ಅಷ್ಟು ಸಮಯದ ವರೆಗೆ ಸುಮ್ಮನೆ ಗುಮ್ಮನಂತೆ ಕೂತಿದ್ದ ಮಳೆ ಸರಿಯಾಗಿ ನಾಲ್ಕು ಮೂವತ್ತರ ಆಸುಪಾಸಿನಿಂದ “ಧೋ’ ಎಂದು ಸುರಿಯಲಾರಂಭಿಸಿತ್ತು. ಸಾಮಾನ್ಯವಾಗಿ ಅದು ಶಾಲೆಯ ಕೊನೆಯ ಅವಧಿ ಸಮಾಪ್ತಿಯಾಗಿ ಗಂಟೆ ಬಾರಿಸುವ ಸಮಯ. ಬಣ್ಣಬಣ್ಣದ ಕೊಡೆಗಳನ್ನು ಬಿಡಿಸಿ ಗುಂಪುಗುಂಪಾಗಿ ಚಿಂತೆಗಳೇ ಇಲ್ಲದಂತೆ ಅದೆಂಥದ್ದೋ ಕಥೆಗಳನ್ನು ಹರಟುತ್ತ ಮನೆಯ ಹಾದಿಯಲ್ಲಿ ಅದೆಷ್ಟೋ ದೂರ ನಡೆದು ಮನೆ ತಲುಪುವಷ್ಟರಲ್ಲಿ ಮೈಯೆಲ್ಲ ಚಂಡಿಯಾಗಿ, ಕಾಲೆಲ್ಲ ಕೆಸರಾಗುತ್ತಿದ್ದ ಕಾಲದ ಮಲೆನಾಡಿನ ಮಳೆಯನ್ನು ನೆನಪಿಸಿಕೊಳ್ಳುವುದೇ ನನಗೊಂದು ಥ್ರಿಲ್ಲಿಂಗ್ ಸಂಗತಿ.
ಮಳೆ ಆರಂಭವಾದೊಡನೆ “ಅಯ್ಯೋ ಶಾಲೆ ಬಿಡುವಾಗಲೇ ಮಳೆ ಬರಬೇಕಿತ್ತೇ? ಮೈಯೆಲ್ಲ ನೆನೆಸಿಕೊಂಡು ಹೋಗಬೇಕು’ ಎಂದು ಮೇಲ್ನೋಟಕ್ಕೆ ಗೊಣಗಿಕೊಳ್ಳುತ್ತ ಮನೆಕಡೆ ಹೆಜ್ಜೆ ಹಾಕುತ್ತಿದ್ದೆವು. ಆದರೆ, ಮನಸ್ಸಿನಲ್ಲಿರುವ ಗುಟ್ಟೇ ಬೇರೆ! ಶಾಸ್ತ್ರಕ್ಕೆ ಕೊಡೆ ಬಿಚ್ಚಿ ಅರ್ಧಂಬರ್ಧ ನೆನೆಯುತ್ತ, ಕೊಡೆಯನ್ನು ತಿರುಗಿಸುತ್ತ, ಗಾಳಿ ಬಂದಾಗ ಆಂಟೆನವಾಗುವ ಕೊಡೆಯನ್ನು ಸರಿಪಡಿಸುತ್ತ ಮನೆಗೆ ಹೋಗುವ ವಿಷಯವನ್ನು ನೆನೆ-ನೆನೆದು ಮನಸ್ಸು ಹಿರಿಹಿರಿ ಹಿಗ್ಗಿದ್ದುಂಟು. ಜೀವನವೇ ಹಾಗೆ. ಎದುರಿಗೆ ತೋರ್ಪಡಿ ಸುವುದು ಒಂದು ಮನಸ್ಸಿನಲ್ಲಿ ಅಪೇಕ್ಷಿಸುವುದು ಇನ್ನೊಂದು! ನಮ್ಮನ್ನು ನಾವು ಸಮಾಜದ ನಿಯಮಾವಳಿಗಳಿಗೆ ಬಲವಂತವಾಗಿ ಒಗ್ಗಿಸಿಕೊಳ್ಳುತ್ತ ನಮ್ಮ ಅಭಿವ್ಯಕ್ತಿ ಸ್ವಾತಂತ್ರವನ್ನೇ ಕಳೆದುಕೊಳ್ಳುತ್ತೇವೆ ಕೆಲವೊಮ್ಮೆ. ಅದೇನೇ ಇರಲಿ, ಅಂದಿನ ಗ್ರಾಮೀಣ ಪ್ರಾಂತ್ಯದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದ ಮಕ್ಕಳ ಮಳೆಗಾಲ ಸಾಮಾನ್ಯವಾಗಿ ಹೀಗೆಯೇ ಸಾಗುತ್ತಿತ್ತು. ಮಳೆಯಲ್ಲಿ ತೊಯ್ದು ಮನೆಗ ಬಂದಾಗ ಮೊದಲಿಗೆ ಅಮ್ಮನ ಬೈಗುಳವನ್ನು ಕೇಳಿ ಮತ್ತೆ ಅಮ್ಮನಿಂದ ತಲೆ ಒರೆಸಿಕೊಳ್ಳುವಾಗ ಅನುಭವಿಸುವ ಆನಂದ ಮತ್ತೆ ಮರಳಿ ಬಾರವು. ಇವು ಕೀಟಲೆಗಳೆನಿಸಿದರೂ ಕೂಡ ನಿಸರ್ಗದೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವ ವಿಧಾನವೂ ಇದೇ ಆಗಿರುತ್ತಿತ್ತು.
ಹಳ್ಳಿಗಳಲ್ಲಿ ಮಳೆಗಾಲದ ತಯಾರಿ ಬೇಸಿಗೆಯಲ್ಲಿಯೇ ನಡೆದಿರುತ್ತದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಹೊಗೆಕೋಣೆಯಿಂದ ಒಂದೊಂದೇ ಕಾವಲಿಗೆ ಬಂದು ನಂತರ ತಟ್ಟೆಗೆ ಬರುವಾಗ ಪಟ್ಟ ಶ್ರಮ ಸಾರ್ಥಕವಾಯಿತೆಂಬ ಭಾವ ಅಮ್ಮನ ಮುಖದಲ್ಲಾದರೆ, ಮಳೆಗಾಲ ಸಾರ್ಥಕವಾಯಿತೆಂಬ ಖುಷಿ ನಮ್ಮ ಮನದಲ್ಲಿ. ಬಿಸಿಯಾದ ಕರಿದ ಹಲಸಿನ ಕಾಯಿ ಹಪ್ಪಳ, ಅವಲಕ್ಕಿ ಸಂಡಿಗೆ, ಸಾಬಕ್ಕಿ ಸಂಡಿಗೆ ಇತ್ಯಾದಿ ಇತ್ಯಾದಿಗಳ ರೂಪದಲ್ಲಿ ನಮ್ಮ ಸೇವೆಗೆ ಸಿದ್ಧವಾಗುವ ಹಲವು ತಿಂಡಿತಿನಿಸುಗಳು ಮಳೆಗಾಲವನ್ನು ಇನ್ನೂ ಸೊಗಸಾಗಿಸುತ್ತಿತ್ತು.
ಅಂದಿನ ಬಾಲ್ಯವೇ ಹಾಗಿತ್ತು. ಮಣಭಾರದ ಬ್ಯಾಗನ್ನು ಹೊತ್ತುಕೊಡು ಕಿಲೋಮೀಟರುಗಟ್ಟಲೆ ನಡೆದುಕೊಂಡೇ ಹೋದರೂ ಆಗದ ದಣಿವು. ಅದೇ ಒಂದು ನಲಿವು, ಒಲವು ಎಲ್ಲಾ. ವಾಹನಗಳಲ್ಲಿ ಹೋಗುವ ಇಂದಿನ ಮಕ್ಕಳನ್ನು ಕಂಡಾಗ ಮುಗ್ಧ ಬಾಲ್ಯವನ್ನು ಇಂದಿನ ಮಕ್ಕಳು ಕಳೆದುಕೊಳ್ಳುತ್ತಿದ್ದಾವೆಯೇ ಎಂಬ ಯಕ್ಷಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡುತ್ತಿರುತ್ತದೆ. ಇದಕ್ಕೆ ಸ್ಪಷ್ಟ ಉತ್ತರ ಇನ್ನೂ ಲಭಿಸಿಲ್ಲ! ಅಂದಿನ ಶಾಲೆಗಳು ನಮ್ಮನ್ನು ಸಾಮಾಜೀಕರಣಗೊಳಿಸುವ ಕೇಂದ್ರಗಳಂತಿದ್ದವು. ಆದರೆ, ಇಂದಿನ ಶಿಕ್ಷಣಕೇಂದ್ರಗಳು ಕೇವಲ ಯಾಂತ್ರಿಕತೆಯನ್ನು ಕಲಿಸುವಂಥದ್ದು. ಈ ಬದಲಾಗುವ ವ್ಯವಸ್ಥೆಗಳಿಗೆ, ಹೆಚ್ಚುತ್ತಿರುವ ಸ್ಪರ್ಧೆಗಳಿಗೆ ಈ ಬಗೆಯ ವಿಧಾನ ಅನಿವಾರ್ಯವೂ ಹೌದು. ಶಿಕ್ಷಣದಲ್ಲಿನ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ನಮ್ಮ ಅಗತ್ಯತೆ ಮತ್ತು ಅನಿವಾರ್ಯತೆಯೂ ಹೌದು. ಆದರೆ ಮಕ್ಕಳು ಮನೆಯಲ್ಲಿರುವಷ್ಟು ಹೊತ್ತು ಅವರು ತಮ್ಮ ಬಾಲ್ಯದ ಅನುಭವದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಹಿರಿಯರಾದ ನಮ್ಮ ಕರ್ತವ್ಯವೆನಿಸುತ್ತದೆ. ಸಾಂಪ್ರದಾಯಿಕ ಆಟಗಳು ಕಣ್ಮರೆಯಾಗಿರುವ ಈ ಕಾಲದಲ್ಲಿ ಮಕ್ಕಳು ಶಾಲೆಯಿಂದ ಬಂದೊಡನೆ ಮೊಬೈಲನ್ನೋ, ವೀಡಿಯೋ ಗೇಮ್ ಅನ್ನೋ ಹಿಡಿದುಕೊಂಡು ತಾಸುಗಟ್ಟಲೆ ಆಟವಾಡುತ್ತ ತಮ್ಮ ಮಾನಸಿಕ ಆರೋಗ್ಯವನ್ನು ಹಾಳುಗೆಡವಿಕೊಳ್ಳುವುದಷ್ಟೇ ಅಲ್ಲದೆ, ಜಂಕ್‌ಫುಡ್ ಗಳನ್ನು ಸೇವಿಸುತ್ತ ತಮ್ಮ ದೈಹಿಕ ಆರೋಗ್ಯದಲ್ಲಿಯೂ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಕಾಣುತ್ತೇವೆ.
ವಯಸ್ಸಾದಂತೆ ಅಂದಿನ ಬಾಲ್ಯವನ್ನು ಮತ್ತೂಮ್ಮೆ ಜೀವಿಸೋಣ ಎಂಬ ಹಂಬಲ ಹೆಚ್ಚುತ್ತಲೇ ಇರುತ್ತದೆ. ಆದರೆ ಕಾಲ ಮರಳಿ ಬಾರದು. ಬಾಲ್ಯದ ಮುಗ್ಧತೆಯನ್ನು ಕಾಪಾಡಿಕೊಳ್ಳುವಂತೆ ಮಕ್ಕಳನ್ನು ಸಿದ್ಧಗೊಳಿಸಬೇಕಿದೆ. ಪ್ರಾಕೃತಿಕ ಬದಲಾವಣೆಗಳೊಂದಿಗೆ ಮನುಷ್ಯ ಕಲಿಯುವಂತಹ ಅನೇಕ ಅಂಶಗಳನ್ನು ನಮ್ಮ ಮಕ್ಕಳಿಗೆ ಮನವರಿಕೆ ಮಾಡಿಕೊಡಬಹುದು.
ಪ್ರಭಾ ಭಟ್ ಹೊಸ್ಮನೆ