Advertisement

ನೋವಿನಲ್ಲೂ ಪಕ್ಷದ ಗೆಲುವಿಗೆ ಶ್ರಮಿಸುವೆ

06:02 PM Apr 01, 2019 | Team Udayavani |
ರಾಯಚೂರು: ನನಗೆ ಲೋಕಸಭೆ ಟಿಕೆಟ್‌ ಕೈ ತಪ್ಪಲು ಜಿಲ್ಲೆಯ ಕೆಲ ನಾಯಕರ ಪ್ರಭಾವ ಹಾಗೂ ಲಾಬಿಯೇ ಕಾರಣವಾಗಿದೆ. ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರೇ ಬೆಂಬಲಿಸಲಿಲ್ಲ. ಇದರಿಂದ ಸಾಕಷ್ಟು ನೋವಾಗಿದ್ದು, ಆ ನೋವಿನಲ್ಲಿಯೇ ಪಕ್ಷದ ಏಳಿಗೆಗಾಗಿ ಶ್ರಮಿಸುವೆ ಎಂದು ಮಾಜಿ ಶಾಸಕ ತಿಪ್ಪರಾಜ ಹವಾಲ್ದಾರ್‌ ತಿಳಿಸಿದರು.
ನಗರದ ತಮ್ಮ ಸ್ವಗೃಹದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ದಿನವೇ ನಾನು ಲೋಕಸಭೆ ಚುನಾವಣೆ ಅಭ್ಯರ್ಥಿ ಎಂದು ಹೇಳಿಕೊಂಡಿದ್ದೆ. ಆಗಿನಿಂದಲೇ ಸಾಕಷ್ಟು ತಯಾರಿ ನಡೆಸಿದ್ದೆ. ರಾಜ್ಯದ ನಾಯಕರು ಕೂಡ ಅಂತಿಮವಾಗಿ ಎರಡು ಹೆಸರು ಮಾತ್ರ ಶಿಫಾರಸು ಮಾಡಿದ್ದರು. ಆದರೆ, ಕೊನೆ ಘಳಿಗೆಯಲ್ಲಿ ಟಿಕೆಟ್‌ ಕೈತಪ್ಪಿರುವುದು ನನಗೆ ಸೇರಿದಂತೆ ನನ್ನ ಬೆಂಬಲಿಗರಿಗೆ ಸಾಕಷ್ಟು ನೋವು ತಂದಿದೆ ಎಂದರು.
ಆದರೆ, ನನಗೆ ಟಿಕೆಟ್‌ ನೀಡುವಂತೆ ಜಿಲ್ಲೆಯ ಎಲ್ಲ ಬಿಜೆಪಿ ನಾಯಕರು ಬೆಂಬಲಿಸಿದರೆ, ನನ್ನನ್ನು ರಾಜಕೀಯವಾಗಿ ಬೆಳೆಸಿದ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರೇ ಬೆಂಬಲಿಸಿಲ್ಲ. ಈ ಬಗ್ಗೆ ಸಾಕಷ್ಟು ನೋವಿದೆ. ಆದರೆ, ದೇಶ ಮೊದಲು ಪಕ್ಷ ನಂತರ ಎಂಬ ಸಿದ್ಧಾಂತಕ್ಕೆ ಬದ್ಧನಾಗಿ, ನೋವಿನಲ್ಲೂ ನಾನು ಪಕ್ಷಕ್ಕಾಗಿ ಶ್ರಮಿಸುವೆ ಎಂದರು.
ಅಂತಿಮ ಕ್ಷಣದವರೆಗೆ ನನ್ನ ಹೆಸರಿತ್ತು. ಅಂತಿಮವಾಗಿ ಅಮರೇಶ್ವರ ನಾಯಕ ಅವರಿಗೆ ಟಿಕೆಟ್‌ ನೀಡಿದೆ. ಪಕ್ಷ ಯಾವ ಮಾನದಂಡ ಆಧರಿಸಿ ಟಿಕೆಟ್‌ ನೀಡಿದೆಯೋ ಗೊತ್ತಿಲ್ಲ. ಆದರೆ, ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕರ ಗೆಲುವಿಗೆ ಶ್ರಮಿಸಲಾಗುವುದು. ನರೇಂದ್ರ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿಸಬೇಕು ಎಂಬ ಉದ್ದೇಶದಿಂದ ಪಕ್ಷದ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದರು.
ನಗರ ಶಾಸಕ ಡಾ| ಶಿವರಾಜ ಪಾಟೀಲ ಮಾತನಾಡಿ, ಅಭ್ಯರ್ಥಿ ಆಯ್ಕೆ ಪಕ್ಷದ ಹೈಕಮಾಂಡ್‌ ನಿರ್ಧಾರ. ಅದಕ್ಕೆ ನಾವೆಲ್ಲ ಬದ್ಧರಾಗಿರಬೇಕಷ್ಟೆ. ಯಾವ ಮಾನದಂಡಗಳನ್ನು ಆಧರಿಸಿ ಟಿಕೆಟ್‌ ನೀಡಿದ್ದಾರೆಯೋ ನಮಗೆ ತಿಳಿಯದು. ಆದರೆ, ನೋವಿನಲ್ಲಿರುವ ತಿಪ್ಪರಾಜ ಅವರ ಜತೆ ನಾವಿದ್ದೇವೆ. ಮುಂಬರುವ ದಿನಗಳಲ್ಲಿ ಅವರಿಗೆ ಅನ್ಯಾಯವಾಗದಿರಲು ಒಟ್ಟಾಗಿ ಶ್ರಮಿಸುತ್ತೇವೆ ಎಂದರು.
ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ ಜಾಡಲದಿನ್ನಿ ಮಾತನಾಡಿ, ಇಬ್ಬರು ಸಮರ್ಥ ಅಭ್ಯರ್ಥಿಗಳ ಹೆಸರನ್ನೇ ಶಿಫಾರಸು ಮಾಡಲಾಗಿತ್ತು. ಆದರೆ, ಈಗ ಟಿಕೆಟ್‌ ನೀಡಿದವರು ಅಸಮರ್ಥರು ಎನ್ನಲಿಕೆ ಬರುವುದಿಲ್ಲ. ಆದರೆ, ಟಿಕೆಟ್‌ ತಪ್ಪಿದ ನೋವಿನಲ್ಲಿರುವ ತಿಪ್ಪರಾಜ ಹವಾಲ್ದಾರ್‌ ಜತೆ ಜಿಲ್ಲಾ ಘಟಕ ಇದೆ. ಮುಂದೆ ಅವರ ನಿರ್ಧಾರಗಳಿಗೆ ನಾವು ಬೆಂಬಲಿಸುವುದಾಗಿ ತಿಳಿಸಿದರು. ಹಿರಿಯ ಮುಖಂಡರಾದ
ಎನ್‌.ಶಂಕರಪ್ಪ ವಕೀಲ, ಆರ್‌.ತಿಮ್ಮಯ್ಯ, ಬಸನಗೌಡ ಬ್ಯಾಗವಾಟ್‌ ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next