ಕ್ರೈಸ್ಟ್‌ಚರ್ಚ್: ನ್ಯೂಜಿಲ್ಯಾಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಬೌಲರ್‌ಗಳ ತಿರುಗೇಟಿನಿಂದ ಶ್ರೀಲಂಕಾ ಮೇಲುಗೈ ಸೂಚನೆ ನೀಡಿದೆ. ಶ್ರೀಲಂಕಾ 335ಕ್ಕೆ ಆಲೌಟ್ ಆಗಿದ್ದು, ನ್ಯೂಜಿಲ್ಯಾಂಡ್ 5ಕ್ಕೆ 162 ರನ್ ಗಳಿಸಿ ದ್ವಿತೀಯ ದಿನದಾಟ ಮುಗಿಸಿದೆ.
ನ್ಯೂಜಿಲ್ಯಾಂಡ್‌ಗೆ ಟಾಮ್ ಲ್ಯಾಥಂ ಮತ್ತು ಡೇವನ್ ಕಾನ್ವೇ ನಿಧಾನ ಗತಿಯ, ಆದರೆ ಉತ್ತಮ ಆರಂಭವನ್ನೇ ಒದಗಿಸಿದ್ದರು. 28.4 ಓವರ್‌ಗಳಿಂದ 67 ರನ್ ಒಟ್ಟುಗೂಡಿಸಿದರು. ಅಸಿತ ಫೆರ್ನಾಂಡೊ ಈ ಜೋಡಿಯನ್ನು ಬೇರ್ಪಡಿಸಿದ ಬಳಿಕ ಕಿವೀಸ್ ಕುಸಿತ ಕಾಣತೊಡಗಿತು. 95 ರನ್ ಅಂತರದಲ್ಲಿ 5 ವಿಕೆಟ್ ಉರುಳಿತು. ಆತಿಥೇಯ ತಂಡವಿನ್ನೂ 193 ರನ್ ಹಿನ್ನಡೆಯಲ್ಲಿದೆ.
ಲ್ಯಾಥಂ 67, ಕಾನ್ವೇ 30 ರನ್ ಮಾಡಿದರು. ಆದರೆ ಕೇನ್ ವಿಲಿಯಮ್ಸನ್ (1), ಹೆನ್ರಿ ನಿಕೋಲ್ಸ್ (2), ಟಾಮ್ ಬ್ಲಿಂಡೆಲ್(7) ವಿಫಲರಾದರು. ಡ್ಯಾರಿಲ್ ಮಿಚೆಲ್(40) ಮತ್ತು ಮೈಕಲ್ ಬ್ರೇಸ್‌ವೆಲ್(9) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಲಂಕಾ ಪರ ಅಸಿತ ಫೆರ್ನಾಂಡೊ ಮತ್ತು ಲಹಿರು ಕುಮಾರ ತಲಾ 2 ವಿಕೆಟ್ ಕೆಡವಿದರು.
ಶ್ರೀಲಂಕಾ 6 ವಿಕೆಟಿಗೆ 305 ರನ್ ಗಳಿಸಿದಲ್ಲಿಂದ ದ್ವಿತೀಯ ದಿನದಾಟ ಮುಂದುವರಿಸಿತ್ತು. ಟಿಮ್ ಸೌಥಿ(64ಕ್ಕೆ 5) ಮತ್ತು ಮ್ಯಾಟ್ ಹೆನ್ರಿ(80ಕ್ಕೆ 4) ನ್ಯೂಜಿಲ್ಯಾಂಡ್‌ನ ಯಶಸ್ವಿ ಬೌಲರ್‌ಗಳು.