Advertisement

ಜಿಲ್ಲೆಯಲ್ಲಿ  ವಾರದೊಳಗೆ  ಎಲ್ಲರಿಗೂ ಪುಸ್ತಕ ವಿತರಣೆ  ನಿರೀಕ್ಷೆ

03:35 PM May 31, 2017 | |

ಮಹಾನಗರ: ಒಂದರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸರಕಾರವೇ ಪಠ್ಯಪುಸ್ತಕಗಳನ್ನು ಮುದ್ರಿಸಿ ವಿತರಿಸುತ್ತಿದ್ದು, 2017-18ನೇ ಸಾಲಿಗೆ ಜಿಲ್ಲೆಯಿಂದ 21.75 ಲಕ್ಷ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿದ್ದು, ಶೇ. 50ರಷ್ಟು ಪುಸ್ತಕಗಳು ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕೈ ಸೇರಿದೆ. 

Advertisement

ಪುಸ್ತಕಗಳನ್ನು ಸರಕಾರದ ಅಂಗಸಂಸ್ಥೆ ಕರ್ನಾಟಕ ಪಠ್ಯಪುಸ್ತಕ ಸಂಘ ಮುದ್ರಿಸುತ್ತದೆ. ಸಂಘಕ್ಕೆ ಪ್ರತಿ ಜಿಲ್ಲೆಯ ಡಿಡಿಪಿಐ ಅವರ ಮೂಲಕ ಬೇಡಿಕೆ(ಇಂಡೆಂಟ್‌) ಸಲ್ಲಿಸಿದ ಬಳಿಕ  ಪಠ್ಯಪುಸ್ತಕಗಳನ್ನು ಮುದ್ರಿಸಲಾಗುತ್ತದೆ. ಇಲ್ಲಿ ಉಚಿತ ಮತ್ತು ಮಾರಾಟ ಎಂಬ ಎರಡು ವಿಭಾಗಗಳಲ್ಲಿ  ಪುಸ್ತಕಗಳನ್ನು ಮುದ್ರಿಸಲಾಗುತ್ತಿದೆ. 

ಜಿಲ್ಲೆಯ ಬೇಡಿಕೆ
2017-18ನೇ ಸಾಲಿನ ಪಠ್ಯಪುಸ್ತಕಗಳಿಗೆ ಹಿಂದಿನ  ವರ್ಷದ ವಿದ್ಯಾರ್ಥಿಗಳ ಆಧಾರದಲ್ಲಿ ಕಳೆದ ಶೈಕ್ಷಣಿಕ ಸಾಲಿನ ಅಂತ್ಯಕ್ಕೆ  2 ತಿಂಗಳ ಮೊದಲೇ ಬೇಡಿಕೆ ಸಲ್ಲಿಸಲಾಗಿತ್ತು.  ಜಿಲ್ಲೆಯಿಂದ ಒಟ್ಟು 21,75, 689 ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದ್ದು, ಇದರಲ್ಲಿ 12,18,721 ಉಚಿತ ಹಾಗೂ 9, 56,308 ಮಾರಾಟದ  ಉದ್ದೇಶಕ್ಕಾಗಿದೆ. 

ಮಾರಾಟದವುಗಳಿಗೆ ಖಾಸಗಿ ವಿದ್ಯಾಸಂಸ್ಥೆಗಳು ತಮ್ಮ ಪುಸ್ತಕಗಳಿಗೆ ಅನುಗುಣವಾಗಿ ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಡಿಡಿ ತೆಗೆದುಕೊಳ್ಳಬೇಕು. ಬಳಿಕ ತಮ್ಮ ಬೇಡಿಕೆ ಹಾಗೂ ಡಿಡಿಯನ್ನಿಟ್ಟು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಡಿಡಿಪಿಐ ಮೂಲಕ ಬೇಡಿಕೆ ಸಲ್ಲಿಸಲಾಗುತ್ತದೆ. ಬಳಿಕ ನೇರವಾಗಿ ಬಿಇಒ ಕಚೇರಿಗೆ ಪುಸ್ತಕಗಳು ಪೂರೈಕೆಯಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
 
ಶೇ. 50 ಪೂರೈಕೆ
ಈಗಾಗಲೇ ಶೇ. 50  ಪುಸ್ತಕಗಳು ವಿದ್ಯಾರ್ಥಿಗಳಿಗೆ ತಲುಪಿದ್ದು,  ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್‌ಗಳಿಗೆ ಪ್ರತ್ಯೇಕ ಪುಸ್ತಕಗಳು ಇರುವುದರಿಂದ ಪ್ರಥಮ ಸೆಮಿಸ್ಟರ್‌ ಪುಸ್ತಕಗಳನ್ನು ಈಗಾಗಲೇ ವಿತರಿಸಲಾಗಿದೆ. ದ್ವಿತೀಯ ಸೆಮಿಸ್ಟರ್‌ ಪುಸ್ತಕಗಳು ವಾರದೊಳಗೆ ತಲುಪಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. 

12 ಭಾಷೆಗಳಲ್ಲಿ ಮುದ್ರಣ
ಕರ್ನಾಟಕ ಪಠ್ಯಪುಸ್ತಕ ಸಂಘ 12 ಭಾಷೆಗಳಲ್ಲಿ ಹಾಗೂ 7 ಮಾಧ್ಯಮಗಳಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸುತ್ತದೆ. ಪ್ರತಿ ಭಾಷೆಗಳ ಬೇಡಿಕೆಗೆ ಅನುಗುಣವಾಗಿ ಸಂಘವು ಪಠ್ಯಪುಸ್ತಕಗಳನ್ನು ಮುದ್ರಿಸುತ್ತದೆ. ಸರಕಾರಿ ಶಾಲೆಗಳ ಜತೆಗೆ ಅನುದಾನಿತ ಶಾಲೆಗಳಿಗೂ ಸಂಘವು ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದೆ. 

Advertisement

ಆನ್‌ಲೈನ್‌ನಲ್ಲಿ ಲಭ್ಯ
ಸಂಘವು ಕಳೆದ ವರ್ಷದಿಂದ ಪಠ್ಯಪುಸ್ತಕಗಳನ್ನು ಆನ್‌ಲೈನ್‌ನಲ್ಲೂ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಕೈ ಸೇರುವಾಗ ತಡವಾಗುತ್ತದೆ ಎಂಬ ಕಾರಣಕ್ಕೆ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿದೆ. ಕಳೆದ ವರ್ಷ ಅಪ್‌ಲೋಡ್‌ ಕಾರ್ಯ ತಡವಾಗಿದ್ದು, ಈ ಬಾರಿ ಈಗಾಗಲೇ ಆನ್‌ಲೈನ್‌ನಲ್ಲಿ ಸಿಗುತ್ತಿದೆ. ಹೀಗಾಗಿ ಆನ್‌ಲೈನ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಪ್ರಿಂಟ್‌ ಕಾಫಿ ತೆಗೆಯುವ ಅವಕಾಶವೂ ಇದ್ದು,  www.ktbs.kar.nic.in ನಲ್ಲಿ ಪಠ್ಯಪುಸ್ತಕಗಳು ಸಿಗುತ್ತಿದೆ. 

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next