೇಶಿಸಿದ ಪಿ.ಸಿ.ಮೋಹನ್ ಈಗಾಗಲೇ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ಮೋಹನ್ ವಿರುದ್ಧ ಕಾಂಗ್ರೆಸ್ ಹುರಿಯಾಳಾಗಿ ಸ್ಪರ್ಧಿಸಿದ್ದ ರಿಜ್ವಾನ್ ಅರ್ಷದ್ 2019ರಲ್ಲಿ 5,31,885 ಮತ ಗಳಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಚಿತ್ರನಟ ಪ್ರಕಾಶ್ ರಾಜ್ 28,906 ಮತ ಪಡೆದಿದ್ದರೆ, ನೋಟಾಕ್ಕೆ 10,760 ಮತ ಚಲಾವಣೆಯಾಗಿತ್ತು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಂತಿನಗರ, ಗಾಂಧಿನಗರ, ಸರ್ವಜ್ಞನಗರ, ಶಾಂತಿನಗರ, ಚಾಮರಾಜಪೇಟೆ ವಿಧಾನಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ರಾಜಾಜಿನಗರ, ಮಹದೇವಪುರ ಹಾಗೂ ಸಿ.ವಿ.ರಾಮನ್ ನಗರದಲ್ಲಿ ಬಿಜೆಪಿ ವಿಜಯಿಯಾಗಿದೆ. ಕಳೆದ ಬಾರಿಯೂ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಇದೇ ಚಿತ್ರಣವಿತ್ತು. ಜಾತಿ ಲೆಕ್ಕಾಚಾರ
ಜಾತಿಯೇ ಗೆಲುವಿನ ಲೆಕ್ಕಾಚಾರವಾದರೆ ಈ ಕ್ಷೇತ್ರದಲ್ಲಿ ಇದುವರೆಗೆ ಕಾಂಗ್ರೆಸ್ ಸೋಲುವುದಕ್ಕೆ ಕಾರಣಗಳೇನು? ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಮುಸ್ಲಿಂ, ಕ್ರಿಶ್ಚಿಯನ್, ದಲಿತ ಹಾಗೂ ಹಿಂದುಳಿದ ವರ್ಗದ ಮತದಾರರು ಈ ಕ್ಷೇತ್ರದಲ್ಲಿ ಹೆಚ್ಚು ಬಾಹುಳ್ಯ ಸಾಧಿಸಿದ್ದಾರೆ. ಸುಮಾರು 6 ಲಕ್ಷ ಮುಸ್ಲಿಮರು, 2 ಲಕ್ಷ ಕ್ರಿಶ್ಚಿಯನ್ನರು, 4 ಲಕ್ಷ ದಲಿತರು ಬಲಿಜಿಗ, ಗೊಲ್ಲ, ಕುರುಬ, ತಿಗಳ, ವಿಶ್ವಕರ್ಮ, ಮಡಿವಾಳ, ಕಮ್ಮ ಇತ್ಯಾದಿ ಹಿಂದುಳಿದ ವರ್ಗಕ್ಕೆ ಸೇರಿದ ಸುಮಾರು 6 ಲಕ್ಷ ಜನರಿದ್ದಾರೆ. ಶಿವಾಜಿನಗರ, ಹಲಸೂರು, ಶೇಷಾದ್ರಿಪುರ, ಗಾಂಧಿನಗರ ಭಾಗದಲ್ಲಿರುವ ತಮಿಳರು ಇದುವರೆಗೆ ಭಾಗಶಃ ಬಿಜೆಪಿ ಕೈ ಹಿಡಿದಿದ್ದಾರೆ ಎನ್ನಲಾಗಿದೆ. ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ದಲಿತ ಮತ ಬ್ಯಾಂಕ್ ಭದ್ರಪಡಿಸಿಕೊಂಡು. ಶೇ.40ರಷ್ಟು ಒಕ್ಕಲಿಗರ ಮತ ಸೆಳೆಯುವ ಲೆಕ್ಕಾಚಾರಕ್ಕೆ ಕಾಂಗ್ರೆಸ್ ಕೈ ಹಾಕಿದರೆ ಈ ಬಾರಿಯ “ಗಣಿತ’ ಬದಲಾಗಬಹುದೆಂಬ ಚರ್ಚೆ ನಡೆಯುತ್ತಿದ್ದು, ಹೊಸ ಮುಖದ ಶೋಧ ನಡೆಯುತ್ತಿದೆ. ಈ ಹಿಂದೆ ಕ್ಷೇತ್ರದಲ್ಲಿದ್ದ 21 ಲಕ್ಷ ಮತದಾರರ ಸಂಖ್ಯೆ ಈ ಬಾರಿ 23ಲಕ್ಷಕ್ಕೆ ಏರಿಕೆಯಾಗಿರುವ ಸಾಧ್ಯತೆ ಇದೆ.
Related Articles
ಬಿಜೆಪಿಯಿಂದ ಹಾಲಿ ಸಂಸದ ಪಿ.ಸಿ.ಮೋಹನ್ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಕಾಂಗ್ರೆಸ್‌ನಲ್ಲಿ ಈ ಬಾರಿ ಹೊಸಮುಖಕ್ಕೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಿದೆ. ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಮೂವರು ಸಚಿವರಾದ ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್ ಹಾಗೂ ಜಮೀರ್ ಅಹ್ಮದ್ ಖಾನ್ ಸ್ಪರ್ಧೆಗೆ ಒಲವು ತೋರಿಲ್ಲ. ಮತ್ತೆ ಲೋಕಸಭೆ ಸ್ಪರ್ಧೆ ಇಲ್ಲ ಎಂದು ರಿಜ್ವಾನ್ ಅರ್ಷದ್ ಪಕ್ಷಕ್ಕೆ ತಿಳಿಸಿದ್ದಾರೆ.
Advertisement
ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ವರಿಷ್ಠರಿಂದ ಕೆಲವು ಭರವಸೆಗಳ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಕೆಪಿಸಿಸಿಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಘಟನೆಯ ಹಿನ್ನೆಲೆಯಿಂದ ಬಂದ ಎಸ್.ಎ.ಹುಸೇನ್ ಹೆಸರು ಬಲವಾಗಿ ಕೇಳಿ ಬಂದಿದೆ. “ಜಲ ಸತ್ಯಾಗ್ರಹ’ದ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನವನ್ನು ಹುಸೇನ್ ನಡೆಸುತ್ತಿದ್ದು, ಹೈಕಮಾಂಡ್‌ಗೆ ಕಳುಹಿಸಿರುವ ಪಟ್ಟಿಯಲ್ಲೂ ಇವರಿಬ್ಬರ ಹೆಸರು ಮಾತ್ರ ಇದೆ. ಯಾರೇ ಆದರೂ ಈ ಬಾರಿ ಕಾಂಗ್ರೆಸ್‌ನಿಂದ ಲೋಕಸಭೆಗೆ “ಹೊಸಮುಖ ಗ್ಯಾರಂಟಿ’ ಎಂದು ಹೇಳಲಾಗುತ್ತಿದೆ.
– ರಾಘವೇಂದ್ರ ಭಟ್