Advertisement

ಹಳೆಗನ್ನಡ, ಕಾವ್ಯದ ಕಡೆಗಣನೆ ವಿಪರ್ಯಾಸ: ಡಾ. ಸಿದ್ದಲಿಂಗಯ್ಯ

11:45 AM Oct 04, 2017 | |

ಬೆಂಗಳೂರು: ಪ್ರಾಚೀನ ಕಾವ್ಯ ಹಾಗೂ ಹಳೆಗನ್ನಡವನ್ನು ವಿದ್ವಾಂಸರು, ಪ್ರಾಧ್ಯಾಪಕರು ಕಡೆಗಣಿಸುತ್ತಿರುವುದು ವಿಪರ್ಯಾಸ ಎಂದು ಹಿರಿಯ ಕವಿ, ನಾಡೋಜ ಡಾ.ಸಿದ್ದಲಿಂಗಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ವಿವಿ ಕನ್ನಡ ಅಧ್ಯಾಪಕರ ಒಕ್ಕೂಟ ಸಹಯೋಗದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ನಡೆದ “ಮಹಾಕವಿ ಪಂಪ ನಿನ್ನೆ-ಇಂದು-ನಾಳೆ’ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರಾಚೀನ ಕಾವ್ಯದ ಕುರಿತು ಅಧ್ಯಯನಗಳು ನಡೆಯಬೇಕು. ಕುಮಾರವ್ಯಾಸ, ಹರಿಹರ, ಲಕ್ಷ್ಮೀಶ, ಪೊನ್ನ, ರನ್ನ, ರಾಘವಾಂಕರ ಕಾವ್ಯಗಳ ಕುರಿತು ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ಹಳೆಗನ್ನಡದ ಸಾಹಿತ್ಯದ ಮಹತ್ವವನ್ನು ಅಧ್ಯಾಪಕರು, ವಿದ್ಯಾರ್ಥಿಗಳು ಅರಿಯುವಂತೆ ವಿದ್ವಾಂಸರು ಮಾಡುವ ಅಗತ್ಯವಿದೆ ಎಂದು ಹೇಳಿದರು.

ಪಂಪ ರಚಿಸಿದ ಕಾವ್ಯದ ಚರ್ಚೆ ಮತ್ತು ಪ್ರಸ್ತುತತೆಗೆ ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಲು ವಿಫ‌ುಲವಾದ ಅವಕಾಶವಿದ್ದು. ಈ ಬಗ್ಗೆ ಕನ್ನಡ ವಿದ್ವಾಂಸರು ಆಸಕ್ತಿ ವಹಿಸಬೇಕಾಗಿದೆ. ಮನುಜಕುಲಂ ತಾನೊಂದೆ ವಲಂ ಎಂದು ಸಾರಿದ ಪಂಪ ಮತ್ತು ಕುವೆಂಪು ಅವರ ವಿಶ್ವಮಾನವ ಸಂದೇಶ ಸಮಾಜಕ್ಕೆ ದಾರಿದೀಪವಾಗಬೇಕು ಎಂದು ಹೇಳಿದರು. 

ಕನ್ನಡ ಭಾಷೆಗೆ ತೂಕ, ಚೆಲುವು ಮತ್ತು ಶಕ್ತಿಯನ್ನು ತಂದುಕೊಟ್ಟ ಪಂಪ ಕನ್ನಡ ಮೇರು ಕವಿ ಎಂದ ಅವರು,  ಕನ್ನಡ ಭಾಷೆ ಐಚ್ಚಿಕವಾಗಿರುವ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ವಾರಕ್ಕೆ ಒಮ್ಮೆಯಾದರೂ ಗಮಕಿಗಳಿಂದ ಪ್ರಾಚೀನ ಕಾವ್ಯವಾಚನ ಮಾಡಿಸುವ ವ್ಯವಸ್ಥೆಯಾಗಬೇಕು. ಇದರಿಂದ ಗುರುಗಳು ಮತ್ತು ವಿದ್ಯಾರ್ಥಿಗಳಲ್ಲೂ ಪ್ರಾಚೀನ ಕಾವ್ಯದ ಬಗ್ಗೆ ಉತ್ಸಾಹ, ಕುತೂಹಲ ಹೆಚ್ಚುತ್ತದೆ.

Advertisement

ಅದಕ್ಕಿಂತ ಮುಖ್ಯವಾಗಿ ಇವರಿಬ್ಬರ ನಡುವೆ ಭಾವನಾತ್ಮಕ ಬಾಂಧವ್ಯ ಬೆಸೆಯುತ್ತದೆ ಎಂದು ಅಭಿಪ್ರಾಯಪಟ್ಟರು. ಹಿರಿಯ ಲೇಖಕಿ ಡಾ. ಕಮಲಾ ಹಂಪನಾ ಮಾತನಾಡಿ, ಪಂಪನ ಕಾವ್ಯವನ್ನು ಬಿಟ್ಟು ಕನ್ನಡ ಸಾಹಿತ್ಯವನ್ನು ಓದಲು ಸಾಧ್ಯವೇ ಇಲ್ಲ. ಪಂಪ ಇವತ್ತಿಗೂ ಜೀವಂತ ಕಾವ್ಯಶಕ್ತಿ ಎಂದು ಅಭಿಪ್ರಾಯಪಟ್ಟರು.  ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಗೌರವಾಧ್ಯಕ್ಷ ಎಂ. ತಿಮ್ಮಯ್ಯ ವಹಿಸಿದ್ದರು.

ದಲಿತ ಯುವಕರು ರಮ್‌ ಕುಡಿಯಬೇಕೆಂದರೆ ಸೇನೆ ಸೇರಬೇಕೆಂಬ ಕೇಂದ್ರ ಸಚಿವ ರಾಮದಾಸ್‌ ಅಠವಳೆ ಅವರ ಹೇಳಿಕೆ ದುರಾದೃಷ್ಟಕರ. ದಲಿತರು ಗುಣಮಟ್ಟದ ಮದ್ಯ ಸೇವಿಸಬೇಕು ಎಂಬ ಹೇಳಿಕೆ ಒಳ್ಳೆಯ ಉದ್ದೇಶದ್ದಾದರೂ, ಮದ್ಯದ ಮತ್ತಿನಲ್ಲಿ ಶತ್ರುಗಳಿಗೆ ಬದಲು ತಾವೇ ಗುಂಡು ಹಾರಿಸಿಕೊಂಡು ಪ್ರಾಣಕಳೆದುಕೊಳ್ಳಲೂಬಹುದು!
-ಡಾ.ಸಿದ್ದಲಿಂಗಯ್ಯ, ಹಿರಿಯ ಕವಿ

Advertisement

Udayavani is now on Telegram. Click here to join our channel and stay updated with the latest news.

Next