Advertisement

ಜಿಲ್ಲೆಯಲ್ಲಿ ಹಳ್ಳ ಹಿಡಿದ ಫ‌ಸಲ್‌ ಬಿಮಾ ಯೋಜನೆ

10:07 PM Jul 19, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಲಕ್ಷಾಂತರ ಸಣ್ಣ, ಅತಿ ಸಣ್ಣ ರೈತರು ಇದ್ದರೂ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆಗೆ ಜಿಲ್ಲಾದ್ಯಂತ ಕೃಷಿ ಇಲಾಖೆ ನೋಂದಣಿಯಿಸಿರುವ ರೈತರ ಸಂಖ್ಯೆ ಬರೋಬ್ಬರಿ 377 ಮಂದಿ ಮಾತ್ರ.

Advertisement

ಹೌದು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆಯ ನೋಂದಣಿ ಕಾರ್ಯ ಜಿಲ್ಲಾದ್ಯಂತ ಕುಸಿತಗೊಂಡಿದ್ದು, ಒಂದಡೆ ಕಳೆದ ವರ್ಷದ ವಿಮೆ ಹಣ ಕೈ ಸೇರದ ಹಿನ್ನೆಲೆಯಲ್ಲಿ ಬೆಳೆ ವಿಮೆಗೆ ರೈತರು ನಿರಾಸಕ್ತಿ ತೋರಿದ್ದರೆ ಮತ್ತೂಂದಡೆ ಯೋಜನೆಯ ಅರಿವು ಇಲ್ಲದೇ ರೈತರು ಯೋಜನೆಯಿಂದ ಹೊರಗುಳಿಯುವಂತಾಗಿದೆ ಎಂಬ ಮಾತು ಜಿಲ್ಲೆಯ ರೈತಾಪಿ ಜನರಲ್ಲಿ ಕೇಳಿ ಬರುತ್ತಿದೆ.

ಜಿಲ್ಲಾದ್ಯಂತ ಬರೋಬ್ಬರಿ 1.54 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಸಾಗುವಳಿ ಇದ್ದು, ಜಿಲ್ಲೆಯಲ್ಲಿ ಒಟ್ಟು 2,14,355 ರೈತ ಕುಟುಂಬಗಳು ಇದ್ದರೆ ಆ ಪೈಕಿ 1,40,975 ಅತಿ ಸಣ್ಣ ರೈತರು ಹಾಗೂ 45, 637 ಮಂದಿ ಸಣ್ಣ ರೈತರು ಹಾಗೂ 27,743 ಮಂದಿ ಇತರೇ ರೈತರು ಇದ್ದಾರೆ. ಆದರೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ರೈತರು ಇದ್ದರೂ ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆ ನೋಂದಣಿ ಈ ವರ್ಷ ಕುಂಠಿತಗೊಂಡಿರುವುದು ಕೃಷಿ ಇಲಾಖೆ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ.

377 ಮಂದಿ ಮಾತ್ರ ನೋಂದಣಿ: ಮುಂಗಾರು ಆರಂಭಗೊಂಡ ಎರಡು ತಿಂಗಳಾದರೂ ಜಿಲ್ಲೆಯಲ್ಲಿ ಇದುವರೆಗೂ ಪಿಎಂಎಫ್ಬಿವೈ ಯೋಜನೆಗೆ ಕೇವಲ 377 ಮಂದಿ ರೈತರು ಮಾತ್ರ ಇದುವರೆಗೂ ನೋಂದಾಯಿಕೊಂಡಿದ್ದು, ಆ ಪೈಕಿ ಬಾಗೇಪಲ್ಲಿ ತಾಲೂಕಿನಲ್ಲಿ 1, ಚಿಕ್ಕಬಳ್ಳಾಪುರ 80. ಚಿಂತಾಮಣಿ ತಾಲೂಕಿನಲ್ಲಿ 32, ಗೌರಿಬಿದನೂರು ತಾಲೂಕಿನಲ್ಲಿ 140, ಗುಡಿಬಂಡೆ ತಾಲೂಕಿನಲ್ಲಿ 43 ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ 81 ಮಂದಿ ರೈತರು ಸೇರಿ ಒಟ್ಟು 377 ಮಂದಿ ರೈತರು ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆಗೆ ತಮ್ಮ ಹೆಸರುಗಳನ್ನು ನೋಂದಾಯಿಸಿರುವುದು ಬಿಟ್ಟರೆ ಜಿಲ್ಲೆಯಲ್ಲಿ ಶೇ.99 ರಷ್ಟು ರೈತರು ಬೆಳೆ ವಿಮಾ ಯೋಜನೆಯಿಂದ ದೂರು ಉಳಿದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಅದರಲ್ಲೂ ಕೃಷಿ ಸಚಿವರು ಜಿಲ್ಲೆಯವರೇ ಆಗಿದ್ದರೂ ಮಹತ್ವದ ಬೆಳೆ ವಿಮೆ ಯೋಜನೆ ಪ್ರಗತಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಸಮರ್ಪಕ ಮಾಹಿತಿ ಕೊರತೆ, ಬ್ಯಾಂಕುಗಳ ನಿರ್ಲಕ್ಷ್ಯದ ಜೊತೆಗೆ ಕೃಷಿ ಇಲಾಖೆ ರೈತರಲ್ಲಿ ಬೆಳೆ ವಿಮೆ ಯೋಜನೆಗಳ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸುವಲ್ಲಿ ವಿಫ‌ಲವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

Advertisement

ಸಚಿವರ ಮಾತಿಗೂ ಕಿಮ್ಮತ್ತಿಲ್ಲ: ಜಿಲ್ಲೆಯಲ್ಲಿ ಬೆಳ ವಿಮೆ ಯೋಜನೆ ಬಗ್ಗೆ ರೈತರಲ್ಲಿರುವ ಗೊಂದಲ ನಿವಾರಿಸಿ ಅವರನ್ನು ಮನವೊಲಿಸಿ ಬೆಳೆ ವಿಮೆ ಯೋಜನೆಗೆ ಹೆಸರು ನೋಂದಾಯಿಸುವಂತೆ ಜಿಲ್ಲಾ ಉಸ್ತುವಾರಿಗಳಾದ ಕೃಷಿ ಸಚಿವರು ಹಲವಾರು ಬಾರಿ ಜಿಪಂ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಒತ್ತಿ ಒತ್ತಿ ಹೇಳಿದ್ದಾರೆ.

ಆದರೆ ಕೃಷಿ ಇಲಾಖೆ ಮಾತ್ರ ಇದುವರೆಗೂ ಬೆಳೆ ವಿಮೆ ವ್ಯಾಪ್ತಿಗೆ ತಂದಿರುವ ರೈತರ ಸಂಖ್ಯೆ ನೋಡಿದರೆ ಕೃಷಿ ಇಲಾಖೆ ಕಾರ್ಯವೈಖರಿ ಗೊತ್ತಾಗುತ್ತದೆ. ಕೃಷಿ ಸಚಿವರ ತವರಿನಲ್ಲಿಯೆ ಬರೀ 140 ಮಂದಿ ರೈತರು ನೋಂದಾಯಿಕೊಂಡಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇರುವ ಬಾಗೇಪಲ್ಲಿ, ಚಿಂತಾಮಣಿಯಲ್ಲಿ ಎರಡಂಕಿ ದಾಟಿಯೇ ಇಲ್ಲ.

ಕಳೆದ ವರ್ಷದ್ದೇ ವಿಮೆ ಬಂದಿಲ್ಲ: ಇನ್ನೂ ಈ ಪರಿ ಬೆಳೆ ವಿಮೆ ನೋಂದಣಿ ಪ್ರಗತಿ ಕುಂಠಿತಕ್ಕೆ ಕಳೆದ ವರ್ಷ ನೋಂದಣಿ ಮಾಡಿದ್ದ ರೈತರಿಗೆ ಇದುವರೆಗೂ ಬೆಳೆ ವಿಮೆ ಪರಿಹಾರ ಕೈ ಸೇರಿಲ್ಲ ಎಂಬ ಆರೋಪ ಜಿಲ್ಲೆಯ ರೈತರಿಂದ ಕೇಳಿ ಬರುತ್ತಿದೆ. ಜಿಲ್ಲೆಯ ರೈತರಿಗೆ ಬೆಳೆ ವಿಮೆ ಕೋಟ್ಯಂತರ ರೂ., ಬಾಕಿ ಇದೆ. ಜೊತೆಗೆ ಬೆಳೆ ವಿಮೆ ಕಂತು ದುಬಾರಿಯಾಗಿ ಎಂಬ ಮಾತು ರೈತರಿಂದ ಕೇಳಿ ಬರುತ್ತಿದೆ.

ಕಳೆದ ವರ್ಷ 24,854 ಮಂದಿ ನೋಂದಣಿ: ಕಳೆದ ವರ್ಷ ವಿವಿಧ ಬೆಳೆ ವಿಮೆ ಯೋಜನೆಗಳಡಿಯಲ್ಲಿ ಜಿಲ್ಲೆಯ ರೈತರು ಬರೋಬ್ಬರಿ 23,854 ಮಂದಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು ಆ ಪೈಕಿ ಬಾಗೇಪಲ್ಲಿ 8,340, ಚಿಕ್ಕಬಳ್ಳಾಪುರ 421, ಚಿಂತಾಮಣಿ 1,388, ಗೌರಿಬಿದನೂರು 7,841, ಗುಡಿಬಂಡೆ 2,895 ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ 3,969 ಮಂದಿ ಸೇರಿ ಒಟ್ಟು 24,854 ಮಂದಿ ರೈತರು ಬೆಳೆ ವಿಮೆ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಈ ವರ್ಷ ಬರೀ 377 ಮಂದಿ ಮಾತ್ರ ಬೆಳೆ ವಿಮೆಗೆ ಹೆಸರು ನೋಂದಾಯಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಬೆಳೆ ವಿಮೆ ಯೋಜನೆ ನೋಂದಣಿ ಬಗ್ಗೆ ಜಿಲ್ಲೆಯ ರೈತರಲ್ಲಿ ಸಾಕಷ್ಟು ಅರಿವು ಮೂಡಿಸಲಾಗಿದೆ. ಕರಪತ್ರಗಳನ್ನು ಹಂಚಲಾಗಿದೆ. ಇದುವರೆಗೂ ಕೇವಲ 377 ಮಂದಿ ರೈತರು ಮಾತ್ರ ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆಗೆ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.
-ಎಲ್‌.ರೂಪ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next