Advertisement

Chikkody: ಪ್ರತ್ಯೇಕ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡುವಂತೆ ಶಾಸಕ ಗಣೇಶ ಹುಕ್ಕೇರಿ ಆಗ್ರಹ

04:36 PM Dec 15, 2023 | Team Udayavani |

ಬೆಳಗಾವಿ: ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಬೇಕು ಹಾಗೂ ಸತತ 4 ದಶಕಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ತೆರೆ ಎಳೆಯಬೇಕೆಂದು ಶಾಸಕ ಗಣೇಶ ಹುಕ್ಕೇರಿ ಸದನದಲ್ಲಿ ಆಗ್ರಹಿಸಿದರು.

Advertisement

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡು ಚಿಕ್ಕೋಡಿ ಜಿಲ್ಲಾ ರಚನೆಯ ಅನಿವಾರ್ಯತೆ ಬಗ್ಗೆ ಮಾತನಾಡಿದ ಶಾಸಕರು ಬೆಳಗಾವಿ ಜಿಲ್ಲೆಯ ಜಿಲ್ಲಾ ಕೇಂದ್ರದಿಂದ ಗಡಿ ಗ್ರಾಮಗಳ ಅಂತರವೇ 200 ಕಿ.ಮೀಗೂ ಅಧಿಕವಿದೆ. ಅಥಣಿ ತಾಲೂಕಿನ ಗಡಿ ಅಂಚಿನ ಜನ ಪತ್ರ ವ್ಯವಹಾರಕ್ಕೂ 190 ಕಿಮೀ ದೂರದ ಜಿಲ್ಲಾ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಗಡಿ ಗ್ರಾಮಗಳಿಗೆ ಭೇಟಿ ನೀಡಿದರೆ ಇಡೀ ದಿನ ಹೋಗುತ್ತದೆ ಎಂಬ ಕಾರಣಕ್ಕಾಗಿ ಜಿಲ್ಲಾಮಟ್ಟದ ಅಧಿಕಾರಿಗಳ ಭೇಟಿಯೂ ಸಹ ಅಪರೂಪ, ಜಿಲ್ಲಾಸ್ಪತ್ರೆ ಅವಲಂಬಿಸಬೇಕಿದ್ದ ಅಥಣಿ, ಕಾಗವಾಡ, ಕುಡಚಿ, ರಾಯಬಾಗ, ನಿಪ್ಪಾಣಿ ತಾಲೂಕುಗಳ ಬಹುತೇಕರು ನೆರೆ ರಾಜ್ಯ ಮಹಾರಾಷ್ಟ್ರದ ಆಸ್ಪತ್ರೆಗಳನ್ನು ಆಶ್ರಯಿಸುತ್ತಿದ್ದಾರೆ. ದ್ರಾಕ್ಷಿ, ದಾಳಿಂಬೆ ಸೇರಿದಂತೆ ಪ್ರಮುಖ ಬೆಳೆಗಳಿಗೆ ಮಹಾರಾಷ್ಟ್ರವೇ ಮಾರುಕಟ್ಟೆಯಾಗಿದ್ದರಿಂದ ರಾಜ್ಯಕ್ಕೆ ಸೇರಬೇಕಿದ್ದ ರಾಜಸ್ವ ಪಕ್ಕದ ರಾಜ್ಯಗಳ ಪಾಲಾಗುತ್ತಿದೆ.

ಅಧಿಕಾರ ವಿಕೇಂದ್ರೀಕರಣ ಆದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದು ತಮಗೂ ಗೊತ್ತಿದೆ. ಅದಕ್ಕಾಗಿ ಬೆಳಗಾವಿಯನ್ನು ವ್ಯವಸ್ಥಿತವಾಗಿ ವಿಭಜಿಸಿ, ಚಿಕ್ಕೋಡಿ ಯನ್ನು ನೂತನ ಜಿಲ್ಲೆಯಾಗಿ ರಚಿಸಿ ಜನ ಸಾಮಾನ್ಯರಿಗೆ ಎಲ್ಲ ರೀತಿಯಿಂದಲೂ ಅನುಕೂಲ ಮಾಡಿಕೊಡಬೇಕು. ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಮ್ಮ ಮೂಲಕ ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಘನ ಸರ್ಕಾರಕ್ಕೆ ಜನತೆಯ ಪರವಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಈ ವೇಳೆ ಚಿಕ್ಕೋಡಿ ತಾಲೂಕಿನ ರೈತರ ಬಹುದಿನಗಳ ಕನಸಾದ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯ ಬಗ್ಗೆ ಮಾತನಾಡಿದ ಶಾಸಕರು, ಈಗಾಗಲೇ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಮಂಜೂರಾಗಿ ಟೆಂಡರ್ ಪ್ರಕ್ರಿಯೆಯಲ್ಲಿರುವ ಕಾರಣ ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ಅತೀ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಬೇಕೆಂದು ವಿನಂತಿಸಿದರು.

ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ: ಒಟ್ಟು 382.30 ಕೋಟಿ ರೂ. ವೆಚ್ಚದ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಚಿಕ್ಕೋಡಿ ತಾಲೂಕಿನ ಸುಮಾರು 21 ಹಳ್ಳಿಗಳ ರೈತರ ಒಟ್ಟು 78000 ಹೆಕ್ಟೇರ್ ಜಮೀನುಗಳು ನೀರಾವರಿಯಾಗಿ ಮಾರ್ಪಡಲು ಸಹಕಾರಿಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next