Advertisement

ಸಾತ್ವಿಕ್‌ ರಕ್ಷಣೆಯಲ್ಲಿ ಜಾತಿ, ಭಾಷೆ, ಗಡಿ ಮೀರಿದ ವಾತ್ಸಲ್ಯ

11:49 PM Apr 05, 2024 | Shreeram Nayak |

ವಿಜಯಪುರ: ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್‌ ರಕ್ಷಣ ಕಾರ್ಯಾಚರಣೆ ಬಹು ಸವಾಲಿನದಾಗಿತ್ತು. ಅಪಾಯ ಸಾಧ್ಯತೆ ಹೆಚ್ಚಿದ್ದ ಪರಿಸ್ಥಿತಿಗಳನ್ನೆಲ್ಲ ಸಮರ್ಥವಾಗಿ ಎದುರಿಸಿ ಇಡೀ ಕಾರ್ಯಾಚರಣೆ ಸುಗಮವಾಗಿ ನಡೆದು ಯಶಸ್ವಿ ಫಲಿತಾಂಶ ಸಿಗುವಂತೆ ಮಾಡಿದ್ದು ಆಧುನಿಕ-ಪಾರಂಪರಿಕ ತಂತ್ರಜ್ಞಾನ. ಎಲ್ಲಕ್ಕಿಂತ ಮಿಗಿಲಾಗಿ ಕಲ್ಲು ಒಡೆಯುವ ಹಾಗೂ ಕಲ್ಲಿನ ಕುಸುರಿ ಕೆಲಸ ಮಾಡುವ ಸ್ಥಳೀಯ ಕುಶಲಕರ್ಮಿ ಕಾರ್ಮಿಕರು.

Advertisement

ಲಚ್ಯಾಣ ಕೊಳವೆ ಬಾವಿ ಪ್ರಕರಣದ ಕುರಿತ ಇಡೀ ಕಾರ್ಯಾಚರಣೆ ಹಾಗೂ ಎದುರಿಸಿದ ಸವಾಲುಗಳ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ವಿವರಿಸಿದ್ದು ಹೀಗೆ.

ಮಗು ಕೊಳವೆ ಬಾವಿಗೆ ಬಿದ್ದ ಪ್ರದೇಶ ಕಲ್ಲುಗಳಿಂದ ಕೂಡಿದ ಪ್ರದೇಶವಾಗಿದ್ದು, ಸಾತ್ವಿಕ್‌ ರಕ್ಷಣೆ ಕಾರ್ಯಾಚರಣೆ ಸವಾಲಿನದಾಗಿತ್ತು. ಕೊಳವೆ ಬಾವಿ ಯಿಂದ ಸುಮಾರು 10 ಅಡಿ ದೂರ ದಿಂದ 22 ಅಡಿ ಆಳಕ್ಕೆ ಇಳಿಜಾರು ಮಾದರಿಯಲ್ಲಿ ಸುರಂಗ ಕೊರೆಯುವ ಕಾರ್ಯಾಚರಣೆ ಸಂದರ್ಭದಲ್ಲಿ ಭಾರೀ ಗಾತ್ರದ ಕಲ್ಲುಗಳು ರಕ್ಷಣ ಕಾರ್ಯಕ್ಕೆ ತೊಡಕುಂಟು ಮಾಡಿದ್ದವು.

ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ಸೇವಾ ಸಿಬಂದಿಯಲ್ಲಿದ್ದ ಎಲ್ಲ ಆಧುನಿಕ ಸುಧಾರಿತ ತಂತ್ರಜ್ಞಾನಗಳ ಸಾಧನ ಬಳಸಿದರೂ ಕೆಲವು ಕಡೆಗಳಲ್ಲಿ ಭಾರಿ ಗಾತ್ರದ ಯಂತ್ರಗಳನ್ನು ಬಳಸಿ ಕಲ್ಲುಗಳನ್ನು ಒಡೆಯುವುದು ಮಗುವಿನ ಸುರಕ್ಷೆ ದೃಷ್ಟಿಯಿಂದ ಅಪಾಯ ಎನ್ನುವಂತಿತ್ತು.

ಕಲ್ಲು ಒಡೆಯುವವರ ನೆರವು ಅದರಲ್ಲೂ ಕೊನೆಯ 3 ಅಡಿ ಅತಿ ಸೂಕ್ಷ್ಮವಾಗಿ ಕಾರ್ಯಾಚರಣೆ ನಡೆಸಬೇಕಿತ್ತು. ಯಾಕೆಂದರೆ ಎಳೆಯ ಮಗುವಿಗೆ ಅಪಾಯ ಆಗದಂತೆ ಸುರಕ್ಷೆಗೆ ಆದ್ಯತೆ ನೀಡುವುದು ಮುಖ್ಯವಾಗಿತ್ತು. ಈ ಕೆಲಸಕ್ಕೆ ಯಂತ್ರಗಳಿಗಿಂತ ಸ್ಥಾನಿಕವಾಗಿ ಕಲ್ಲು ಕ್ವಾರಿಗಳಲ್ಲಿ ಕ್ಲಿಷ್ಟಕರ ಸಂದರ್ಭದಲ್ಲಿ ಸುಲಭವಾಗಿ ಕಲ್ಲು ಒಡೆಯುವ ಕುಶಲಕರ್ಮಿ ಕಾರ್ಮಿಕರ ಅಗತ್ಯವಿತ್ತು. ಇದಕ್ಕಾಗಿ ಸ್ಥಳೀಯರಾದ ಅಹಿರಸಂಗದ ಪೈಗಂಬರ್‌ ಮುಲ್ಲಾ, ಲಚ್ಯಾಣದ ರವಿ ಭಜಂತ್ರಿ, ಚೋರಗಿಯ ರಾಮಚಂದ್ರ ಹೊನಕೇರಿ ಇವರಲ್ಲಿನ ಅನುಭವ ಹಾಗೂ ಪರಿಣತಿ ನಮ್ಮ ಯಶಸ್ವಿ ಕಾರ್ಯಾಚರಣೆಯಲ್ಲಿ ಹೆಚ್ಚು ನೆರವಾಯಿತು.

Advertisement

ಈ ಮೂವರೂ 22 ಅಡಿ ಆಳದಲ್ಲಿರುವ ಕೊಳವೆ ಬಾವಿ ಪ್ರದೇಶಕ್ಕೆ ಕಾರ್ಯಾಚರಣೆ ತಂಡ ತಲುಪುವಂತೆ ಸೂಕ್ಷ್ಮವಾಗಿ ಹಾಗೂ ಸುಲಭವಾಗಿ ಕಲ್ಲುಗಳನ್ನು ಒಡೆಯುವ ಕೆಲಸ ಮಾಡಿದರು. ಕೊಳವೆ ಬಾವಿಯ 22 ಅಡಿ ಆಳಕ್ಕೆ ತಲುಪಿದ ಮೇಲೆ ಮಗು ಸುಲಭವಾಗಿ ಕೈಗೆ ಸಿಗುತ್ತಿತ್ತು. ಈ ಹಂತದಲ್ಲಿ ಮಗುವನ್ನು ಕೈಯಿಂದ ಅಥವಾ ಬೇರೆ ಸಾಧನಗಳಿಂದ ಮೇಲೆ ತಳ್ಳುವ ಯೋಜನೆ ಚರ್ಚೆಗೆ ಬಂದಿತ್ತಾದರೂ ಸುರಕ್ಷೆ ಕಾರಣದಿಂದ ಇದನ್ನು ಕೈ ಬಿಟ್ಟು ಸುರಂಗ ಕೊರೆಯುವ ಕೆಲಸಕ್ಕೆ ಮುಂದುವರಿಸಿದೆವು.

ತಮಿಳುನಾಡಿನ ಕುಶಲಕರ್ಮಿಗಳು
ಅಂತಿಮವಾಗಿ 22 ಅಡಿ ಆಳಕ್ಕೆ ಇಳಿಜಾರಿನಿಂದ ನಿಖರವಾಗಿ ಸ್ಥಳ ತಲುಪಿದರೂ ಕಾರ್ಯಾಚರಣೆ ಸದಸ್ಯರು ಕೆಳಗೆ ನಿಂತು ಮಗುವನ್ನು ಹೊರ ತೆಗೆಯುವ ಕೆಲಸಕ್ಕೆ 6-7 ಅಡಿ ಎತ್ತರದ ಸ್ಥಳಾವಕಾಶ ಮಾಡಿಕೊಳ್ಳ ಬೇಕಿತ್ತು. ಇದಾದ ಬಳಿಕ ಎದುರಾದ ಸಮಸ್ಯೆ ದೊಡ್ಡದಾಗಿತ್ತು. ಯಾಕೆಂದರೆ ಮಗುವನ್ನು ಆವರಿಸಿರುವ ಕೊಳವೆ ಬಾವಿಯ ಕಲ್ಲು-ಮಣ್ಣು ಮಿಶ್ರಿತ ಪರಿಸ್ಥಿತಿಯಿಂದ ಸೂಕ್ಷ್ಮವಾಗಿ ಬಿಡಿಸಿ ಕೊಳ್ಳಬೇಕಿತ್ತು. ಆಗ ನೆರವಿಗೆ ಬಂದವರೇ ತಮಿಳುನಾಡಿನ ಕಟ್ಟಡ ನಿರ್ಮಾಣ ಕುಶಲಕರ್ಮಿ ಕಾರ್ಮಿಕರು. ಕನ್ನಡ ನಾಡಲ್ಲಿ ಮಗುವನ್ನು ರಕ್ಷಿಸುವಲ್ಲಿ ತಮಿಳು ಭಾಷಿಕ ಕುಶಲಕರ್ಮಿ ಕಾರ್ಮಿಕರಾದ ಕಲೈಸೆಲ್ವಂ ಹಾಗೂ ರಮೇಶ ನೀಡಿದ ಸೇವೆ ಸ್ಮರಣಾರ್ಹ.

20 ಗಂಟೆ ತಲೆಕೆಳಗಾಗಿದ್ದರೂ
“ಸಾತ್ವಿಕ್‌’ ಆರೋಗ್ಯ ಸ್ಥಿರ: ಡಿಎಚ್‌ಒ
ವಿಜಯಪುರ: ತಲೆ ಕೆಳಗಾಗಿ ಕೊಳವೆ ಬಾವಿಗೆ ಬಿದ್ದು 20 ಗಂಟೆಗಳ ರಕ್ಷಣ ಕಾರ್ಯಾಚರಣೆ ಬಳಿಕ ಪಾರಾದ 13 ತಿಂಗಳ ಮಗು ಸಾತ್ವಿಕ ಆರೋಗ್ಯ ಸಂಪೂರ್ಣ ಸುರಕ್ಷಿತವಾಗಿದೆ. ಅಗತ್ಯವಿರುವ ಎಲ್ಲ ಪರೀಕ್ಷೆ ಹಾಗೂ ಚಿಕಿತ್ಸೆಯ ಬಳಿಕ ಮಗುವಿನಲ್ಲಿ ಕಂಡು ಬಂದ ಸಹಜ ಸ್ಥಿತಿ ನಿಜಕ್ಕೂ ಅದ್ಭುತ ಹಾಗೂ ಅಮೋಘವಾಗಿದೆ.

ಲಚ್ಯಾಣದ ವಿಫಲ ಕೊಳೆವೆ ಬಾವಿಗೆ ಬಿದ್ದ ಬಳಿಕ ಸುರಕ್ಷಿತವಾಗಿ ರಕ್ಷಿಸಲ್ಪಟ್ಟ ಸಾತ್ವಿಕ ಆರೋಗ್ಯದ ಕುರಿತು ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿ ಕಾರಿ ಡಾ| ಬಸವರಾಜ ಬಳ್ಳಾರಿ, ದೊಡ್ಡವರಾಗಿದ್ದರೆ ಈ ಪರಿಸ್ಥಿತಿಯಲ್ಲಿ ಹಾಗೂ ಕಾರ್ಯಚರಣೆ ಬಳಿಕ ಆರೋಗ್ಯದಲ್ಲಿ ಸುರಕ್ಷಿತವಾಗಿ ಇರುವುದು ಅನುಮಾನವಿತ್ತು. ಆದರೆ ಸುರಕ್ಷಿತವಾಗಿ ರಕ್ಷಿಸಲ್ಪಟ್ಟ ಸಾತ್ವಿಕ ಪ್ರಕರಣ ಅದ್ಭುತ ಅನುಭವ ನೀಡಿದೆ. ಹೊರ ಪ್ರಪಂಚದ ಅರಿವೇ ಇಲ್ಲದ ಮುಗ್ಧ ಹಾಗೂ ಅಮಾಯಕ ಮಗುವಾಗಿದ್ದರಿಂದ ಇದು ಸಾಧ್ಯವಾಗಿದೆ. ಜಗತ್ತಿನ ಪರಿವೆ ಇರುವ ದೊಡ್ಡವರಾಗಿದ್ದರೆ ಈ ಫಲಿತಾಂಶ ಸಿಗುವುದು ಕಷ್ಟ ಸಾಧ್ಯವಾಗುತ್ತಿತ್ತು ಎಂದರು.
20 ಗಂಟೆಗಳ ಕಾಲ ಉಪವಾಸವಿದ್ದು, ತಲೆ ಕೆಳಗಾಗಿದ್ದರೂ ಮಗುವಿನ ಆರೋಗ್ಯ ಸ್ಥಿರವಾಗಿ ಇರುವುದಕ್ಕೆ ಮಕ್ಕಳಲ್ಲಿ ಇರುವ ಪ್ರತಿರೋಧ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಇರುವುದೇ ಕಾರಣ ಎಂದರು.

ಕಾರ್ಯಾಚರಣೆ ಹಂತದಲ್ಲಿ ಮಗುವಿನ ದೇಹದ ಬಣ್ಣದಲ್ಲಿ ಬದಲಾವಣೆ ಆಗುತ್ತಿದೆಯೇ ಎಂದು ನಿರಂತ ನಿಗಾ ಇರಿಸಲಾಗಿತ್ತು. ರಕ್ಷಿಸಲ್ಪಟ್ಟ ಬಳಿಕ ರಕ್ಷಿಸಲ್ಪಟ್ಟ ಮಗುವಿಗೆ ಆಂಬ್ಯುಲೆನ್ಸ್‌ನಲ್ಲೇ ಪ್ರಥಮ ಚಿಕಿತ್ಸೆ ಕೊಡಿಸಿದೆವು. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿಗೆ ನಡೆಸಿದ ವಿವಿಧ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಸಾರ್ವಜನಿಕರ ಒತ್ತಡದಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಲ್ಪ ಸಮಯ ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದರೂ ಈಗ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಿದ್ದೇವೆ. ಶನಿವಾರ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಬೀಳ್ಕೊಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next