Advertisement

ಕಾರ್ಕಳದ ಅಂಚೆ ಪುತ್ತೂರು ವಿಭಾಗದಲ್ಲಿ  !

12:30 AM Mar 09, 2019 | Team Udayavani |

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಂಚೆ ಕಚೇರಿ ಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ಅಂಚೆ ಕಚೇರಿಯೇ ಈಗಲೂ ವಿಭಾಗೀಯ (ಡಿವಿಜನಲ್‌) ಕೇಂದ್ರ.

Advertisement

ಕಾರ್ಕಳ ಉಪವಿಭಾಗೀಯ ಅಂಚೆ ಕಚೇರಿ ಸಿಬಂದಿ ಮತ್ತು ತಾಲೂಕಿನ 54 ಗ್ರಾಮೀಣ ಅಂಚೆ ಕಚೇರಿ ಸಿಬಂದಿ ವರ್ಗ ತರಬೇತಿ ಸಹಿತ ಇನ್ನಿತರ ಕಾರ್ಯಗಳಿಗಾಗಿ ಪುತ್ತೂರು ಡಿವಿಜನಲ್‌ ಕೇಂದ್ರವನ್ನೇ ನೆಚ್ಚಿಕೊಳ್ಳಬೇಕಾಗಿದೆ.

ಉಡುಪಿಗೆ ಸಮೀಪದಲ್ಲಿರುವ ಹೆಬ್ರಿ, ಬೈಲೂರು, ಹಿರಿಯಡಕ ಮೊದಲಾದ ಅಂಚೆ ಕಚೇರಿಗಳ ಸಿಬಂದಿ ಪುತ್ತೂರಿಗೆ ಹೋಗುವುದು ತ್ರಾಸದಾಯಕ. ಏಕೆಂದರೆ ಪುತ್ತೂರಿಗೆ ತೆರಳಬೇಕಾದರೆ ಸುಮಾರು 120 ಕಿ.ಮೀ. ಕ್ರಮಿಸಬೇಕು; ಜತೆಗೆ ಮೂರು ಬಸ್‌ ಬದಲಾಯಿಸಬೇಕು.

ಜಿಲ್ಲೆ ಬದಲಾದರೂ…
1997ರಲ್ಲಿ ಉಡುಪಿ ಜಿಲ್ಲೆ ಅನುಷ್ಠಾನಗೊಂಡಿತ್ತು. ಆದರೆ ಕಾರ್ಕಳದ ಅಂಚೆ ಕಚೇರಿಗಳನ್ನು ಪುತ್ತೂರು ಡಿವಿಜನಲ್‌ನಲ್ಲೇ ಉಳಿಸಿಕೊಳ್ಳಲಾಗಿತ್ತು. ಅಂದು ಇಂದಿಗೂ ಹಾಗೇ ಇದೆ.

ಉಡುಪಿಗೆ ಯಾಕಿಲ್ಲ ?
ಉಡುಪಿ ವಿಭಾಗೀಯ ಕಚೇರಿ ಹತ್ತಿರದಲ್ಲಿರುವಾಗ ದೂರದ ಪುತ್ತೂರಿನಲ್ಲಿರುವ ವಿಭಾಗೀಯ ಅಂಚೆ ಕಚೇರಿಯ ಅವಲಂಬನೆ ಯಾಕೆ ಎನ್ನುವುದು ಇಲ್ಲಿನ ನಾಗರಿಕರ ಪ್ರಶ್ನೆ. ಪುತ್ತೂರು ವಿಭಾಗದ ವ್ಯಾಪ್ತಿಯು ಸುಳ್ಯದ ಸಂಪಾಜೆಯಿಂದ ಹೆಬ್ರಿ ವರೆಗೆ ಹರಡಿಕೊಂಡಿರುವುದರಿಂದ ವರ್ಗಾವಣೆ ಸಂದರ್ಭ ಎಲ್ಲಿ ದೂರದೂರಿಗೆ ವರ್ಗಾವಣೆಯಾಗುತ್ತೇ ವೆಯೋ ಎಂಬ ಆತಂಕ ನೌಕರರದ್ದು. 

Advertisement

ಈಗ ಪುತ್ತೂರು ಡಿವಿಜನಲ್‌ನಿಂದ ಕಾರ್ಕಳವನ್ನು ಬೇರ್ಪಡಿಸಿ ಉಡುಪಿ ಡಿವಿಜನ್‌ಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ವಿಚಾರ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

ಎಸ್‌ಎಸ್‌ಪಿ ಹುದ್ದೆ ತಪ್ಪುವ ಭೀತಿ
ಪುತ್ತೂರು ವಿಭಾಗೀಯವು ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಕಾರ್ಕಳ ತಾಲೂಕುಗಳನ್ನು ಹೊಂದಿರುವ ಕಾರಣ ಎಸ್‌ಎಸ್‌ಪಿ (ಸೀನಿಯರ್‌ ಸೂಪರಿಂಟೆಂಡೆಂಟ್‌ ಪೋಸ್ಟ್‌ ಆಫೀಸ್‌) ದರ್ಜೆ ಹುದ್ದೆ ಹೊಂದಿದೆ. 

ಕಾರ್ಕಳ ಕಳಚಿಕೊಂಡಲ್ಲಿ ಎಸ್‌ಪಿ ಹುದ್ದೆ ಮಾತ್ರ ಅಲ್ಲಿರಲಿದೆ. ಹೀಗಾಗಿ ಕಾರ್ಕಳವನ್ನು ಬೇರ್ಪಡಿಸುವಲ್ಲಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಕಾರ್ಕಳವು ಉಡುಪಿ ವಿಭಾಗೀಯಕ್ಕೆ ಸೇರ್ಪಡೆಯಾದಲ್ಲಿ ಉಡುಪಿಯ ಎಸ್‌ಪಿ ಹುದ್ದೆ ಎಸ್‌ಎಸ್‌ಪಿ ಆಗಿ ಭಡ್ತಿಗೊಳ್ಳಲಿದೆ ಎನ್ನಲಾಗುತ್ತಿದೆ.

ಪ್ರಧಾನಿಗೂ ಪತ್ರ
ಕಾರ್ಕಳ ಅಂಚೆ ಕಚೇರಿಗಳನ್ನು ಪುತ್ತೂರು ಡಿವಿಜನಲ್‌ನಿಂದ ಬೇರ್ಪಡಿಸಿ ಉಡುಪಿಗೆ ಸೇರಿಸಬೇಕೆಂದು ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕೊನೆಗೆ ಪ್ರಧಾನಿ ಕಾರ್ಯಾಲಯಕ್ಕೂ ಈ ಸಂಬಂಧ ಪತ್ರ ಬರೆಯಲಾಗಿದೆ. ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ಆದರೆ ಮೂರು ವರುಷ ಸಂದರೂ ಉದ್ದೇಶ ಕಾರ್ಯಗತಗೊಂಡಿಲ್ಲ.

ಪುತ್ತೂರು ಬದಲಾಗಿ ಉಡುಪಿ ಡಿವಿಜನಲ್‌ ಕಚೇರಿಗೆ ಕಾರ್ಕಳ ಉಪವಿಭಾಗೀಯ ಕಚೇರಿಯನ್ನು ವರ್ಗಾಯಿಸುವ ನಿಟ್ಟಿನಲ್ಲಿ  ಪ್ರಯತ್ನ ಸಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಪ್ರಕ್ರಿಯೆ ಚಾಲ್ತಿಯಲ್ಲಿದೆ.
– ಶೋಭಾ ಕರಂದ್ಲಾಜೆ, 
ಸಂಸದರು, ಉಡುಪಿ-ಚಿಕ್ಕಮಗಳೂರು

ಉಪವಿಭಾಗೀಯ ಕಚೇರಿಗಳು ಆಯಾಯ ಜಿಲ್ಲೆಯ ಪರಿಮಿತಿಯಲ್ಲೇ ಇರಬೇಕು. ಇದರಿಂದ ಆಡಳಿತಾತ್ಮಕವಾಗಿಯೂ ಸಹಕಾರಿಯಾಗುವುದು. ಕಾರ್ಕಳವನ್ನು ಉಡುಪಿ ವಿಭಾಗೀಯ ಕಚೇರಿಗೆ ಸೇರಿಸುವ ನಿಟ್ಟಿನಲ್ಲಿ ದಿಲ್ಲಿಯ ಪ್ರಧಾನ ಕಚೇರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ.
– ರಾಜೇಂದ್ರ ಕುಮಾರ್‌ ಶಿರ್ತಾಡಿ, ಪೋಸ್ಟ್‌ ಮಾಸ್ಟರ್‌ ಜನರಲ್‌, ಬೆಂಗಳೂರು

– ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next