ಉಡುಪಿ: ಕಳೆದ ಕೆಲವು ದಿನಗಳಿಂದ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಇಡೀ ಆಕಾಶವೇ ಕೆಂಬಣ್ಣಕ್ಕೆ ತಿರುಗಿತ್ತು. ಈ ದೃಶ್ಯ ಅದೆಷ್ಟು ರಮ್ಯ ಮನೋಹರವಾಗಿತ್ತು ಎಂದರೇ, ನಮ್ಮ ಚಿತ್ತವನ್ನು ಆಕಾಶದಿಂದ ಕದಲಿಸಲೇಬಾರದೆಂಬುವಷ್ಟಿತ್ತು. ಇದೀಗ ಪಿಪಿಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಉಡುಪಿಯ ಡಾ. ಎ ಪಿ ಭಟ್ ಪ್ರಕೃತಿಯ ಈ ಅದ್ಭುತ ಸೌಂದರ್ಯವನ್ನು ತಮ್ಮ ಬರಹದಿಂದ ವರ್ಣಿಸಿದ್ದು, ಎಂತವರನ್ನೂ ಮಂತ್ರಮುಗ್ಧರನ್ನಾಗಿಸುಂತಿದೆ.
ಈಗ ಕೆಲ ದಿನಗಳಿಂದ ಸೂರ್ಯಾಸ್ತ ಹಾಗೂ ಸೂರ್ಯೋದಯ ನೋಡಿದಿರಾ ?. ಅದೆಂತಹ ಕೆಂಬಣ್ಣ. ಇಡೀ ವರ್ಷದಲ್ಲೇ ಇದೊಂದು ಚೆಂದದ ಸೂರ್ಯೋದಯ ಹಾಗೂ ಸೂರ್ಯಾಸ್ತ. ಸೂರ್ಯಾಸ್ತವಂತೂ ಕೆಂಪೋ ಕೆಂಪು. ನೋಡಲೇ ಬೇಕೆನ್ನುವಷ್ಟು ಬಣ್ಣ. ಸೂರ್ಯ ಕಣ್ಮರೆಯಾಗುವಾಗ ಇಡೀ ಆಕಾಶವೇ ಕೆಂಬಣ್ಣದ ಓಕುಳಿ. ” ಕೆಂಪಾದವೋ ಎಲ್ಲಾ ಕೆಂಪಾದವೋ ” .
ಎಲ್ಲರನ್ನೂ ಕೂಗಿ ಕರೆದು , ನೋಡಿ! ನೋಡಿ ! ಎನ್ನುವಷ್ಟು ಚೆಂದ. ಇದು ಆಶ್ವೀಜ ಕಳೆದ ಕಾರ್ತೀಕದ ಆಕಾಶದ ವಿಶೇಷ. ಮಳೆಗಾಲ ಮುಗಿದು, ಹಾಗೆ ಚಳಿ ಪ್ರಾರಂಭದ ನಮ್ಮ ಆಕಾಶದ ವಾತಾವರಣವೇ ಈ ಭವ್ಯತೆಗೆ ಕಾರಣ. ಹಾಗಾದರೆ ಈ ತಿಂಗಳು ಮಾತ್ರ ಇಷ್ಟು ಕೆಂಬಣ್ಣವೇ ? ಎಂದು ಕೇಳಿದರೆ, ಹೌದು. ಮಳೆಗಾಲದಲ್ಲಿ ಈ ಚೆಂದ ಇರುವುದೇ ಇಲ್ಲ. ಬರೇ ಬಿಳಿ. ಹಾಗೆಯೆ ಫೆಬ್ರವರಿ, ಮಾರ್ಚ್, ಎಪ್ರಿಲ್, ಮೇ ತಿಂಗಳುಗಳಲ್ಲಿ ಇಷ್ಟು ಕೆಂಬಣ್ಣವಿರುವುದಿಲ್ಲ. ಹಳದಿ ಮಿಶ್ರಿತ ಸೌಮ್ಯ ಕೆಂಪು. ಸೆಪ್ಟೆಂಬರ್ ಕಾಲದಲ್ಲಿ ಸೂರ್ಯಾಸ್ತ ಅರಿಶಿನ ಬಣ್ಣ.
ಇಷ್ಟು ಮಾತ್ರವಲ್ಲ, ಆಶ್ವೀಜ, ಕಾರ್ತೀಕದ ಈ ಹುಣ್ಣಿಮೆಗಳ ಚಂದ್ರನಿಗೆ ಭವ್ಯ ವರ್ತುಲವೇರ್ಪಡಬಹುದು. ಹಾಗೂ ಈ ಕಾಲದಲ್ಲೇ ಮಧ್ಯಾಹ್ನದ ಸೂರ್ಯನಿಗೆ ಭವ್ಯ ವರ್ತುಲಾಕಾರದ ಕಾಮನಬಿಲ್ಲಿನ ಕೊಡೆ ಕಾಣಬಹುದು.ಇದೆಲ್ಲದಕ್ಕೂ ನಮ್ಮ ಭೂಮಿಯ ವಾತಾವರಣವೇ ಕಾರಣ. ತೇವ ಮಿಶ್ರಿತ ವಾತಾವರಣದಲ್ಲಿ ಸೂರ್ಯನ ಬೆಳಕು ಚೆದುರಿ, ಈ ಭವ್ಯತೆಯನ್ನು ಮಾಡುತ್ತದೆ. ಸರ್ ಸಿ ವಿ ರಾಮನ್ ರಿಗೆ ಇದೇ ಬಣ್ಣದೋಕುಳಿಯೇ ಹೊಸ ಹೊಸ ಚಿಂತನೆಗೆ ಕಾರಣವಾಯಿತು. ಅವರ ನೋಬೆಲ್ ಪ್ರಶಸ್ತಿಗೂ ಮೂಲ ಕಾರಣವಾಯಿತು.
ಸಮುದ್ರತೀರದಲ್ಲಿ ಹಾಗೂ ಪಶ್ಚಿಮ ಘಟ್ಟದ ಎತ್ತರದ ಪ್ರದೇಶಗಳಲ್ಲಿ, ಈ ಕೆಲದಿನಗಳ ಪ್ರಶಾಂತ ಸಂಜೆ, ಆಕಾಶದ ಹೊಸ ಹೊಸ ಚಿತ್ತಾರಗಳಿಂದ, ಯಾರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ರಾತ್ರಿಯ ನೀಲಾಕಾಶದ ನಕ್ಷತ್ರಗಳೂ, ಈಗ ಬಲು ಚೆಂದ. ಈ ಎಲ್ಲಾ ಸೊಬಗು ನಮಗೆ ಮಾತ್ರ. ನಮ್ಮ ಭೂಮಿಯವರಿಗೆ ಮಾತ್ರ. ಬೇರೆ ಯಾವಗ್ರಹಗಳಲ್ಲೂ ವಾತಾವರಣವಿಲ್ಲದೇ ಇರುವುದರಿಂದ, ಈ ಬಣ್ಣದ ಚಿತ್ತಾರ ಇಲ್ಲವೇ ಇಲ್ಲ. ಬೇಕೆಂದಾಗ ಸಿಗದ ಈ ಸೊಬಗನ್ನು ನೋಡಿ ಆನಂದಿಸಬೇಕು.
ಡಾ. ಎ ಪಿ ಭಟ್ ಉಡುಪಿ.