Advertisement

ಪೊಲೀಸ್‌ ಕಣ್ಗಾವಲಲ್ಲಿ ಶುರುವಾಯ್ತು ಕಾಮಗಾರಿ

11:44 AM Jun 02, 2019 | Suhan S |

ಬೆಳಗಾವಿ: ತಾಲೂಕಿನ ಹಲಗಾ ಗ್ರಾಮದ ಹೊರ ವಲಯದ ಜಮೀನಿನಲ್ಲಿ ನಗರ ಒಳಚರಂಡಿ ನೀರು ಶುದ್ಧೀಕರಣ ಘಟಕಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಶುಕ್ರವಾರ ಬಿಗಿ ಪೊಲೀಸ್‌ ಬಂದೋಬಸ್ತ್ನಲ್ಲಿ ನಡೆದಿದ್ದು, ಯಾವೊಬ್ಬ ರೈತರೂ ಜಮೀನಿನ ಒಳಗೆ ಬರದಂತೆ ಪೊಲೀಸರು ಕಣ್ಗಾವಲು ಹಾಕಿದ್ದಾರೆ.

Advertisement

ಹಲಗಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನಿನಲ್ಲಿ 17 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕಾಗಿ ಭೂಸ್ವಾಧೀನಕ್ಕೆ ರೈತರ ವಿರೋಧ ಆಗುತ್ತಿದ್ದಂತೆ ಖಾಕಿ ಸರ್ಪಗಾವಲು ಹಾಕಲಾಗಿದೆ. 19.20 ಎಕರೆ ಜಮೀನಿನಲ್ಲಿ ಈ ಘಟಕ ನಿರ್ಮಾಣವಾಗಲಿದ್ದು, 3-4 ಜೆಸಿಬಿ ಮೂಲಕ ಭೂಮಿ ಸಮತಟ್ಟು ಮಾಡುವುದು ಹಾಗೂ ಆವರಣಕ್ಕೆ ತಂತಿ ಬೇಲಿ ಹಾಕುವ ಕಾರ್ಯ ಮುಂದುವರಿಸಲಾಗಿದೆ.

ಹಲಗಾ ಬ್ರಿಜ್‌ ಬಳಿಯ ಸರ್ವೀಸ್‌ ರಸ್ತೆಯ ಎರಡೂ ಕಡೆಯಿಂದ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಸರ್ವೀಸ್‌ ರಸ್ತೆಯಲ್ಲಿ ಯಾವುದೇ ವಾಹನ ಓಡಾಡದಂತೆ ಪೊಲೀಸರು ಕಾಯುತ್ತ ನಿಂತಿದ್ದಾರೆ. ನಡೆದುಕೊಂಡೂ ಹೋಗಲೂ ಅಲ್ಲಿ ಜಾಗವಿಲ್ಲ. ಕೇವಲ ಜೆಸಿಬಿ ಹಾಗೂ ಸರ್ಕಾರಿ ವಾಹನಗಳನ್ನು ಬಿಟ್ಟರೆ ಇನ್ನುಳಿದಂತೆ ಯಾವ ವಾಹನಕ್ಕೂ ಅಲ್ಲಿ ಅವಕಾಶವಿಲ್ಲ.

ಯಾವುದೇ ಕಾರಣಕ್ಕೂ ಜಮೀನು ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ರೈತರು ಶುಕ್ರವಾರ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕುರ್ಚಿಗಳನ್ನು ಮುರಿದು, ಧ್ವಂಸ ಮಾಡಿ ಕಣ್ಣೀರು ಹಾಕಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಎದುರು ರೈತರು ಅಳಲು ತೋಡಿಕೊಂಡಿದ್ದರು. ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಿದ್ದ ಶಾಸಕಿ ಹೆಬ್ಟಾಳಕರ ಅವರು, ರೈತರ ಪರವಾಗಿ ನಾನು ಇರುತ್ತೇನೆ. ಯಾವುದೇ ಕಾರಣಕ್ಕೂ ರೈತರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ರೈತರಿಗೆ ಅನ್ಯಾಯ ಆಗಲು ಬಿಡಲ್ಲ: ಹೆಬ್ಟಾಳಕರ:

ಈ ಭಾಗದಲ್ಲಿರುವ ರೈತರು ಅನಕ್ಷರಸ್ಥರು, ಮುಗ್ಧರು. ಯಾವುದೇ ಕಾನೂನಿನ ಅರಿವಿಲ್ಲದೇ ತಮ್ಮ ಜಮೀನು ಬರೆದು ಕೊಟ್ಟಿದ್ದಾರೆ. ಚರಂಡಿ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವಾಗ ರೈತರ ಮನಸ್ಸಿಗೆ ನೋವಾಗಿದೆ. ಅವರಿಗೆ ಸೂಕ್ತ ನ್ಯಾಯ ಒದಗಿಸಿ ಕೊಡುವ ಜವಾಬ್ದಾರಿ ಎಲ್ಲರ ಮೇಲೆಯೂ ಇದೆ ಎಂದು ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಹೇಳಿದರು. ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರ ಭೂಮಿ ಅಂತೂ ಜಿಲ್ಲಾಡಳಿತ ಸ್ವಾಧೀನ ಪಡಿಸಿಕೊಂಡಿದೆ. ಆದರೆ ರೈತರಿಗೆ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ರೈತ ಕುಟುಂಬಕ್ಕೆ ನೌಕರಿ, ಹೆಚ್ಚಿನ ಪರಿಹಾರ ನೀಡುವುದು ಸೇರಿದಂತೆ ಇತರೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಹೇಳಿದರು.
ಹಲಗಾ ರೈತರಿಗೆ 30 ಲಕ್ಷ ಪರಿಹಾರ: ಸಚಿವ ಜಾರಕಿಹೊಳಿ ಭರವಸೆ:

ಹಲಗಾದಲ್ಲಿ ಒಳಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ಜಮೀನು ನೀಡಿರುವ ರೈತರಿಗೆ 30 ಲಕ್ಷ ರೂ. ಪರಿಹಾರ ನೀಡಲಾಗುವುದು. ಇದೊಂದು ವಿಶೇಷ ಪ್ರಕರಣವಾಗಿ ಪರಿಗಣಿಸಲಾಗಿದೆ ಎಂದು ಅರಣ್ಯ ಹಾಗೂ ಪರಿಸರ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಯಾವ ಜಿಲ್ಲಾಧಿಕಾರಿ ಬಂದರೂ ಏನೂ ಆಗುವುದಿಲ್ಲ. ಈಗಾಗಲೇ ಜಮೀನು ಸರ್ಕಾರದ ವಶದಲ್ಲಿದೆ. ಹಿಂದಿನ ಜಿಲ್ಲಾಧಿಕಾರಿ ಇರಲಿ ಅಥವಾ ಈಗಿನ ಜಿಲ್ಲಾಧಿಕಾರಿ ಇದ್ದರೂ ಜಮೀನು ಸ್ವಾಧೀನ ಪಡಿಸಿಕೊಳ್ಳುವುದು ಅವರ ಜವಾಬ್ದಾರಿ. ಈ ಪ್ರಕ್ರಿಯೆ ಎಲ್ಲವೂ ಮುಗಿದು ಹೋಗಿದೆ. ರೈತರಿಗೆ ಜಮೀನು ವಾಪಸು ಕೊಡಲು ಆಗುವುದಿಲ್ಲ. ರೈತರಿಗೆ ಸುಳ್ಳು ಭರವಸೆ ನೀಡಲು ಆಗುವುದಿಲ್ಲ ಎಂದರು. ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಇದನ್ನು ಅರ್ಥ ಮಾಡಿಕೊಳ್ಳಬೇಕು. ಅನ್ಯಾಯ, ತೊಂದರೆ ಆಗಿದ್ದರೆ ಸಹಿಸಿಕೊಳ್ಳಬೇಕು. ಪರ್ಯಾಯ ಮಾರ್ಗವಿಲ್ಲ. ಶಾಸಕರು ಸರ್ಕಾರದ ಒಂದು ಭಾಗ. ಆ ಕ್ಷೇತ್ರದ ಶಾಸಕರಾಗಿರುವುದರಿಂದ ಅವರು ರೈತರ ಪರ ಮಾತನಾಡುವುದರಲ್ಲಿ ತಪ್ಪಿಲ್ಲ. ರೈತರಿಗೆ ತಿಳಿ ಹೇಳುವುದು ಅವರ ಕರ್ತವ್ಯ. ಇದರಲ್ಲಿ ಲಕ್ಷ್ಮೀ ಹೆಬ್ಟಾಳಕರ-ಸತೀಶ ಜಾರಕಿಹೊಳಿ ಶೀತಲ ಸಮರದ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next