ದಾವಣಗೆರೆ: ಹೊಸ ಬಡಾವಣೆ ನಿರ್ಮಾಣದ ವೇಳೆ ಇಂಗುಗುಂಡಿ, ಮರ ಬೆಳೆಸುವುದನ್ನು ಕಡ್ಡಾಯದ ಜೊತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪರಿಸರ ಸಂರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಸಲ್ಲಿಕೆಗೂ ಮುನ್ನ ಮಾತನಾಡಿದ ವೇದಿಕೆಯ ಅಧ್ಯಕ್ಷ ಗಿರೀಶ್ ಎಸ್. ದೇವರಮನಿ, ದಿನೇ ದಿನೇ ಮರ ಗಿಡ ಕಾಣೆಯಾಗುತ್ತಿವೆ. ಪರಿಸರದ ಮೇಲೆ ಸಂಪೂರ್ಣ ಅವಲಂಬಿತವಾದ ಪ್ರಾಣಿ ಪಕ್ಷಿ ಹಾಗೂ ಜನರು ಸಹ ದಿನನಿತ್ಯ ಬಿಸಿಲ ಧಗೆ, ನೀರಿಲ್ಲದೆ ಪರದಾಡುವಂತಾಗಿದೆ.
ಜಿಲ್ಲೆಯ ಹಲವು ಕೆರೆಗಳು ಒಣಗಿ ಹೋಗಿವೆ. ಅಂತರ್ಜಲ ಕುಸಿದು ಕುಡಿಯುವ ನೀರಿಗೆ ಸಾವಿರಾರು ಅಡಿ ಆಳ ಬೋರ್ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಮುಂದಿನ ದಿನ ನೆನಸಿಕೊಂಡರೆ ಆತಂಕವಾಗುತ್ತಿದೆ ಎಂದರು. ಪಾಲಿಕೆ ಹಾಗೂ ಸ್ಥಳಿಯ ಸಂಸ್ಥೆಗಳಲ್ಲಿ ವಾರ್ಡ್ ಮಟ್ಟಗಳಲ್ಲಿ ಹಸರೀಕರಣ ಕಾರ್ಯಕ್ರಮ ರೂಪಿಸಿದೆ.
ಖಾಸಗಿ, ದೂಡಾದಿಂದ ಬಡಾವಣೆ ನಿರ್ಮಾಣದ ವೇಳೆ ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು. ಇಂಗುಗುಂಡಿಗಳ ನಿರ್ಮಾಣ ಕಡ್ಡಾಯಗೊಳಿಸಬೇಕು. ಉದ್ಯಾನವನಗಳ ನಿರ್ವಹಣೆಯನ್ನು ಪರಿಸರ ಆಸಕ್ತ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಲು ಸೂಚಿಸಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲೆಯಾದ್ಯಂತ ಇಂಗುಗುಂಡಿಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿ, ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲು ಸೂಚಿಸಬೇಕು. ಬೆಂಗಳೂರು ಬಿಬಿಎಂಪಿ ಮಾದರಿಯಲ್ಲಿ ದಾವಣಗೆರೆ ಮಹಾನಗರಪಾಲಿಕೆಯಲ್ಲಿ ಅರಣ್ಯ ಘಟಕ ಆರಂಭಿಸಲು ಸೂಚಿಸಬೇಕು ಎಂದು ಅವರು ಹೇಳಿದರು.
ಕರುನಾಡ ಕನ್ನಡ ಸೇನೆಯ ಕೆ.ಟಿ. ಗೋಪಾಲಗೌಡ, ಪ್ರಸನ್ನ ಬೆಳಕೇರಿ, ಪವನ್ ರೇವಣಕರ್, ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್, ಬಿ.ಎಸ್. ರಾಘವೇಂದ್ರ, ಆರ್.ಬಿ. ಹನುಮಂತಪ್ಪ, ಬಸವರಾಜು, ಎಂ.ಪಿ. ಜಯಕುಮಾರ್, ಪಳನಿಸ್ವಾಮಿ, ತ್ಯಾಗರಾಜ್, ಕೋಟ್ರೇಶ್ ಗೌಡ ಈ ಸಂದರ್ಭದಲ್ಲಿದ್ದರು.