Advertisement

ಯಕ್ಷ ಸಪ್ತಸ್ವರದಲ್ಲಿ ಏಳು ಭಾಗವತರ ಸಿರಿಕಂಠದ ಭಾವರಸಾಭಿವ್ಯಕ್ತಿ

06:00 AM Jun 08, 2018 | |

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ವತಿಯಿಂದ ಸ್ಥಾಪಕಾಧ್ಯಕ್ಷ ಸತೀಶ್‌ ಶೆಟ್ಟಿ ಪಟ್ಲ ಭಾಗವತರ ನೇತೃತ್ವದಲ್ಲಿ ಮೇ 27ರಂದು ಜರಗಿದ ಯಕ್ಷಧ್ರುವ ಪಟ್ಲ ಸಂಭ್ರಮ ಯಕ್ಷಗಾನದ ಹಲವು ವೈಶಿಷ್ಟ್ಯಗಳನ್ನು, ಸಾಂಪ್ರದಾಯಕ ಸೊಗಸನ್ನು ಯಕ್ಷ ಕಲಾಭಿಮಾನಿಗಳಿಗೆ ಉಣ ಬಡಿಸಿತು.
ಚೌಕಿಪೂಜೆ, ಅಬ್ಬರ ತಾಳದ ಬಳಿಕ ಚೆಂಡೆಯ ಜುಗಲ್‌ಬಂದಿ, ನಂತರ ಪೀಠಿಕೆ ಸ್ತ್ರೀವೇಷ. ಮುಂದೆ ಉದ್ಘಾಟನಾ ಸಮಾರಂಭ. ಆ ಬಳಿಕ ಜರಗಿದ್ದು ಬಹುನಿರೀಕ್ಷಿತವಾದ “ಯಕ್ಷ ಸಪ್ತಸ್ವರ’ ಕಾರ್ಯಕ್ರಮ. ತೆಂಕು ಮತ್ತು ಬಡಗು ತಿಟ್ಟುಗಳ ಏಳು ಮಂದಿ ಭಾಗವತರಾದ ಬಲಿಪ ನಾರಾಯಣ ಭಾಗವತರು, ಪದ್ಯಾಣ ಗಣಪತಿ ಭಟ್‌, ಪುತ್ತಿಗೆ ರಘುರಾಮ ಹೊಳ್ಳ, ರಾಘವೇಂದ್ರ ಮಯ್ಯ, ಸುರೇಶ್‌ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್‌ ಕಕ್ಕೆಪದವು.


ದೇವತಾಸ್ತುತಿ- ಗಜಮುಖದವಗೆ ಗಣಪಗೆ… ಮತ್ತು ಪೀಠಿಕೆಯನ್ನು ಬಲಿಪ ಭಾಗವತರು ನಡೆಸಿಕೊಟ್ಟರು. ಒಟ್ಟು ಕಾರ್ಯಕ್ರಮದಲ್ಲಿ ಸಪ್ತಭಾಗವತರಿಂದ ಸಪ್ತ ಸ್ವರಗಳ ನವರಸದ ಹಾಡುಗಳು ಪರಿಸರವನ್ನು ಸಂಪೂರ್ಣ ರಸಮಯವನ್ನಾಗಿಸಿತು. ಬಲಿಪರ ಬಳಿಕ ಪದ್ಯಾಣರು ನೋಡಿದೆಯಾ ರಾಮ ಎಂಬ ಸೀತಾಪಹರಣದ ಶ್ರೀರಾಮ- ಸೀತೆಯ ಸಂಭಾಷಣೆಯ ಹಾಡು, ಮಯ್ಯರು ಬಂದಳ್ಳೋ ನಸುನಗೆಯಿಂದ ಎಂಬ ವಿಪ್ರಲಂಬ ಶೃಂಗಾರದ ಹಾಡು; ಸುರೇಶ್‌ ಶೆಟ್ಟಿ ಅವರು ಅದೇ ಶೈಲಿಯಲ್ಲಿ ಕಾಳಿದಾಸನ ಕಂಡನು ಕಲಾಧರನು ಹಾಡುಗಳನ್ನು; ಬಳಿಕ ಕನ್ನಡಿಕಟ್ಟೆ ಮತ್ತು ಕುಕ್ಕೆಪದವು ಅವರು ಶೃಂಗಾರ ರಸದಲ್ಲಿ ದ್ವಂದ್ವ ಹಾಡುಗಾರಿಕೆಯಲ್ಲಿ ಶ್ರೀರಾಮ ಕಾರುಣ್ಯದ ಬೆಂದಿರುವ ಮನಕೆ ಮುದವ ನೀಡಿ… ಪ್ರಸ್ತುತ ಪಡಿಸಿದರು. ಮುಂದಿನ ದ್ವಂದ್ವ ಹಾಡುಗಾರಿಕೆ ಪದ್ಯಾಣ ಮತ್ತು ಪುತ್ತಿಗೆಯವರದ್ದು: ಜಾಂಬವತಿ ಕಲ್ಯಾಣದ ಉದಯ ಚಂದಿರ ಕಾಂತಿ ಜೋಜೋ ಹಾಡು.

Advertisement

ಒಂದೇ ಪದಗಳ ಅರ್ಥ ವೈವಿಧ್ಯಗಳನ್ನು ಧ್ವನಿಸಿದ ಕಾರ್ಯಕ್ರಮವಿದು. ಮಯ್ಯ ಮತ್ತು ಶೆಟ್ಟಿ ಕರುಣ ರಸವನ್ನು ಶಶಿಪ್ರಭಾ ಪರಿಣಯದ ಆರ ಕೈ ಸೇರಿತು ಮೂಲಕ ಹಾಡಿದರು. ಪದ್ಯಾಣರು ಪ್ರಸ್ತುತಪಡಿಸಿದ ವೀರರಸದ ಹಾಡಿನ ಮೂಲಕ ಯಕ್ಷ ಸಪ್ತಸ್ವರ ಸಂಪನ್ನಗೊಂಡಿತು. ನಡುವೆ ವೈಯಕ್ತಿಕ ಮತ್ತು ದ್ವಂದ್ವ ಸ್ವರೂಪದಲ್ಲಿ ನವರಸಾಭಿವ್ಯಕ್ತಗೊಂಡಿತು. 

ಪದ್ಮನಾಭ ಉಪಾಧ್ಯ, ಶಿವಾನಂದ ಕೋಟ ಚೆಂಡೆಯಲ್ಲಿ, ಕೃಷ್ಣಪ್ರಕಾಶ್‌ ಉಳಿತ್ತಾಯ, ಚೈತನ್ಯಕೃಷ್ಣ ಪದ್ಯಾಣ, ವಿನಯ ಆಚಾರ್ಯ ಕಡಬ, ಸುನಿಲ್‌ ಭಂಡಾರಿ ಮದ್ದಳೆಯಲ್ಲಿ, ಪ್ರಾಣೇಶ್‌ ಆಚಾರ್ಯ, ಪುರುಷೋತ್ತಮ ಆಚಾರ್ಯ ಚಕ್ರತಾಳದಲ್ಲಿ ಸಹಕರಿಸಿದರು. ಮಾಧವ ಕೊಳ್ತಮಜಲು ಸಂಯೋಜಿಸಿದ ಕಾರ್ಯಕ್ರಮವನ್ನು ಪುಷ್ಪರಾಜ್‌ ಇರಾ ನಿರೂಪಿಸಿದರು. ಪೂರ್ತಿ ದಿನವೇ ಬೇಕಾದ ಈ ರೀತಿಯ ತೆಂಕು ಬಡಗು ಸಂತುಲಿತ ಕಾರ್ಯಕ್ರಮವನ್ನು ಯಕ್ಷಸಂಭ್ರಮದ ಸಂಯಮ ಪರಿಮಿತಿಯೊಳಗೆ ನಡೆಸಿದ್ದು ಶ್ಲಾಘನೀಯವಾಯಿತು.

ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ಬಳಿಕ ಮಹಿಳಾ ಯಕ್ಷಗಾನ. ಕರಾವಳಿಯ ಯಕ್ಷಗಾನ ಪರಂಪರೆ ಈಗ ವೃತ್ತಿಪರ ಮತ್ತು ಹವ್ಯಾಸಿ ಮಹಿಳಾ ಕಲಾವಿದರಿಂದ ಸಮೃದ್ಧವಾಗಿದೆ. ಈ ಮಾತಿಗೆ ಪೂರಕ ಎಂಬಂತೆ ಈ ಸಂಭ್ರಮದಲ್ಲಿ ಮಹಿಳಾ ಯಕ್ಷಗಾನ ಪ್ರದರ್ಶನಗೊಂಡಿತು.ಡಾ| ಶಿಮಂತೂರು ನಾರಾಯಣ ಶೆಟ್ಟಿ ಹಾಗೂ ಗಣೇಶ್‌ ಕೊಲೆಕಾಡಿ ರಚಿಸಿದ ಯಕ್ಷಗಾನ ಪ್ರಸಂಗಗಳು ಸಂಪುಟ ಪ್ರಕಾಶನ- ಕೃತಿ ಬಿಡುಗಡೆ ನೆರವೇರಿತು. 

 ಮನೋಹರ ಪ್ರಸಾದ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next